ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ : ಮತ್ತೊಮ್ಮೆ ಹೈವೊಲ್ಟೈಜ್ ಕದನವಾಗಿ ಗೋಚರಿಸುತ್ತಿರುವ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರ ಸ್ವಾಮಿ ಅವರ ಸ್ಪರ್ಧೆ ಈಗ ಈ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷದ ಉಳಿವಿಗೆ ಅನಿವಾರ್ಯವೇ..? ಹೌದು ಎನ್ನುತ್ತಿದೆ ಈ ಕ್ಷೇತ್ರದ ರಾಜಕೀಯ ಲೆಕ್ಕಚಾರಗಳು…..
ಈ ಲೋಕಸಭೆ ಕ್ಷೇತ್ರದ ವ್ಯಾಪ್ತಿಯಲ್ಲಿ ಮಂಡ್ಯ, ಮದ್ದೂರು,ನಾಗಮಂಗಲ, ಮಳವಳ್ಳಿ, ಕೆ.ಆರ್.ಪೇಟೆ,ಶ್ರೀರಂಗಪಟ್ಟಣ, ಪಾಂಡವಪುರ ಕೆ.ಆರ್.ನಗರ ವಿಧಾನ ಸಭಾ ಕ್ಷೇತ್ರಗಳು ಬರಲಿದ್ದು ಇಲ್ಲಿ ಕೆ.ಆರ್.ಪೇಟೆ ಕ್ಷೇತ್ರವನ್ನು ಬಿಟ್ಟರೆ ಕ್ಷೇತ್ರಗಳು ಕಾಂಗ್ರೇಸ್ ತೆಕ್ಕೆಯಲಿದ್ದು ಪಾಂಡವಪುರ ಕೂಡ ಕೈ ಬೆಂಬಲದಲ್ಲಿದ್ದು ಮುಂದಿನ ದಿನಗಳಲ್ಲಿ ಇಲ್ಲಿ ಜೆಡಿಎಸ್ ಮೇಲೆ ಏಳಲು ಕುಮಾರಸ್ವಾಮಿ ಅವರ ಸ್ಪರ್ಧೆ ಮತ್ತು ಗೆಲುವು ಅನಿವಾರ್ಯತೆಗೆ ಸಿಲುಕಿದೆ.
ಜೆಡಿಎಸ್ ಭದ್ರ ಕೋಟೆಯಲ್ಲಿ ಕಳೆದ ವಿಧಾನ ಸಭೆಯ ಚುನಾವಣೆಯಲ್ಲಿ ಕಾಂಗ್ರೆಸ್ ನೊಂದಿಗೆ ಮೈತ್ರಿ ಮಾಡಿದರು ತಮ್ಮ ಪುತ್ರ ನಿಖಿಲ್ ಅವರು 2 ಲಕ್ಷ ಮತಗಳ ಅಂತರದಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ವಿರುದ್ದ ಸೋತಿದ್ದು ಮತ್ತು ಈ ಬಾರಿಯ ವಿಧಾನ ಸಭೆ ಚುನಾವಣೆಯಲ್ಲಿ ಈ ಲೋಕಸಭೆ ವ್ಯಾಪ್ತಿಯಲ್ಲಿ ಸೋತಿದ್ದು ಕುಮಾರಸ್ವಾಮಿ ಅವರಿಗೆ ನುಂಗಲಾರದ ತುಪ್ಪವಾಗಿದೆ.
ಈಗಾಗಲೇ ಈ ಕ್ಷೇತ್ರದ ಚುನಾವಣೆಗೆ ದಿನಾಂಕ ನಿಗದಿಯಾದ ಹಿನ್ನಲೆಯಲ್ಲಿ ಈ ಕ್ಷೇತ್ರದಲ್ಲಿ ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ಅಭ್ಯರ್ಥಿಯಾಗಲು ನಿಖಿಲ್ , ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಹೆಸರು ಕೇಳಿ ಬಂದಿದ್ದರು ಸಹ ಕಳೆದ ಲೋಕ ಸಭೆ ಚುನಾವಣೆಯಲ್ಲಿ ಅದ ಸೋಲು ಮತ್ತೆ ಆಗ ಬಾರದು ಎನ್ನುವ ಕಾರಣಕ್ಕೆ ಕುಮಾರಸ್ವಾಮಿ ಸ್ಪರ್ದೆಗೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರೇ ಸೂಚನೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಮುಂದಿನ ವಿಧಾನ ಸಭೆ ಚುನಾವಣೆಗೆ ಇನ್ನು ಬರೋಬ್ಬರಿ 4 ವರ್ಷಗಳಿದ್ದು ಅಲ್ಲಿಯ ತನಕ ಈ ವಿಧಾನ ಸಭಾ ಕ್ಷೇತ್ರಗಳ ವ್ಯಾಪ್ತಿಯ ಜೆಡಿಎಸ್ ಅಸ್ಥಿತ್ವ ಉಳಿಯ ಬೇಕಾದರೇ ಸೋತವರಿಗೆ ಶಕ್ತಿ ತುಂಬ ಬೇಕಾದರೇ ಕುಮಾರಸ್ವಾಮಿ ಅವರ ಲೋಕಸಭೆಯ ಚುನಾವಣೆಯಲ್ಲಿ ಗೆಲುವು ಬೇಕಾಗಿರುವುದರಿಂದ ಮಾಜಿ ಸಚಿವರಾದ ಸಿ.ಎಸ್.ಪುಟ್ಟರಾಜು,ಡಿ.ಸಿ.ತಮ್ಮಣ್ಣ,ಮಾಜಿ ಶಾಸಕರಾದ ಸಾ.ರಾ.ಮಹೇಶ್,ಅನ್ನದಾನಿ,ರವಿಂದ್ರ ಶ್ರೀಕಂಠಯ್ಯ, ಸುರೇಶ್ ಗೌಡ, ಶಾಸಕ ಮಂಜುನಾಥ್ ಇವರ ಸ್ಪರ್ದೆಗೆ ಒತ್ತಡ ತಂದಿರುವುದು ಗುಟ್ಟಾಗಿ ಉಳಿದಿಲ್ಲ.
ಈ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಶಾಸಕರಾದ ಡಿ.ರವಿಶಂಕರ್ ಅವರನ್ನು ಹೊರತು ಪಡಿಸಿ ಉಳಿದ ಶಾಸಕರಾದ ಚೆಲುವರಾಯಸ್ವಾಮಿ,ಕದಲೂರು ಉದಯ್, ರವಿ ಕುಮಾರ್ ಗಣಿಗ, ರಮೇಶ್ ಬಂದಿಸಿದ್ದೇಗೌಡ,ನರೇಂದ್ರಸ್ವಾಮಿ ಅವರು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಕುಟುಂಬದೊಂದಿಗೆ ರಾಜಕೀಯ ಜಿದ್ದು ಬೆಳೆಸಿ ಕೊಂಡಿದ್ದು ಕುಮಾರಸ್ವಾಮಿ ಅವರನ್ನು ಹೊರತು ಪಡಿಸಿ ಬೇರೆ ಯಾರು ನಿಂತರು ಅವರನ್ನು ಸೋಲಿಸುವ ಚಾಣಾಕ್ಷತೆ ಇವರಲ್ಲಿ ಇರುವುದರಿಂದ ಕುಮಾರಸ್ವಾಮಿ ಮಂಡ್ಯ ಕ್ಷೇತ್ರಕ್ಕೆ ಜೆಡಿಎಸ್ ಅಭ್ಯರ್ಥಿ ಆಗಬೇಕಾದ ಸ್ಥಿತಿಗೆ ಸಿಲುಕಿದ್ದಾರೆ.
ಈಗಾಗಲೇ ರಾಜ್ಯ ಮತ್ತು ಕೇಂದ್ರ ಗುಪ್ತಚರ ಇಲಾಖೆಯ ನೀಡಿರುವ ವರದಿಯ ಪ್ರಕಾರ ಮಂಡ್ಯ ಕ್ಷೇತ್ರದಲ್ಲಿ ಜೆಡಿಎಸ್ ನಿಂದ ಯಾರೇ ನಿಂತರು ಗೆಲ್ಲುವ ಅವಕಾಶ ಶೇ.50 ರಿಂದ 55 ಅಷ್ಟೆ ಇದ್ದು ಕುಮಾರ ಸ್ವಾಮಿ ಅವರು ನಿಂತರೇ ಮಾತ್ರ 65 ರಿಂದ 70 ಶೇ ಗೆಲುವು ಸಾಧಿಸಲಿದ್ದಾರೆ ಎಂದು ಹೇಳಿರುವುದರಿಂದ ಕುಮಾರಸ್ವಾಮಿ ಅವರು ಈ ಕ್ಷೇತ್ರದಿಂದ ಸ್ಪರ್ದೆ ಖಚಿತ ಎಂದು ಜೆಡಿಎಸ್ ಮೂಲಗಳು ತಿಳಿಸಿವೆ.
ಇದರ ಜೊತಗೆ ಬಿಜೆಪಿ ಚಾಣಾಕ್ಷ ಅಮಿತ್ ಷಾ ಅವರು ಖುದ್ದು ಕುಮಾರಸ್ವಾಮಿ ಅವರಿಗೆ ನೀವೆ ಮಂಡ್ಯ ಕ್ಷೇತ್ರದಿಂದ ನಿಲ್ಲ ಬೇಕು ಎಂದು ಹೇಳಿರುವ ಪರಿಣಾಮವಾಗಿ ಇಲ್ಲಿಂದ ಕುಮಾರಸ್ವಾಮಿ ಅವರೇ ಸ್ಪರ್ದಿಸುತ್ತಾರ ಇಲ್ಲ ರಾಜ್ಯ ರಾಜಕಾರಣದಲ್ಲಿಯೇ ಉಳಿಯುತ್ತಾರಾ..? ಎಂಬುದನ್ನು ಜೆಡಿಎಸ್ ಕಾರ್ಯಕರ್ತರು ಎದುರು ನೋಡುತ್ತಿದ್ದು, ಇದಕ್ಕೆ ಚೆನೈನಲ್ಲಿ ಹೃದಯ ಸಂಬಂಧಿತ ಚಿಕಿತ್ಸೆಗೆ ಒಳಗಾಗಿ ವಿಶ್ರಾಂತಿ ಪಡೆಯುತ್ತಿರುವ ಕುಮಾರಸ್ವಾಮಿ ಅವರು ಇಲ್ಲಿಗೆ ಬಂದ ನಂತರ ತಾವು ಪ್ರಕಟಿಸುವ ತಿರ್ಮಾನವೇ ನಂತರವೇ ಮಂಡ್ಯ ಕ್ಷೇತ್ರಕ್ಕೆ ಯಾರು ಜೆಡಿಎಸ್ ಅಭ್ಯರ್ಥಿ ಯಾರು ಅಗಲಿದ್ದಾರೆ ಎಂಬುದು ತಿಳಿಯಲಿದೆ.
ಸಾ.ರಾ.ಪ್ರಚಾರಕ್ಕೆ ಬರುತ್ತಾರಾ…?
ಮಂಡ್ಯ ಕ್ಷೇತ್ರದ ವ್ಯಾಪ್ತಿಗೆ ಕೆ.ಆರ್.ನಗರ ಕ್ಷೇತ್ರವು ಬರಲಿದ್ದು ಇಲ್ಲಿ ಮಾಜಿ ಸಚಿವ ಸಾ.ರಾ.ಮಹೇಶ್ ಅವರು ಜೆಡಿಎಸ್ ಪರವಾಗಿ ಪ್ರಚಾರಕ್ಕೆ ಬರುತ್ತಾರೋ ಇಲ್ಲವೋ ಎಂಬ ಗೊಂದಲಕ್ಕೆ ಇಲ್ಲಿನ ಜೆಡಿಎಸ್ ಕಾರ್ಯಕರ್ತರು ಒಳಗಾಗಿದ್ದಾರೆ.
ಈ ಬಾರಿಯ ವಿಧಾನ ಸಭಾ ಚುನಾವಣೆಯಲ್ಲಿ ಸೋತ ನಂತರ ಕೆ.ಆರ್.ನಗರ ಕ್ಷೇತ್ರದಲ್ಲಿ ಹೆಚ್ಚಾಗಿ ಕಾಣಿಸಿ ಕೊಳ್ಳದ ಸಾ.ರಾ.ಮಹೇಶ್ ಅವರು ಲೋಕಸಭೆ ಚುನಾವಣೆ ಘೋಷಣೆ ಅದರು ಸಹ ಇದುವರಗೂ ಒಂದೇ ಒಂದು ಸಲ ಪಕ್ಷದ ಕಾರ್ಯಕರ್ತರ ಸಭೆ ನಡೆಸಲು ಮುಂದಾಗದೇ ಇರುವುದರಿಂದ ಜೆಡಿಎಸ್ ಪಕ್ಷದ ಕಾರ್ಯಕರ್ತರು ಮುಂದೇನು ಮಾಡುವುದು ಎಂದು ಸಾಕಷ್ಟು ಗೊಂದಲಕ್ಕೆ ಒಳಗಾಗಿ ಇಕ್ಕಟ್ಟಿಗೆ ಸಿಲುಕಿದ್ದಾರೆ.
ರವಿಶಂಕರ್ ಪ್ರತಿ ತಂತ್ರ
ಈ ಬಾರಿ ನಡೆಯುವ ಲೋಕಸಭೆಯ ಚುನಾವಣೆಯು ಈ ಕ್ಷೇತ್ರದ ಪ್ರತಿಯೊಬ್ಬ ಕಾಂಗ್ರೇಸ್ ಶಾಸಕರಿಗೂ ಪ್ರತಿಷ್ಠೆಯಾಗಿದ್ದು, ಈ ಹಿನ್ನಲೆಯಲ್ಲಿ ಹಾಲಿ ಕೆ.ಆರ್.ನಗರದ ಶಾಸಕ ಡಿ.ರವಿಶಂಕರ್ ಕೂಡ ತಾವು ಪಡೆದ ಲೀಡ್ ಅನ್ನು ಕಾಂಗ್ರೇಸ್ ಅಭ್ಯರ್ಥಿ ಸ್ಟಾರ್ ಚಂದ್ರು ಅವರಿಗೆ ಕೊಡಿಸಲು ತಮ್ಮದೇ ತಂತ್ರ ರೂಪಿಸುತ್ತಿದ್ದು ಈಗಾಗಲೇ ಕ್ಷೇತ್ರಕ್ಕೆ ಕಾಂಗ್ರೇಸ್ ಅಭ್ಯರ್ಥಿ ಸ್ಟಾರ್ ಚಂದ್ರು ಅವರನ್ನು ಕರೆಸಿ ಕೈ ಕಾರ್ಯಕರ್ತರಿಗೆ ಪರಿಚಯ ಮಾಡಿಸುವ ಕಾರ್ಯಕ್ರಮವನ್ನು ಮಾಡಿದ್ದು ಮುಂದೆ ತಮ್ಮ ಗೆಲುವಿನಂತೆ ಪಡೆದ ಮತಗಳನ್ನು ಸ್ಟಾರ್ ಚಂದ್ರು ಅವರಿಗೆ ಕೊಡಿಸಲು ತಯಾರಿ ನಡೆಸಿದ್ದು ಇದಕ್ಕೆ ಇವರ ತಂದೆ ದೊಡ್ಡಸ್ವಾಮೇಗೌಡ ಸಾಥ್ ನೀಡಿದ್ದಾರೆ.