ಬೆಂಗಳೂರು : ರಾಜ್ಯದಲ್ಲಿ ದಿನ ಬೆಳಗಾದರೆ ನಾಯಕತ್ವ ಬದಲಾವಣೆಯ ಕುರಿತು ಚರ್ಚಿಸುವುದನ್ನು ಬಿಟ್ಟು ನಾಡಿನ ಅಭಿವೃದ್ಧಿ ವಿಚಾರಗಳ ಕಡೆಗೆ ಗಮನ ಹರಿಸುವುದು ಸೂಕ್ತ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.
ಈ ಬಗ್ಗೆ ನಗರದಲ್ಲಿ ಬೆಂಗಳೂರು ವರದಿಗಾರರ ಕೂಟದ ಸುವರ್ಣ ಮಹೋತ್ಸವದ ಡೈರೆಕ್ಟರಿ ಬಿಡುಗಡೆ ಮಾಡಿ ಮಾತನಾಡಿದ ಅವರು, ಕಳೆದ ಹಲವು ಕಾಲದಿಂದ ರಾಜ್ಯದಲ್ಲಿ ಬರೀ ನಾಯಕತ್ವದ ಕುರಿತು ಚರ್ಚೆ ನಡೆಯುತ್ತಿದೆ. ನಾಯಕತ್ವದ ವಿಚಾರವನ್ನು ಕಾಂಗ್ರೆಸ್ ಹೈಕಮಾಂಡ್ ನೋಡಿಕೊಳ್ಳುತ್ತದೆ. ನಾಯಕತ್ವದ ಬದಲಾವಣೆ ಎಂಬುದು ಸಾರ್ವಜನಿಕ ಚರ್ಚೆಯ ವಿಷಯವಾಗಬಾರದು ಎಂದಿದ್ದಾರೆ.
ಮುಂದುವರೆದು, ನಮ ವ್ಯವಸ್ಥೆಯಲ್ಲಿ ಈಗ ಯಾವುದೂ ಹಿಂದಿನಂತಿಲ್ಲ. ಸಾಕಷ್ಟು ಬದಲಾವಣೆಗಳಾಗಿವೆ. ರಾಜಕೀಯ, ಮಾಧ್ಯಮ ರಂಗವೂ ಸೇರಿದಂತೆ ಸಮಾಜದ ಎಲ್ಲಾ ಅಂಗಗಳಲ್ಲೂ ಬದಲಾವಣೆಯಾಗಿದ್ದು, ವ್ಯವಸ್ಥೆ ಸುಗಮವಾಗಿ ಸಾಗಲು ಇಂತಹ ರಂಗ ಈ ರೀತಿ ಕೆಲಸ ಮಾಡಬೇಕಿತ್ತು ಎಂದು ನಾವು ಭಾವಿಸುತ್ತೇವೆ. ಆದರೆ ಅಂದುಕೊಳ್ಳುವುದೇ ಬೇರೆ. ಪರಿಸ್ಥಿತಿಯೇ ಬೇರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ನಂತರ ಹಿರಿಯ ಪತ್ರಕರ್ತ ಹುಣಸವಾಡಿ ರಾಜನ್ ಅವರು ಮಾತನಾಡಿ, ಮಾಧ್ಯಮ ರಂಗಕ್ಕೆಭವಿಷ್ಯವಿಲ್ಲ ಎಂದು ಹಲವರು ಹೇಳುತ್ತಾರೆ. ಆದರೆ ಎಲ್ಲಿಯವರೆಗೆ ಕುತೂಹಲ ಮತ್ತು ಸತ್ಯಶೋಧನೆಯ ಮನಸ್ಸು ಇರುತ್ತದೋ ಅಲ್ಲಿಯವರೆಗೆ ಮಾಧ್ಯಮ ರಂಗ ಅಸ್ತಿತ್ವದಲ್ಲಿರುತ್ತದೆ. ಮಾಧ್ಯಮ ರಂಗದಲ್ಲಿ ಪಲ್ಲಟಗಳಾಗಿರುವುದು ನಿಜ. ಇದನ್ನು ನೋಡಿದರೆ ವಿಷಾದವಾಗುತ್ತದೆ. ಇಂತಹ ಸ್ಥಿತಿಯಲ್ಲಿ ಮಾಧ್ಯಮ ರಂಗಕ್ಕೆ ಚೈತನ್ಯ ನೀಡುವ ಕಾರ್ಯ ಮಾಧ್ಯಮ ಸಂಘಟನೆಗಳಿಂದ ಆಗಬೇಕು ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಬಳಿಕ ಮಾಧ್ಯಮ ಅಕಾಡೆಮಿಯ ಮಾಜಿ ಅಧ್ಯಕ್ಷ ಎಂ.ಸಿದ್ಧರಾಜು, ಹಿರಿಯ ಪತ್ರಕರ್ತ ಬಿ.ಪಿ.ಮಲ್ಲಪ್ಪ, ಮೈ.ಸಿ.ಪಾಟೀಲ್, ಬೆಲಗೂರು ಸಮೀವುಲ್ಲಾ, ಶಾಂತಲಾ ಧರ್ಮರಾಜ್ ವರದಿಗಾರರ ಕೂಟದ ಕಾರ್ಯವೈಖರಿ ಹಾಗೂ ವರದಿಗಾರರ ವೃತ್ತಿ ಕುರಿತು ಮಾತನಾಡಿದರು. ಈ ವೇಳೆ ಸಮಾರಂಭದಲ್ಲಿ ಬೆಂಗಳೂರು ವರದಿಗಾರರ ಕೂಟದ ಸಂಸ್ಥಾಪಕ ಸದಸ್ಯರಾದ ಪ್ರಹ್ಲಾದ್ ಕುಳಲಿ, ಹಿರಿಯ ಪತ್ತಕರ್ತರಾದ ಎಂ.ಸಿದ್ದರಾಜು ಮತ್ತು ಅ.ಮ.ಸುರೇಶ್ ಅವರನ್ನು ಸನ್ಮಾನಿಸಲಾಯಿತು.
ಮಾಜಿ ಸಚಿವ ಕೆ.ಗೋಪಾಲಯ್ಯ, ಉದ್ಯಮಿ ಸ್ಟಾರ್ ಚಂದ್ರು, ಡಿ.ಎಸ್.ವ್ಯಾಕ್ಸ್ ಸಂಸ್ಥೆಯ ಮುಖ್ಯಸ್ಥ ದಯಾನಂದ್, ಮಾಧ್ಯಮ ಅಕಾಡೆಯ ಮಾಜಿ ಅಧ್ಯಕ್ಷರಾದ ಸದಾಶಿವ ಶೆಣೈ ವರದಿಗಾರರ ಕೂಟದ ಅಧ್ಯಕ್ಷ ಆರ್.ಟಿ.ವಿಠ್ಠಲಮೂರ್ತಿ, ಪ್ರಧಾನ ಕಾರ್ಯದರ್ಶಿ ಹೆಚ್.ವಿ.ಕಿರಣ್ ಸೇರಿದಂತೆ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ ಸದಸ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.



