ವರದಿ: ಸತೀಶ್ ಆರಾಧ್ಯ
ಪಿರಿಯಾಪಟ್ಟಣ: ಶಾಲೆಯಲ್ಲಿ ಸದಾ ವಿದ್ಯಾರ್ಥಿಗಳ ಕಲಿಕೆಯಲ್ಲಿ ನಿರತ ಶಿಕ್ಷಕರಿಗೆ ಕ್ರೀಡಾಕೂಟ ಆಯೋಜಿಸಿರುವುದು ಸಂತಸದ ವಿಷಯ ಎಂದು ಕೆಪಿಸಿಸಿ ಸದಸ್ಯ ಆಶ್ರಯ ಸಮಿತಿ ಅಧ್ಯಕ್ಷ ನಿತಿನ್ ವೆಂಕಟೇಶ್ ತಿಳಿಸಿದರು.
ಶಿಕ್ಷಕರ ದಿನಾಚರಣೆ ಅಂಗವಾಗಿ ಪಟ್ಟಣದ ಹೊರವಲಯದ ತಾಲೂಕು ಕ್ರೀಡಾಂಗಣದಲ್ಲಿ ಶಿಕ್ಷಕರಿಗಾಗಿ ಏರ್ಪಡಿಸಿದ್ದ ವಿವಿಧ ಆಟೋಟ ಸ್ಪರ್ಧೆಗಳ ಕ್ರೀಡಾಕೂಟ ಉದ್ಘಾಟಿಸಿ ಅವರು ಮಾತನಾಡಿದರು, ಕ್ರೀಡಾಕೂಟ ಆಯೋಜಿಸಿ ಶಿಕ್ಷಕರಲ್ಲಿ ಆಸಕ್ತಿ ಇರುವ ವಿವಿಧ ಆಟೋಟಗಳ ಪ್ರತಿಭೆ ಹೊರ ತರುವುದು ಉತ್ತಮ ಸಂಗತಿಯಾಗಿದೆ, ಕ್ರೀಡಾಕೂಟಗಳಲ್ಲಿ ಭಾಗವಹಿಸುವುದರಿಂದ ನಮ್ಮಲ್ಲಿನ ದೈಹಿಕ ಹಾಗೂ ಮಾನಸಿಕ ಶಕ್ತಿ ವೃದ್ಧಿಸಿಕೊಳ್ಳಬಹುದು, ಸಮಾಜದಲ್ಲಿ ಶಿಕ್ಷಕರಿಗೆ ಉನ್ನತ ಸ್ಥಾನಮಾನವಿದೆ ತಾಲೂಕಿನ ಶೈಕ್ಷಣಿಕ ಪ್ರಗತಿ ವಿಚಾರದಲ್ಲಿ ನಮ್ಮ ತಂದೆ ಸಚಿವರಾದ ಕೆ.ವೆಂಕಟೇಶ್ ಅವರ ಮಾರ್ಗದರ್ಶನದಲ್ಲಿ ಅವರೊಂದಿಗೆ ನಾನು ಸಹ ಕೈಜೋಡಿಸಿ ನನ್ನ ಕೈಲಾದ ಸಹಾಯ ಮಾಡುವೆ ಎಂದರು.

ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಕೆ.ಎಸ್ ಮಹದೇವಪ್ಪ ಅವರು ಮಾತನಾಡಿ ಪ್ರತಿ ವರ್ಷದಂತೆ ಈ ಬಾರಿಯೂ ಶಿಕ್ಷಕರ ದಿನಾಚರಣೆಯನ್ನು ವಿಶೇಷವಾಗಿ ಆಚರಿಸುವ ಉದ್ದೇಶದಿಂದ ಶಿಕ್ಷಕರಿಗೆ ವಿವಿಧ ಸಾಂಸ್ಕೃತಿಕ ಹಾಗೂ ಕ್ರೀಡಾ ಸ್ಪರ್ಧೆಗಳನ್ನು ಆಯೋಜಿಸಿ ಅವರಲ್ಲಿನ ಪ್ರತಿಭೆ ಹೊರತಂದು ಪ್ರೋತ್ಸಾಹಿಸಲಾಗುತ್ತಿದೆ, ಸಚಿವರಾದ ಕೆ.ವೆಂಕಟೇಶ್ ಹಾಗೂ ಅವರ ಪುತ್ರ ನಿತಿನ್ ವೆಂಕಟೇಶ್ ಅವರು ಶಿಕ್ಷಕರ ಎಲ್ಲಾ ಕಾರ್ಯಕ್ರಮಗಳಿಗೆ ಪ್ರೋತ್ಸಾಹ ನೀಡುತ್ತಿದ್ದು ಎಲ್ಲರ ಪರವಾಗಿ ಧನ್ಯವಾದ ತಿಳಿಸಿ ಮುಂದಿನ ದಿನಗಳಲ್ಲಿ ಶಿಕ್ಷಕರ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಸಂಘಟನಾತ್ಮಕವಾಗಿ ಕಾರ್ಯನಿರ್ವಹಿಸಲಾಗುವುದು ಎಂದರು.

ಈ ಸಂದರ್ಭ ಬಿಇಓ ರವಿಪ್ರಸನ್ನ, ಬಿಆರ್ ಸಿ ಶಿವರಾಜ್, ದೈಹಿಕ ಶಿಕ್ಷಣ ಪರಿವೀಕ್ಷಕ ರಮೇಶ್, ಪತ್ತಿನ ಸಹಕಾರ ಸಂಘ ಅಧ್ಯಕ್ಷ ಶಿವಮೂರ್ತಿ, ವಿವಿಧೋದ್ದೇಶ ಸಹಕಾರ ಸಂಘ ಅಧ್ಯಕ್ಷ ಪರಮಶಿವಯ್ಯ, ಪ್ರೌಢಶಾಲಾ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ನಾಗಶೆಟ್ಟಿ, ಸಹ ಶಿಕ್ಷಕರ ಸಂಘದ ಅಧ್ಯಕ್ಷ ಪಿ.ವಿ ದೇವರಾಜ್, ಮುಖ್ಯೋಪಾಧ್ಯಾಯರ ಸಂಘದ ಅಧ್ಯಕ್ಷ ಈ.ಬಿ ವೆಂಕಟೇಶ್, ಅನುದಾನಿತ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಆರಾಧ್ಯ ಕಿಶೋರ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕಾರ್ಯದರ್ಶಿ ಸೋಮಶೇಖರ್, ವಿವಿಧ ಶಿಕ್ಷಣ ಸಂಘಟನೆಗಳ ನಿರ್ದೇಶಕರು ಪದಾಧಿಕಾರಿಗಳು ತಾಲೂಕಿನ ವಿವಿದೆಡೆಯ ಶಾಲಾ ಶಿಕ್ಷಕರು ಇದ್ದರು.