ಮೈಸೂರು: ಮೊದಲ ದಿನ ಸಿಕ್ಕಿದ್ದು ಎಸ್.ಎಸ್.ಟಿ. ಟ್ಯಾಕ್ಸ್ ಹಣ. ಎರಡನೇ ದಿನ ಸಿಕ್ಕಿದ್ದು ವೈ.ಎಸ್.ಟಿ. ಟ್ಯಾಕ್ಸ್ ಹಣ ಎಂದು ಐಟಿ ದಾಳಿಯಲ್ಲಿ ಸಿಕ್ಕ ಹಣದ ಬಗ್ಗೆ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಸ್ಫೋಟಕ ಹೇಳಿಕೆ ನೀಡಿದ್ದಾರೆ.
ಐಟಿ ದಾಳಿ ವೇಳೆ ಹಣ ಸಿಕ್ಕವರು ದೊಡ್ಡ ಗುತ್ತಿಗೆದಾರರೇನಲ್ಲ. ಗುತ್ತಿಗೆದಾರನಿಗೂ ವಾಸ್ತು ಶಿಲ್ಪಿಗೂ ಏನು ಸಂಬಂಧ ? ಬೆಂಗಳೂರಿನ ಸಿಎಂ ಮನೆ ನವೀಕರಿಸುತ್ತಿರುವವರು ಯಾರು ? ಮೈಸೂರಿನ ಮನೆಯ ವಾಸ್ತು ಶಿಲ್ಪದ ಕೆಲಸ ಮಾಡುತ್ತಿರುವವರು, ಈ ವಾಸ್ತು ಶಿಲ್ಪಿಗೆ ಯಾರೊಂದಿಗೆ ಹತ್ತಿರವಿದ್ದಾರೆ ? ಎಂದು ಪ್ರಶ್ನಿಸಿದ ಅವರು, ಎಲ್ಲವೂ ತನಿಖೆ ಆಗಬೇಕು ತನಿಖೆಯಾದ್ರೆ ಎಲ್ಲವೂ ಬಯಲಾಗುತ್ತೆ ಎಂದರು.
ಐಟಿ ದಾಳಿ ವೇಳೆ ಸಿಕ್ಕ ಹಣಕ್ಕೆ ಮೈಸೂರಿನ ನಂಟು ಇದೆಯಾ ? ಅದು ಕೂಡ ತನಿಖೆಯಾಗಲಿ. ಪಂಚ ರಾಜ್ಯಗಳ ಎಲೆಕ್ಷನ್ ನಲ್ಲಿ ಹೈಕಮಾಂಡ್ ಹಣ ಕೇಳಿಲ್ಲ ಅಂತಾರೆ. ಕೇಳದೆಯೇ ಇಷ್ಟೊಂದು ಹಣ ಕಲೆಕ್ಷನ್ ಮಾಡ್ತಿದ್ದಾರೆ. ಇನ್ನು ಹೈಕಮಾಂಡ್ ಕೇಳಿದ್ರೆ ಎಷ್ಟೊಂದು ಕಲೆಕ್ಷನ್ ಮಾಡ್ತಿದ್ರು ಎಂದು ಪ್ರಶ್ನಿಸಿದರು.
ರಾಜ್ಯದಲ್ಲಿ ಈಗ ಜಿ.ಎಸ್.ಟಿ ಕಲೆಕ್ಷನ್ ಗಿಂತ ಎಸ್.ಎಸ್.ಟಿ. ಮತ್ತು ವೈ.ಎಸ್.ಟಿ.ಟ್ಯಾಕ್ಸ್ ಕಲೆಕ್ಷನ್ ಜೋರಾಗಿ ನಡೆಯುತ್ತಿದೆ ಎಂದು ಕಿಡಿಕಾರಿದರು.
ರಾಜ್ಯ ಕಂಡ ಅತ್ಯಂತ ಭ್ರಷ್ಟ ಸರಕಾರವಿದು. ಜನ ಭಾರೀ ನಿರೀಕ್ಷೆಯಿಂದ ಇವರನ್ನು ಗೆಲ್ಲಿಸಿದರಲ್ಲ, ಜನರೇ ತಿರುಗಿ ಬೀಳೋ ಕಾಲ ದೂರವಿಲ್ಲ. ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದ್ವಿ. ನುಡಿದಂತೆ ನಡೆದಿದ್ದೇವೆ ಅಂತಾರಲ್ಲ. ರಾಜ್ಯದಲ್ಲಿ ಬೇರೆ ಅಭಿವೃದ್ಧಿ ಕೆಲಸಗಳು ಏನಾದ್ರು ಆಗುತ್ತಿದೆಯಾ? ಹೊಸತಾಗಿ ಗೆದ್ದ ಶಾಸಕರು ಕ್ಷೇತ್ರದ ಕಡೆ ತಲೆ ಹಾಕುತ್ತಿಲ್ಲ. ಜನರ ಪ್ರಶ್ನೆಗೆ ಉತ್ತರಿಸಲು ಆಗುತ್ತಿಲ್ಲ ಅಂತಾ ಗೋಳಾಡುತ್ತಿದ್ದರು ಎಂದು ಹೇಳಿದರು.
ನಾನು ಸತ್ಯ ಹರಿಶ್ಚಂದ್ರ, ಸಿದ್ದ ಪುರುಷ ಅಂತಾ ಹೇಳುವ ಸಿಎಂ ಐಟಿ ದಾಳಿ ಬಗ್ಗೆ ತನಿಖೆ ಮಾಡಿಸಲಿ. ಇವರು ತನಿಖೆ ಮಾಡಿದ್ರೆ ಏನಾಗುತ್ತೆ ಅಂತಾ ನಮಗೂ ಗೊತ್ತು. ರಾಜ್ಯಪಾಲರಿಗೆ ಕೃಷಿ ಇಲಾಖೆ ಅಧಿಕಾರಿಗಳು ಪತ್ರ ಬರೆದ ಪ್ರಕರಣದ ಬಗ್ಗೆ ತನಿಖೆ ಮಾಡಿಸಿದ್ದೀರಲ್ಲ ಏನಾಯಿತು ? ನಾಗಮಂಗಲ್ ಬಸ್ ಕಂಡಕ್ಟರ್ ವಿಷ ಕುಡಿದ ಪ್ರಕರಣ. ಎಲ್ಲೆಲ್ಲಿ ಯಾರ್ಯಾರನ್ನ ಅಡ್ಜೆಸ್ಟ್ ಮಾಡಿಕೊಳ್ತಿದ್ದೀರಾ ಅನ್ನೋದು ನನಗೂ ಗೊತ್ತಿದೆ. ನಾವು ಸತ್ಯಹರಿಶ್ಚಂದ್ರರು ಅಂತಾ ಹೇಳುವವರು ಐಟಿ ದಾಳಿಯಲ್ಲಿ ಸಿಕ್ಕ ಹಣದ ಬಗ್ಗೆ ಹೇಳಲಿ ಎಂದು ಆಗ್ರಹಿಸಿದರು.
ಪಂಡಿತ್ ರಾಜೀವ್ ತಾರಾನಾಥರ ಬಳಿ 3 ಲಕ್ಷ ಲಂಚ ಕೇಳಿದ ಪ್ರಕರಣದ ಕುರಿತು ಪ್ರತಿಕ್ರಿಯಿಸಿ, ಈ ಪ್ರಕರಣದಲ್ಲಿ ಅಧಿಕಾರಿ ಲಂಚ ಕೇಳೋಕೆ ಕಾರಣ ಯಾರು ? ಆ ಅಧಿಕಾರಿ ಭಾರೀ ಲಂಚ ಕೊಟ್ಟು ಇಲ್ಲಿಗೆ ಬಂದಿದ್ದಾನೆ. ಅದಕ್ಕೆ ಲಂಚ ಕೇಳಿದ್ದಾನೆ. ಸರ್ಕಾರದಲ್ಲಿ ಭ್ರಷ್ಟಾಚಾರ ಯಾವ ಹಂತ ತಲುಪಿದೆ ಅನ್ನೋದಕ್ಕೆ ಇದಕ್ಕಿಂತ ಸಾಕ್ಷಿ ಬೇಕಾ ಎಂದು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಪ್ರಶ್ನಿಸಿದರು.