ಬೆಳಗಾವಿ : ಕರ್ನಾಟಕದಲ್ಲಿ ಸಿಎಂ ಬದಲಾವಣೆಯ ಚರ್ಚೆ ಜೋರಾಗಿದೆ. ಈ ಬಾರಿ ಸಿದ್ದರಾಮಯ್ಯ ಅವರು ಸಿಎಂ ಕುರ್ಚಿಯಿಂದ ಕೆಳಗೆ ಇಳಿಯುತ್ತಾರೆ ಎನ್ನುವ ಮಾತುಗಳು ಕೇಳಿಬಂದಿದ್ದವು. ಇದರ ಬೆನ್ನಲ್ಲೇ ಅಹಿಂದ ಕೂಗು ಜೋರಾಗಿದೆ. ಮತ್ತೊಂದೆಡೆ, ಹೈಕಮಾಂಡ್ ಮನವೊಲಿಕೆಗೆ ಡಿಕೆ ಶಿವಕುಮಾರ್ ಇನ್ನಿಲ್ಲದ ಕಸರತ್ತು ನಡೆಸಿದ್ದಾರೆ. ಈ ಸಂಬಂಧ ಡಿಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ನಡುವೆ ಮುಸುಕಿನ ಗುದ್ದಾಟ ನಡೆದಿದೆ. ಇನ್ನೂ ಇದೀಗ ಅವರು ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಹಾಗೂ ಸಿಎಂ ಕುರ್ಚಿ ಕಾದಾಟದ ವಿಚಾರವಾಗಿ ಕೋಡಿಮಠ ಸಂಸ್ಥಾನದ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಸ್ಫೋಟಕ ಭವಿಷ್ಯವೊಂದನ್ನು ನುಡಿದಿದ್ದಾರೆ.
ಬೆಳಗಾವಿಯಲ್ಲಿಂದು ಮಾತನಾಡಿರುವ ಕೋಡಿಶ್ರೀ, ಹಾಲುಮತ ಸಮಾಜದವರಿಂದ ಅಧಿಕಾರ ಕಿತ್ತುಕೊಳ್ಳೋದು ಅಷ್ಟು ಸುಲಭದ ಮಾತಲ್ಲ, ಅದು ತುಂಬಾ ಕಷ್ಟ. ಸ್ವತಃ ಸಿದ್ದರಾಮಯ್ಯ ಅವರೇ ಅಧಿಕಾರ ಬಿಟ್ಟು ಕೊಟ್ಟರೆ ಮಾತ್ರ ಬೇರೆಯರಿಗೆ ಅವಕಾಶ ಸಿಗಬಹುದು ಎಂದು ಕೋಡಿಮಠ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ. ಈ ಮೂಲಕ ಸಿದ್ದರಾಮಯ್ಯ ತಾನೇ ಅಧಿಕಾರದಿಂದ ಕೆಳಗೆ ಇಳಿಯುವವರೆಗೂ ಡಿ.ಕೆ.ಶಿವಕುಮಾರ್ ಅವರಿಗೆ ಅಧಿಕಾರ ಸಿಗುವುದಿಲ್ಲ ಎಂದು ಪರೋಕ್ಷವಾಗಿಯೇ ಭವಿಷ್ಯ ನುಡಿದಿದ್ದಾರೆ.



