ರಾಮನಗರ: ನಮ್ಮಲ್ಲಿ ಹೆಚ್ಚಿನ ನೀರು ಇದ್ದಾಗ ತಮಿಳುನಾಡಿಗೆ ಬಿಡಬೇಕು. ನಾವು ಬಿಡೋದಿಲ್ಲ ಅಂತಾ ಹೇಳೊಕೆ ಕಷ್ಟ ಇದೆ. ಯಾಕೆಂದ್ರೆ ಕಾವೇರಿ ನೀರಿನ ವಿಚಾರದಲ್ಲಿ ನ್ಯಾಯಮಂಡಳಿ ಇದೆ. ನ್ಯಾಯಮಂಡಳಿ ಸೂಚನೆಯನ್ನು ಫಾಲೋ ಮಾಡಬೇಕು ಎಂದು ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು.
ಕಾವೇರಿ ನೀರು ತಮಿಳುನಾಡಿಗೆ ಹರಿಸುತ್ತಿರುವ ಬಗ್ಗೆ ಮಂಡ್ಯದಲ್ಲಿ ನಡೆಯುತ್ತಿರುವ ಪ್ರತಿಭಟನೆ ಕುರಿತು ಇಂದು ರಾಮನಗರದ ಜಾನಪದ ಲೋಕದಲ್ಲಿ ಪ್ರತಿಕ್ರಿಯೆ ನೀಡಿದ ರಾಮಲಿಂಗಾರೆಡ್ಡಿ, ಕಳೆದ ಬಾರಿ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಯ್ತು. ನೂರಾರು ಟಿಎಂಸಿ ನೀರು ಬಿಟ್ಟಿದ್ದೆವು. ಇದೀಗ ಮಳೆ ಇಲ್ಲ. ಕೆಆರ್ ಎಸ್ ಡ್ಯಾಂ ನಲ್ಲಿ ಕೂಡ ನೀರಿಲ್ಲ. ಮಳೆ ಬರಲಿ ಅಂತಾ ನಾನು ಕೂಡ ಪ್ರಾರ್ಥನೆ ಮಾಡ್ತೇನೆ ಎಂದರು.
ಕನಕಪುರಕ್ಕೆ ಮೆಡಿಕಲ್ ಕಾಲೇಜು ಶಿಫ್ಟ್ ವಿಚಾರವಾಗಿ ಪ್ರತಿಕ್ರಿಯಿಸಿ, ರಾಮನಗರ, ಕನಕಪುರ ಎಲ್ಲಾ ಒಂದೇ. ಡಿಸಿಎಂ, ಸ್ಥಳೀಯ ಲೋಕಸಭಾ ಸದಸ್ಯರು, ಶಾಸಕರೆಲ್ಲಾ ತೀರ್ಮಾನ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ರಾಮನಗರದಲ್ಲಿ ಕೂಡ ಒಂದು ಮೆಡಿಕಲ್ ಕಾಲೇಜು ಮಾಡೋಣ. ಸಹಜವಾಗಿ ಜಿಲ್ಲಾ ಕೇಂದ್ರದಲ್ಲೇ ಮೆಡಿಕಲ್ ಕಾಲೇಜು ಇರಬೇಕು. ಮುಂದಿನ ಬಜೆಟ್ ನಲ್ಲಿ ರಾಮನಗರದಲ್ಲಿ ಕೂಡ ಮೆಡಿಕಲ್ ಕಾಲೇಜು ಕೊಡಿ ಅಂತಾ ಸಿಎಂಗೆ ಮನವಿ ಮಾಡ್ತೇನೆ ಎಂದರು.
ನಾಳೆ ಚಂದ್ರಯಾನ- 3 ಯಶಸ್ವಿಯಾಗಿ ತಲುಪುವ ಕುರಿತು ಪ್ರತಿಕ್ರಿಯಿಸಿ, ನಾಳೆ ಚಂದ್ರಯಾನ ಯಶಸ್ವಿಯಾಗಲಿ ಎಂದು ಹಾರೈಸುತ್ತೇನೆ. ಮುಂದಿನ ದಿನಗಳಲ್ಲಿ ಕೂಡ ಎಲ್ಲದರಲ್ಲೂ ಸಕ್ಸಸ್ ಕಾಣಲಿ. ಎಲ್ಲಾ ವಿಜ್ಞಾನಿಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಕೆಎಸ್ ಆರ್ ಟಿಸಿಯಿಂದ ಲಾರಿ ಸೇವೆ ವಿಚಾರವಾಗಿ ಮಾತನಾಡಿ, ನಮ್ಮಲ್ಲಿ ಡಿಕ್ಕಿ ಇದೆ. ಮೊದಲಿನಿಂದಲೂ ಕಮರ್ಷಿಯಲ್ ಆ್ಯಕ್ಟಿವಿಟೀಸ್ ನಡೆಯುತ್ತಾ ಇತ್ತು. ವರ್ಷಕ್ಕೆ ಯಾರಿಗೋ ಟೆಂಡರ್ ಕೊಡ್ತಾ ಇದ್ರು. ಆ ವರ್ಷಕ್ಕೆ ಸುಮಾರು ನಾಲ್ಕು ಕೋಟಿ ಆಗುತ್ತಿತ್ತು. ಈಗ ನಾವೇ ಮಾಡ್ತಾ ಇರೋದ್ರಿಂದ 30 ಕೋಟಿ ಆಗಲಿದೆ. ನಮ್ಮದೆ ಲಾರಿ ಹಾಕೊಂಡ್ರೆ 100 ಕೋಟಿ ಆಗುತ್ತೆ.ಕೆಎಸ್ ಆರ್ ಟಿಸಿ ಜನರ ಸೇವೆಗೂ ಇದಕ್ಕೂ ಸಂಬಂಧ ಇಲ್ಲ. ಅದೇ ಬೇರೆ ಇದೆ ಬೇರೆ. ಬೇರೆ ಯಾರಿಗೋ ಖಾಸಗಿ ಅವರಿಗೆ ಲಾಭ ಹೊಗುತ್ತಿತ್ತು. ಈಗ ಇದರ ಹಣ ಕೆಎಸ್ ಆರ್ ಟಿಸಿಗೆ ಬರುತ್ತೆ ಎಂದು ತಿಳಿಸಿದರು.
ಕೆಎಸ್ ಆರ್ ಟಿಸಿಗೆ ಲಾಭ ಬರೋದ್ರಿಂದ ಅದು ಜನರಿಗೆ ಬರುತ್ತೆ. ನಮ್ಮ ಬಿಎಂಟಿಸಿನಲ್ಲಿ 10 ಟಿಟಿಎಂಸಿಗಳಿವೆ. ದೊಡ್ಡ ದೊಡ್ಡ ಕಮರ್ಷಿಯಲ್ ಕಟ್ಟಡಗಳನ್ನ ಬಾಡಿಗೆ ಕೊಟ್ಟಿದ್ದೀವಿ. ಇದರಿಂದ ನಮ್ಮ ಸಂಸ್ಥಗೆ ಲಾಭ ಆಗಲಿದೆ ಎಂದು ತಿಳಿಸಿದರು.
ಬಿಜೆಪಿ ಶಾಸಕ ಎಸ್ ಟಿ ಸೋಮಶೇಖರ್ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ಬಿಡುಗಡೆ ವಿಚಾರವಾಗಿ ಮಾತನಾಡಿ, ಸರ್ಕಾರದಲ್ಲಿ ಅಭಿವೃದ್ಧಿಗೆ ಯಾವುದೇ ತೊಂದರೆ ಇಲ್ಲ. ನಾವು ಸ್ಕೀಂ ತಂದಿದ್ದೇವೆ ಅಭಿವೃದ್ದಿಗೆ ಹಣ ಇಲ್ಲ ಅಂತಾ ಬಿಜೆಪಿ ಅವರು ಬೊಬ್ಬೆ ಹೊಡೆಯುತ್ತಾರೆ. ಕಳೆದ 4 ವರ್ಷ ಬಿಜೆಪಿ ಅವರು ಏನು ಕಡಿದು ಕಟ್ಟೆ ಹಾಕಿದ್ರು. ನಾವು ಸ್ಕೀಂ ಕೂಡ ಕೊಡ್ತೇವೆ, ಅಭಿವೃದ್ಧಿ ಕೂಡ ಮಾಡ್ತೇವೆ ಎಂದರು.
ಎಸ್ ಟಿ ಸೋಮಶೇಖರ್ ಕಾಂಗ್ರೆಸ್ ಸೇರ್ತಾರೆ ಎಂದು ಅನುದಾನ ಕೊಟ್ಟಿದ್ದೀರಾ ಎಂಬ ಪ್ರಶ್ನೆಗೆ ಉತ್ತರಿಸಿ, ನಮಗೂ ಹೆಚ್ಚಿನ ಅನುದಾನ ಕೊಟ್ಟಿದ್ದಾರೆ. ಹಿಂದೆ ಬಿಜೆಪಿ ಸರ್ಕಾರ ಇದ್ದಾಗ ಕಾಂಗ್ರೆಸ್ ಶಾಸಕರಿಗೆ ಹಣ ನೀಡಿರಲಿಲ್ಲ. ಆದ್ರೆ ಈ ಬಾರಿ ನಮಗೂ ಕೊಟ್ಟಿದ್ದಾರೆ ಸೋಮಶೇಖರ್ ಅವರಿಗೂ ಕೊಟ್ಟಿದ್ದಾರೆ ಎಂದು ಹೇಳಿದರು.
ಚುನಾವಣಾ ಎದುರಿಸಲು ಬರಿ ಪಕ್ಷ ಇದ್ರೆ ಸಾಕಾಗಲ್ಲ, ವ್ಯಕ್ತಿತ್ವ ಕೂಡ ಇರಬೇಕು. ಚುನಾವಣಾ ಗೆಲ್ಲಬೇಕು ಅಂದ್ರೆ ಪಕ್ಷದ ಜೊತೆ ವ್ಯಕ್ತಿ ಕೂಡ ಮುಖ್ಯ ಹಾಕ್ತಾರೆ. 224 ಕ್ಷೇತ್ರದಲ್ಲಿ ಪಕ್ಷೇತರರು ಎಷ್ಟು ಜನ ಗೆಲ್ತಾರೆ..? ಒಬ್ಬೊಬ್ಬರು ಬಿಟ್ಟರೆ ಉಳಿದವರೆಲ್ಲಾ ವ್ಯಕ್ತಿತ್ವದ ಜೊತೆ ಕೂಡ ಗೆಲ್ತಾರೆ ಎಂದು ತಿಳಿಸಿದರು.