ಮಂಡ್ಯ: ಕಾಂಗ್ರೆಸ್ ಸರ್ಕಾರದ ಬಂದ ಮೇಲೆ ಮಳೆ ಬರುತ್ತಿಲ್ಲವೆಂದು ಹೇಳಿಕೆ ನೀಡಿದ್ದ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿಗೆ ಕೃಷಿ ಸಚಿವ ಚಲುವರಾಯಸ್ವಾಮಿ ತಿರುಗೇಟು ನೀಡಿದ್ದಾರೆ.
ಈ ಕುರಿತು ಮಾತನಾಡಿದ ಸಚಿವ ಚಲುವರಾಯಸ್ವಾಮಿ, ‘ಪಾಪ ಕುಮಾರಸ್ವಾಮಿ ಸತ್ಯಹರಿಶ್ಚಂದ್ರರು, ಅವರೂ ರಾಜ್ಯದಲ್ಲಿದ್ದಾರೆ. ನಮ್ಮನ್ನ ನೋಡಿ ಮಳೆ ಬರುತ್ತಿಲ್ಲ, ಹೆಚ್.ಡಿಕೆ ನೋಡಿಯಾದ್ರೂ ಮಳೆ ಬರಬೇಕಲ್ವಾ..? ಅವರನ್ನ ನೋಡಿಯಾದರೂ ಬರಲಿ ಅವರು ಬಂದು ಇಲ್ಲಿ ಪೂಜೆ ಮಾಡಲಿ ಹಾಗಾದರೂ ಮಳೆ ಬರಲಿ.
ಅಧಿಕಾರ ನೋಡಿ ಮಳೆ ಬರಲ್ಲ. ಸಿದ್ದರಾಮಯ್ಯ ಇದ್ದಾಗಲೂ ಮಳೆ ಬಂದಿದೆ, ಬರನೂ ಬಂದಿದೆ. ಕುಮಾರಸ್ವಾಮಿ ಇದ್ದಾಗಲೂ ಮಳೆಯೂ ಬಂದಿದೆ, ಬರನೂ ಬಂದಿದೆ. ಯಡಿಯೂರಪ್ಪ ಅವರು ಇದ್ದಾಗಲೂ ಎರಡು ಆಗಿದೆ. ಮಳೆ ಅಧಿಕಾರದಲ್ಲಿ ಕೂತಿರುವವರ ಅದೃಷ್ಟ ನೋಡಿಕೊಂಡು ಮಳೆ ಬರಲ್ಲ. ಪ್ರಕೃತಿಯಲ್ಲಿ ಮಳೆ ನಮ್ಮನ್ನಾ ಕೇಳಿ ಬರೋದಾಗಿದ್ರೆ, ನಿಯಂತ್ರಣ ಮಾಡಿಸಬಹುದಿತ್ತು. ರಾಜಕೀಯ ತೀಟೆ ಬಿಟ್ಟು, ವಾಸ್ತವವಾಗಿ ಜನರ ಸಮಸ್ಯೆಗೆ ಸ್ಪಂದಿಸಬೇಕು. ಲೋಕಸಭಾ ಚುನಾವಣೆ ಇದೆ ಅಂತಾ ಇಲ್ಲ ಸಲ್ಲದ್ದು ಮಾತಾಡಬಾರದು ಎಂದು ಟಾಂಗ್ ನೀಡಿದರು.
ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ವಿರೋಧಿಸಿ ಬಿಜೆಪಿ ಪ್ರತಿಭಟನೆಗೆ ಮುಂದಾದ ಕುರಿತು ಪ್ರತಿಕ್ರಿಯಿಸಿದ ಸಚಿವ ಚಲುವರಾಯಸ್ವಾಮಿ, ಬಿಜೆಪಿಯವರು ನಮ್ಮಸರ್ಕಾರದ ವಿರುದ್ಧವೇ ಪ್ರತಿಭಟನೆ ಮಾಡಬೇಕು. ಕೇಂದ್ರ ಸರ್ಕಾರ ಬಳಿ ವಾಟರ್ ಮಾನಿಟರಿಂಗ್ ಕಮಿಟಿ ಇರುವುದು. ನೀರು ಬಿಡುವ ಬಗ್ಗೆ ತೀರ್ಮಾನ ಮಾಡುವುದು ಕೇಂದ್ರ ಸರ್ಕಾರ ಅಲ್ಲವಾ..? ನಾವು ಸಮರ್ಥವಾಗಿ ವಾದ ಮಂಡಿಸಿದ್ದಕ್ಕೆ ತಮಿಳುನಾಡಿನವರು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದಾರೆ. ನೀರಿಗಾಗಿ ತಮಿಳುನಾಡು ಸರ್ಕಾರ ಸುಪ್ರೀಂಕೋರ್ಟ್ ಮೊರೆ ಹೋಗಿದ್ದಾರೆ ಎಂದರು.
ಸುಮಲತಾ ಅಂಬರೀಶ್ ಬಿಜೆಪಿಗೆ ಬೆಂಬಲ ನೀಡಿದ್ದಾರೆ. ಹೀಗಾಗಿ ಕೇಂದ್ರ ನೀರಾವರಿ ಸಚಿವರ ಬಳಿ ಅವರು ಚರ್ಚಿಸಲಿ. ರಾಜಕೀಯವಾಗಿ ತಮಿಳುನಾಡು ಸರ್ಕಾರದ ಜೊತೆ ಮೈತ್ರಿ ಇರಬಹುದು . ಆದರೆ ರಾಜ್ಯದ ಜನರ ವಿಚಾರದಲ್ಲಿ ಮೈತ್ರಿ ಇಲ್ಲ ಎಂದು ಸಚಿವ ಚಲುವರಾಯಸ್ವಾಮಿ ನುಡಿದರು.