ಜನಸಾಮಾನ್ಯರಿಗೆ ಕಾನೂನು ಅರಿವು ಮತ್ತು ನೆರವು ಕಲ್ಪಿಸಿ: ಹೊಸಮನಿ ಪುಂಡಲೀಕ
ಮಡಿಕೇರಿ: ಸಮಾಜದಲ್ಲಿನ ಎಲ್ಲಾ ಬಡವರು ಮತ್ತು ಅಸಹಾಯಕರಿಗೆ ಕಾನೂನಿನ ಅರಿವು ಮತ್ತು ನೆರವನ್ನು ಕಲ್ಪಿಸುವಂತಾಗಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ ನ್ಯಾಯಾಧೀಶರಾದ ಹೊಸಮನಿ ಪುಂಡಲೀಕ ಅವರು ಕರೆ ನೀಡಿದ್ದಾರೆ.
ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಹಾಗೂ ವಕೀಲರ ಸಂಘ ಇವರ ಜಂಟಿ ಆಶ್ರಯದಲ್ಲಿ ನಗರದ ಜಿಲ್ಲಾ ನ್ಯಾಯಾಲಯದಲ್ಲಿ ಅರೆಕಾಲಿಕ ಕಾನೂನು ಸ್ವಯಂ ಸೇವಕರಿಗೆ ಕಾನೂನು ಅರಿವು ಮತ್ತು ತರಬೇತಿ ಕಾರ್ಯಕ್ರಮ ಹಾಗೆಯೇ ಗುರುತಿನ ಚೀಟಿಯನ್ನು ಶುಕ್ರವಾರ ವಿತರಿಸಿ ಅವರು ಮಾತನಾಡಿದರು.
ರಾಷ್ಟ್ರದ ಸಂವಿಧಾನದಲ್ಲಿ ಪ್ರತಿಯೊಬ್ಬರಿಗೂ ಬದುಕುವ ಹಕ್ಕಿದೆ. ಆ ನಿಟ್ಟಿನಲ್ಲಿ ಮೂಲಭೂತ ಹಕ್ಕುಗಳ ಜೊತೆಗೆ ಕರ್ತವ್ಯ ತಿಳಿಸಲಾಗಿದೆ. ಆದ್ದರಿಂದ ಮೂಲಭೂತ ಹಕ್ಕು ಪಡೆಯುವುದರ ಜೊತೆಗೆ ಕರ್ತವ್ಯಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಆ ದಿಸೆಯಲ್ಲಿ ಕಾನೂನು ಸೇವಾ ಪ್ರಾಧಿಕಾರವು ಕಾನೂನಿನ ಅರಿವು ಮತ್ತು ನೆರವು ನೀಡುತ್ತಿದೆ ಎಂದರು.
ಕಾನೂನು ಮಹತ್ವವನ್ನು ಪ್ರತಿಯೊಬ್ಬರೂ ತಿಳಿದುಕೊಂಡು ಕಟ್ಟಕಡೆಯ ವ್ಯಕ್ತಿಗೂ ಸಹ ಕಾನೂನಿನ ಬಗ್ಗೆ ಅರಿವಿನ ಮಾಹಿತಿ ನೀಡುವಂತಾಗಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ ನ್ಯಾಯಾಧೀಶರು ಸಲಹೆ ಮಾಡಿದರು.
ಕಾನೂನಿನಲ್ಲಿ ಎರಡು ರೀತಿ ಇದ್ದು, ಜನರೇ ಮಾಡಿರುವ ಕಾನೂನುಗಳು ಮತ್ತು ನಿಸರ್ಗ ಮಾಡಿದ ಕಾನೂನು ಆಗಿದೆ. ಎರಡನ್ನು ಪಾಲಿಸಿದ್ದಲ್ಲಿ ಆರೋಗ್ಯಯುತ ಸಮಾಜ ನಿರ್ಮಾಣ ಮಾಡಬಹುದಾಗಿದೆ. ಆ ನಿಟ್ಟಿನಲ್ಲಿ ಕಾನೂನುಗಳನ್ನು ಪಾಲಿಸಿ ಅಸ್ತಿತ್ವವನ್ನು ಉಳಿಸಿಕೊಂಡು ಉತ್ತಮ ಬದುಕು ಕಟ್ಟಿಕೊಳ್ಳಲು ಪ್ರಯತ್ನಿಸಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ ನ್ಯಾಯಾಧೀಶರಾದ ಹೊಸಮನಿ ಪುಂಡಲೀಕ ಅವರು ವಿವರಿಸಿದರು.
ಸಮಾಜದಲ್ಲಿನ ಅಸಹಾಯಕರ ಬದುಕು ಸುಧಾರಣೆಯಾಗಬೇಕು. ಆ ನಿಟ್ಟಿನಲ್ಲಿ ಅರೆಕಾಲಿಕ ಕಾನೂನು ಸ್ವಯಂ ಸೇವಕರು ತಮ್ಮ ಸುತ್ತಲಿನ ವ್ಯಾಪ್ತಿಯಲ್ಲಿ ಕಾನೂನಿನ ಬಗ್ಗೆ ಮಾಹಿತಿ ಮತ್ತು ಮಾರ್ಗದರ್ಶನ ನೀಡುವಂತಾಗಬೇಕು ಎಂದರು.
‘ಸಮಾಜದಲ್ಲಿ ಇಂದಿಗೂ ಸಹ ಹಲವು ಕುಟುಂಬಗಳು ಸರ್ಕಾರದ ಸೌಲಭ್ಯ ಪಡೆದುಕೊಳ್ಳಲು ತಿಣುಕಾಡುತ್ತಿವೆ. ಆದ್ದರಿಂದ ಇಂತಹ ಕುಟುಂಬಗಳಿಗೆ ಅಗತ್ಯ ಕಾನೂನು ನೆರವು ನೀಡುವಂತಾಗಬೇಕು. ಸಮಾಜವು ಅನಾಗರಿಕತೆಯಿಂದ ನಾಗರಿಕತೆಯ ಎಡೆಗೆ ಮುನ್ನಡೆಯಬೇಕು. ಆ ನಿಟ್ಟಿನಲ್ಲಿ ಅರೆಕಾಲಿಕ ಕಾನೂನು ಸ್ವಯಂ ಸೇವಕರು ಸಮಾಜದ ಅಭಿವೃದ್ಧಿ ಮತ್ತು ಬೆಳವಣಿಗೆಗೆ ಕೈಜೋಡಿಸಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ ನ್ಯಾಯಾಧೀಶರು ಸಲಹೆ ಮಾಡಿದರು.’
ಮಡಿಕೇರಿ ವಕೀಲರ ಸಂಘದ ಅಧ್ಯಕ್ಷರಾದ ಎಂ.ಎ.ನಿರಂಜನ್ ಅವರು ಮಾತನಾಡಿ ಕಾನೂನು ಸ್ವಯಂ ಸೇವಕರು ಕಾನೂನು ಸೇವಾ ಪ್ರಾಧಿಕಾರ ಮತ್ತು ಜನರ ನಡುವೆ ಕೊಂಡಿಯಾಗಿ ಕೆಲಸ ಮಾಡುವಂತಾಗಬೇಕು ಎಂದು ತಿಳಿಸಿದರು.
ಕಟ್ಟಕಡೆಯ ನಾಗರಿಕರಿಗೆ ನ್ಯಾಯ ದೊರಕಿಸುವುದು ಅತೀ ಮುಖ್ಯವಾಗಿದೆ. ಜನ ಸಾಮಾನ್ಯರು ಹಾಗೂ ಸೌಲಭ್ಯಗಳಿಂದ ವಂಚಿತರಾದವರಿಗೆ ಅವಕಾಶಗಳನ್ನು ಕಲ್ಪಿಸುವಂತಾಗಬೇಕು ಮತ್ತು ಕಾನೂನಿನ ಬಗ್ಗೆ ಅರಿವು ಜಾಗೃತಿ ಉಂಟುಮಾಡಬೇಕು ಎಂದರು.
ಸಮಾಜದಲ್ಲಿನ ಎಲ್ಲರಿಗೂ ಸರ್ಕಾರದ ಸೌಲಭ್ಯಗಳನ್ನು ತಲುಪಿಸಿ, ಆರೋಗ್ಯಯುತ ಸಮಾಜ ನಿರ್ಮಾಣ ಮಾಡುವುದು ಆದ್ಯತೆಯಾಗಬೇಕು. ಕಾನೂನು ದುರ್ಬಳಕೆ ಆಗದಂತೆ ಗಮನಹರಿಸುವುದು ಅತ್ಯಗತ್ಯ ಎಂದು ಎಂ.ಎ.ನಿರಂಜನ್ ಅವರು ಪ್ರತಿಪಾದಿಸಿದರು.
‘ಕುಟುಂಬ ಅಥವಾ ಇನ್ನಿತರ ಯಾವುದೇ ರೀತಿಯ ಭಿನ್ನಾಭಿಪ್ರಾಯ/ ಸಮಸ್ಯೆಗಳನ್ನು ಮಾತುಕತೆಯ ಮೂಲಕ ಪರಿಹರಿಸಿಕೊಳ್ಳಲು ಮುಂದಾಗಬೇಕು. ಸಣ್ಣಪುಟ್ಟ ವಿಚಾರಗಳಿಗೆ ನ್ಯಾಯಾಲಯಕ್ಕೆ ಹೋಗಬಾರದು. ಸಾಧ್ಯವಾದಷ್ಟು ತಳಹಂತದಲ್ಲಿಯೇ ಪರಿಹರಿಸಿಕೊಳ್ಳಲು ಪ್ರಯತ್ನಿಸಬೇಕು. ಧ್ವೇಷ ಸಾಧಿಸುವುದರಿಂದ ಯಾರಿಗೂ, ಯಾವುದೇ ರೀತಿಯ ಪ್ರಯೋಜನ ಇಲ್ಲ ಎಂದು ಮಡಿಕೇರಿ ವಕೀಲರ ಸಂಘದ ಅಧ್ಯಕ್ಷರು ಒತ್ತಿ ಹೇಳಿದರು.’
ಇತ್ತೀಚಿನ ದಿನಗಳಲ್ಲಿ ಮಡಿಕೇರಿ ನ್ಯಾಯಾಲಯಕ್ಕೆ ತಿಂಗಳಿಗೆ 10 ರಿಂದ 15 ವಿಚ್ಛೇದನ ಪ್ರಕರಣಗಳು ದಾಖಲಾಗುತ್ತಿವೆ. ಈ ಹಿಂದೆ ಒಂದು ವರ್ಷಕ್ಕೆ ಇಷ್ಟು ಪ್ರಕರಣಗಳು(10 ರಿಂದ 15) ದಾಖಲಾಗುತ್ತಿದ್ದವು ಎಂದು ಎಂ.ಎ.ನಿರಂಜನ ಅವರು ಇದೇ ಸಂದರ್ಭದಲ್ಲಿ ತಿಳಿಸಿದರು.
ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶುಭ ಅವರು ಶ್ರೀಸಾಮಾನ್ಯರಿಗೆ ಕಾನೂನು ಸೇವೆ ತಲುಪಿಸುವ ಉದ್ದೇಶದಿಂದ ಕಾನೂನು ಸೇವಾ ಪ್ರಾಧಿಕಾರ ಕೆಲಸ ಮಾಡುತ್ತಿದ್ದು, ಆ ನಿಟ್ಟಿನಲ್ಲಿ ಅರೆಕಾಲಿಕ ಕಾನೂನು ಸ್ವಯಂ ಸೇವಕರು ಕೈಜೋಡಿಸುವಂತಾಗಬೇಕು ಎಂದು ಕೋರಿದರು.
ವಕೀಲರಾದ ಕೆ.ಎಂ.ಮೀನಾ ಕುಮಾರಿ ಅವರು ಅರೆಕಾಲಿಕ ಕಾನೂನು ಸ್ವಯಂ ಸೇವಕರಿಗೆ ಕಾನೂನಿನ ಅರಿವು ಕುರಿತು ಹಾಗೂ ಹಿರಿಯ ನಾಗರಿಕರ ಮತ್ತು ವಿಕಲಚೇತನರ ಸಬಲೀಕರಣ ಇಲಾಖೆ ಅಧಿಕಾರಿ ಕೆ.ಜಿ.ವಿಮಲ ಅವರು ಹಿರಿಯ ನಾಗರಿಕರ ಮತ್ತು ವಿಕಲಚೇತನರ ಸೌಲಭ್ಯ ಬಗ್ಗೆ ಮಾಹಿತಿ ನೀಡಿದರು.
ಒಂದನೇ ಅಪರ ಜಿಲ್ಲಾ ಮತ್ತು ಸೆಷನ್ ನ್ಯಾಯಾಧೀಶರಾದ ಪ್ರಶಾಂತಿ ಜಿ., ಮೂರನೇ ಅಪರ ಜಿಲ್ಲಾ ಮತ್ತು ಸೆಷನ್ ನ್ಯಾಯಾಧೀಶರಾದ ಬಸವರಾಜ ಸಿ.ಕೆ., ಕೌಟುಂಬಿಕ ನ್ಯಾಯಾಲಯದ ಪ್ರಧಾನ ನ್ಯಾಯಾಧೀಶರಾದ ಸುಬ್ರಮಣಿ ಎನ್., ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಸಿಜೆಎಂ. ಎನ್.ಬಿ. ಜಯಲಕ್ಷ್ಮಿ, ಪ್ರಧಾನ ಸಿವಿಲ್ ನ್ಯಾಯಾಧೀಶರು ಮತ್ತು ಜೆಎಂಎಫ್‍ಸಿ ಮುನಿರತ್ನಮ್ಮ ಸಿ.ಎನ್., ಅಪರ ಸಿವಿಲ್ ನ್ಯಾಯಾಧೀಶರು ಮತ್ತು ಜೆಎಂಎಫ್‍ಸಿ ನಾಗೇಶ್ ಎನ್.ಎ, ಕಾನೂನು ಸೇವಾ ಪ್ರಾಧಿಕಾರದ ಆಡಳಿತ ಸಹಾಯಕರಾದ ಜಯಪ್ಪ ಇತರರು ಇದ್ದರು.