ಪಿರಿಯಾಪಟ್ಟಣ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಮದ್ಯಪಾನ ಮುಕ್ತ ಸಮಾಜಕ್ಕೆ ಪಣತೊಟ್ಟಿರುವುದು ಶ್ಲಾಘನೀಯ ಎಂದು ಇನ್ಸ್ಪೆಕ್ಟರ್ ಕೆ.ವಿ ಶ್ರೀಧರ್ ತಿಳಿಸಿದರು.
ಪಟ್ಟಣದ ರೋಟರಿ ಭವನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಪಿರಿಯಾಪಟ್ಟಣ ಯೋಜನಾ ಕಚೇರಿ ವತಿಯಿಂದ ನಡೆದ ಗಾಂಧಿ ಜಯಂತಿ ಮತ್ತು ನವಜೀವನೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು, ಗಾಂಧಿಜಿಯವರ ಸಂದೇಶಗಳು ಎಂದಿಗೂ ಪ್ರಸ್ತುತವಾಗುತ್ತವೆ, ಮದ್ಯಪಾನದಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ಹಣ ಹೊಂದಿಸಲು ಕ್ರಿಮಿನಲ್ ಕೃತ್ಯದಲ್ಲಿ ತೊಡಗುವ ಪ್ರಕರಣಗಳು ಸಹ ಹೆಚ್ಚಾಗುತ್ತಿದ್ದು ದುಶ್ಚಟಮುಕ್ತ ಸಮಾಜ ನಿರ್ಮಿಸಲು ಶ್ರಮಿಸುತ್ತಿರುವ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಕಾರ್ಯ ಸಮಾಜಕ್ಕೆ ಮಾದರಿಯಾಗಿದೆ ಎಂದರು.
ಸಂಸ್ಥೆಯ ಕೊಡಗು ಜಿಲ್ಲಾ ನಿರ್ದೇಶಕಿ ಲೀಲಾವತಿ ಅವರು ಮಾತನಾಡಿ ಗಾಂಧಿಜಿಯವರ ಮಧ್ಯಪಾನಮುಕ್ತ ಸಮಾಜದ ಆಶಯದಿಂದ ಪ್ರೇರಣೆಯಾಗಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯಿಂದ ಮದ್ಯವರ್ಜನ ಶಿಬಿರಗಳನ್ನು ರಾಜ್ಯಾದ್ಯಾಂತ ಹಮ್ಮಿಕೊಂಡು ಸುಮಾರು 1.20 ಲಕ್ಷ ಮಂದಿ ಮದ್ಯಪಾನಮುಕ್ತ ಜೀವನ ನಡೆಸುತ್ತಿದ್ದಾರೆ,
ಸಮಾಜದಲ್ಲಿ ಕುಡಿತ ಚಟದಿಂದ ಎಷ್ಟೋ ಮಂದಿ ಜೀವನ ಹಾಳುಮಾಡಿಕೊಳ್ಳುತ್ತಿದ್ದಾರೆ ಅದನ್ನು ಪರಿಣಾಮಕಾರಿಯಾಗಿ ತಡೆಯಲು ನಮ್ಮ ಸಂಸ್ಥೆ ಸದಾ ಯತ್ನಿಸುತ್ತಿದೆ ಎಂದರು.
ತಹಶೀಲ್ದಾರ್ ಕುಂ ಇ ಅಹಮದ್ ಅವರು ಮಾತನಾಡಿ ಗಾಂಧೀಜಿ ಮತ್ತು ಲಾಲ್ ಬಹದ್ದೂರ ಶಾಸ್ತ್ರೀ ಯವರ ಆದರ್ಶ ಜೀವನ ನಮಗೆಲ್ಲ ಸ್ಪೂರ್ತಿಯ ಸೆಲೆಯಾಗಿದೆ,
ಧರ್ಮಸ್ಥಳ ಯೋಜನೆಯವರು ಮಾಡುತ್ತಿರುವ ಕಾರ್ಯ ಶ್ಲಾಘನೀಯ ಹಾಗು ಇತರ ಸ್ವಯಂ ಸೇವಾ ಸಂಸ್ಥೆಗಳಿಗೆ ಅನುಕರಣೀಯ ಎಂದರು.
ಸಂಸ್ಥೆಯ ಪಿರಿಯಾಪಟ್ಟಣ ವಲಯ ಯೋಜನಾಧಿಕಾರಿ ಸುರೇಶ್ ಶೆಟ್ಟಿ ಅವರು ಮಾತನಾಡಿ ಧರ್ಮಧಿಕಾರಿಗಳಾದ ವೀರೇಂದ್ರ ಹೆಗಡೆ ಹಾಗೂ ಮಾತೃಶ್ರೀ ಹೇಮಾವತಿ ಅಮ್ಮ ಅವರ ಮಾರ್ಗದರ್ಶನದಲ್ಲಿ ಸಂಸ್ಥೆಯ ವತಿಯಿಂದ ಮಹಿಳಾ ಸಬಲೀಕರಣ ಜೊತೆ ಹಲವು ಸಾಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸಾರ್ವಜನಿಕರಿಗೆ ಅರಿವು ಮೂಡಿಸಲಾಗುತ್ತದೆ ಎಂದರು.
ಜನಜಾಗ್ರತಿ ವೇದಿಕೆ ಜಿಲ್ಲಾ ಉಪಾಧ್ಯಕ್ಷ ಎ.ಟಿ ರಂಗಸ್ವಾಮಿ, ಸದಸ್ಯ ಷಣ್ಮುಖರಾವ್, ಮೈಮುಲ್ ನಿರ್ದೇಶಕ ಎಚ್.ಡಿ ರಾಜೇಂದ್ರ, ಮುಖಂಡ ಎನ್.ಸ್ವಾಮಿ, ಪ್ರಥಮದರ್ಜೆ ಕಾಲೇಜು ಪ್ರಾಂಶುಪಾಲೆ ಅಂಬಿಕಾ, ಪುರಸಭೆ ಸದಸ್ಯ ರವಿ, ಮುತ್ತೂರು ಗ್ರಾ.ಪಂ ಸದಸ್ಯ ನಂದೀಶ್, ಗೀತಾ, ಪದ್ಮ ಇದ್ದರು.
