ನವದೆಹಲಿ : ಚಂದ್ರಯಾನ-3 ಮೂಲಕ ಇಡೀ ವಿಶ್ವವೇ ಭಾರತದತ್ತ ತಿರುಗಿ ನೋಡುವಂತೆ ಮಾಡಿದ್ದ ಇಸ್ರೋ ಈಗ ಮತ್ತೊಂದು ಇತಿಹಾಸ ಬರೆಯಲು ಸಜ್ಜಾಗಿದೆ. 2027ಕ್ಕೆ ಮಾನವ ಸಹಿತ ಗಗನಯಾನಕ್ಕೆ ಇಸ್ರೋ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ಇಸ್ರೋ ಅಧ್ಯಕ್ಷ ವಿ.ನಾರಾಯಣ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2027ಕ್ಕೆ ಮಾನವ ಸಹಿತ ಗಗನಯಾನಕ್ಕೆ ಇಸ್ರೋ ಸಿದ್ಧತೆ ನಡೆಸಿದೆ. ಗಗನಯಾನಿಗಳ ಸುರಕ್ಷತಾ ದೃಷ್ಟಿಯಿಂದ ಸಾಕಷ್ಟು ಮುನ್ನೆಚ್ಚರಿಕೆ ತೆಗೆದುಕೊಳ್ಳಲಾಗುತ್ತಿದೆ. ತುರ್ತು ಸಂದರ್ಭಗಳಿಂದ ಬಾಹ್ಯಾಕಾಶಯಾನವು ವಿಫಲಗೊಂಡರೆ, ಆಂತರಿಕ್ಷ ನೌಕೆಯಲ್ಲಿನ ಕ್ರೂ ಮಾಡ್ಯೂಲ್ನಿಂದ ಗಗನಯಾನಿಗಳನ್ನು ಕಾಪಾಡಬಹುದು. ಸುರಕ್ಷಿತವಾಗಿ ಪಾರುಮಾಡುವ ಕ್ರೂ ಎಸ್ಕೇಪ್ ಸಿಸ್ಟಮ್ ಸೇರಿ ಎಲ್ಲವನ್ನೂ ಅತ್ಯಂತ ಎಚ್ಚರಿಕೆಯಿಂದ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.
ಭಾರತವು 2035ರ ವೇಳೆಗೆ ತನ್ನದೇ ಆದ ಬಾಹ್ಯಾಕಾಶ ನಿಲ್ದಾಣವನ್ನು ಸ್ಥಾಪಿಸಲಿದೆ. ವಿಕಸಿತ ಭಾರತ್ 2047 ಅಡಿಯಲ್ಲಿ ಇಸ್ರೋದಿಂದ ಇಎಸ್ಟಿಐಸಿ 2025 ಕಾನ್ ಕ್ಲೇವ್ ಗೆ ತಯಾರಿ ನಡೆದಿದೆ. ನವೆಂಬರ್ 3 ರಿಂದ 5 ರವರೆಗೆ ದೆಹಲಿಯಲ್ಲಿ ಕಾರ್ಯಕ್ರಮ ನಡೆಯಲಿದ್ದು, ಪ್ರಧಾನಿ ಮೋದಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ ಎಂದಿದ್ದಾರೆ.
ಈಗಾಗಲೇ ಶೇ.90ರಷ್ಟು ಎಲ್ಲವೂ ಪೂರ್ಣಗೊಂಡಿದ್ದು, ಇನ್ನೂ ಕೊನೆಯ ಹಂತದ ಸಿದ್ಧತೆ ಬಾಕಿಯಿದೆ ಎಂದು ಮಾಹಿತಿ ನೀಡಿದ್ದಾರೆ.



