ಬೆಂಗಳೂರು: ‘ಮೈಸೂರು ಉದಯಗಿರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಹಲೀಂ ಸಾದಿಯಾ ಮದರಸಾವನ್ನು ಮಸೀದಿಯಾಗಿ ಪರಿವರ್ತಿಸುವ ಚಟುವಟಿಕೆ ನಡೆಯುತ್ತಿವೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ದಶಕಗಳಿಂದ ಮುಂದುವರಿದಿರುವ ವಿವಾದವನ್ನು ಬಗೆಹರಿಸಲು ಹೋದರೆ ಕಾನೂನು ಸುವ್ಯವಸ್ಥೆ ಹದಗೆಡುತ್ತದೆ ಎಂಬ ಕಾರಣ ಮುಂದೊಡ್ಡಿ ಸಮಸ್ಯೆ ಪರಿಹರಿಸದೇ ಇರುವ ನಿಮ್ಮ ನಡೆ ಒಪ್ಪತಕ್ಕದ್ದಲ್ಲ ಎಂದು ಹೈಕೋರ್ಟ್ ಮೈಸೂರು ಜಿಲ್ಲಾಧಿಕಾರಿಯನ್ನು ತರಾಟೆಗೆ ತೆಗೆದುಕೊಂಡಿದೆ.
‘ಮಸ್ಟಿದ್ ಎ ಸಿದ್ದಿಖಿ ಅಕ್ಟರ್ ಟ್ರಸ್ಟ್ ಸಲ್ಲಿಸುವ ಮನವಿ ಪರಿಗಣಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರು ನೀಡಿರುವ ಆದೇಶ ಪಾಲನೆ ಮಾಡಲು ಸರ್ಕಾರ ವಿಫಲವಾಗಿದೆ’ ಎಂದು ಆರೋಪಿಸಿ ಗಾಯತ್ರಿಪುರಂ ಎರಡನೇ ಹಂತದಲ್ಲಿರುವ ಹಲೀಂ ಸಾದಿಯಾ ಶೈಕ್ಷಣಿಕ ಸಂಸ್ಥೆ ಮತ್ತು ಮಸ್ಟಿದ್ ಎ ಸಿದ್ದಿಖಿ ಅಕ್ಟರ್ ಟ್ರಸ್ಟ್‌ನ ಅಧಿಕೃತ ಪ್ರತಿನಿಧಿ ಮುನಾವರ್ ಪಾಶ ಬಿನ್ ಅಬ್ದುಲ್ ವಹೀದ್ ಅವರು ಸಲ್ಲಿಸಿರುವ ಸಿವಿಲ್. ನ್ಯಾಯಾಂಗ ನಿಂದನೆ ಅರ್ಜಿಯನ್ನು ನ್ಯಾಯಮೂರ್ತಿ ಕೆ.ಸೋಮಶೇಖರ್ ನೇತೃತ್ವದ ವಿಭಾಗೀಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು.
ವಿಚಾರಣೆ ವೇಳೆ ಅರ್ಜಿದಾರರ ಪರ ಹೈಕೋರ್ಟ್ ವಕೀಲ ಮೊಹಮದ್ ತಾಹೀರ್, ‘ಸರ್ಕಾರ ಸಬೂಬು ಹೇಳಿ ಬೇಕೆಂದೇ ಸಮಸ್ಯೆ ಇತ್ಯರ್ಥಕ್ಕೆ ಮನಸ್ಸು ಮಾಡುತ್ತಿಲ್ಲ’ ಆರೋಪಿಸಿದರು.
ಇದನ್ನು ಅಲ್ಲಗಳೆದ ಹೆಚ್ಚುವರಿ ಅಡ್ವಕೇಟ್ ಜನರಲ್ ಸಿ.ಎಸ್.ಪ್ರದೀಪ್ ಮತ್ತು ಸರಕಾರದ ಪರ ವಕೀಲೆ ನಮಿತಾ ಮಹೇಶ್, ಇದೊಂದು ದಶಕಗಳಿಂದ ನೆನೆಗುದಿಗೆ ಬಿದ್ದಿರುವ ವಿಷಯ. ಇದಕ್ಕೆ ಸಂಬಂಧಿಸಿದಂತೆ ನಡೆದ ಗಲಭೆಯಿಂದ 10 ಜನ ಮೃತಪಟ್ಟಿದ್ದಾರೆ. ಗಂಭೀರವಾದ 64 ಕ್ರಮಿನಲ್ ಪ್ರಕರಣ ದಾಖಲಾಗಿದೆ ಎಂದು ವಸ್ತು ಸ್ಥಿತಿಯನ್ನು ಪೀಠಕ್ಕೆ ವಿವರಿಸಿದರು.
ವಾದ ಆಲಿಸಿದ ನ್ಯಾಯಪೀಠ ವಿಚಾರಣೆಯಲ್ಲಿ ಖುದ್ದು ಹಾಜರಿದ್ದ ಮೈಸೂರು ಡಿಸಿ ಜಿ.ಲಕ್ಷ್ಮೀಕಾಂತ ರೆಡ್ಡಿ ಮತ್ತು ಮೈಸೂರು ನಗರ ಪೊಲೀಸ್ ಎಸಿಪಿ ಕೆ.ರಾಜೇಂದ್ರ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡಿತು.
ಯಥಾ ಸ್ಥಿತಿ ಕಾಪಾಡುವ ಆದೇಶವನ್ನೇ ಮುಂದುವರೆಸಿಕೊಂಡು ಹೋಗುತ್ತೇವೆ ಎನ್ನುವುದಾದರೆ ನೀವು ಇರುವುದಾದರೂ ಯಾತಕ್ಕೆ? ಕಾನೂನು ಸುವ್ಯವಸ್ಥೆ ಪಾಲಿಸಲು ಕಷ್ಟ ಎನ್ನುವ ನೀವು ಮುಖ್ಯಮಂತ್ರಿ ತವರು ಜಿಲ್ಲೆಯಲ್ಲೇ ಇಂತಹ ಸಮಸ್ಯೆ ಬಗೆಹರಿಸಲಿಲ್ಲ ಎಂದರೆ ಇನ್ಯಾವ ಜಿಲ್ಲೆಯ ಸಮಸ್ಯೆ ಬಗೆಹರಿಸಬಲ್ಲಿರಿ? ಜಿಲ್ಲಾಧಿಕಾರಿ ಹುದ್ದೆ ಎಂದರೆ ಅದೇನು ಎಂಜಾಯ್ ಮಾಡುವುದಕ್ಕೆ ಇದೆಯಾ?’ ಎಂದು ಕಿಡಿ ಕಾರಿತು.
ಇದಕ್ಕೆ ಲಕ್ಷ್ಮೀಕಾಂತ ರೆಡ್ಡಿ ‘ಸಮಸ್ಯೆ ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗಿದೆ’ ಎಂದು ಸಮಜಾಯಿಷಿ ನೀಡಿದರು. ಈ ಮಾತಿಗೆ ದನಿಗೂಡಿಸಿದ ಪ್ರದೀಪ್, ಶಾಂತಿ ಸಭೆ ನಡೆಸಿದರೆ ಸಭೆಯಲ್ಲಿ ಭಾಗವಹಿಸಿದ್ದವರನ್ನು ಗುರಿ ಮಾಡಲಾಗುತ್ತದೆ. ಹತ್ಯೆಗಳು ನಡೆಯುತ್ತವೆ. ಇದರಲ್ಲಿ ಎಡರು ಕೋಮಿನ ಜನರಿಗೂ ಅಪಾಯ ಇದೆ ಎಂಬ ಆತಂಕ ವ್ಯಕ್ತಪಡಿಸಿದರು
ವಾದ-ಪ್ರತಿವಾದ ನ್ಯಾಯಪೀಠ, ‘ಕೂಡಲೇ ಶಾಂತಿ ಸಭೆ ನಡೆಸಿ . ಮುಂದಿನ ವಿಚಾರಣೆಯಲ್ಲಿ ಅದರ ವರದಿ ಸಲ್ಲಿಸಿ’ ಎಂದು ತಾಕೀತು ಮಾಡಿ ವಿಚಾರಣೆಯನ್ನು ಏಪ್ರಿಲ್ 3 ಕ್ಕೆ ಮುಂದೂಡಿತು.