ಬೆಂಗಳೂರು: ನಾನು ಸುಮ್ಮನೆ ಆಕಸ್ಮಿಕವಾಗಿ ಏನೇನೋ ಮಾತನಾಡಿ ನಿಮ್ಮಿಂದ ಚಪ್ಪಾಳೆ ಗಿಟ್ಟಿಸಿಕೊಂಡು ಹೋಗಲು ಬಂದಿಲ್ಲ. ಬಹಳ ದಿನಗಳ ಬಳಿಕ ಕನ್ನಡದ ಹಿರಿಯ ನಟರು ಒಂದೇ ವೇದಿಕೆಯಲ್ಲಿ ಸೇರಿಕೊಂಡಿದ್ದಾರೆ ಎಂಬ ವಿಚಾರ ತಿಳಿದು ಸಂತೋಷವಾಯಿತು. ಈ ಒಗ್ಗಟ್ಟು ಪ್ರದರ್ಶನ ಖುಷಿ ತರಿಸಿದೆ ಎಂದು ಸಂಗೀತ ನಿರ್ದೇಶಕ ಹಂಸಲೇಖ ಹರ್ಷ ವ್ಯಕ್ತಪಡಿಸಿದರು.
ಕಾವೇರಿ ನೀರಿಗಾಗಿ ನಗರದ ಗುರುರಾಜ ಕಲ್ಯಾಣ ಮಂಟಪದದಲ್ಲಿ ಚಿತ್ರರಂಗದ ನಟ-ನಟಿಯರಿಂದ ಇಂದು ನಡೆದ ಹೋರಾಟದಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಕನ್ನಡ ಚಿತ್ರರಂಗದ ಬಗ್ಗೆ ಈ ಮೊದಲು ನನ್ನನ್ನು ಯಾರೋ ಒಬ್ಬರು ಕೇಳಿದಾಗ ಚುಕ್ಕಾಣಿ ಇಲ್ಲದಂತಹ ಹಡಗು ಆಗಿದೆ ಎಂದಿದ್ದೆ. ನನ್ನ ಹೇಳಿಕೆಯನ್ನು ಹಲವರು ಪ್ರಶ್ನಿಸಿದ್ದರು. ೨೫೦ ಜನ ಹೊಸ ನಿರ್ದೇಶಕರು, ೨೫೦ ಜನ ಹೊಸ ನಿರ್ಮಾಪಕರು ಬಂದಿದ್ದಾರೆ. ಅವರ ಕ್ಷೇಮ, ವಿಚಾರ, ತಾಪತ್ರೆಯಗಳನ್ನು ವಿಚಾರಿಸದ ನಮ್ಮ ವಾಣಿಜ್ಯ ಮಂಡಳಿ, ಚುಕ್ಕಾಣಿ ಇಲ್ಲದ ಹಡಗು ಅಲ್ಲದೇ ಇನ್ನೇನು? ಎಂದಿದ್ದೆ. ಆದರೆ, ಇವತ್ತು ಒಂದು ಸಮಾಧಾನ ತರಿಸುವ ದೃಶ್ಯ ನೋಡುತ್ತಿದ್ದೇನೆ ಎಂದು ಚಿತ್ರರಂಗದ ಒಗ್ಗಟ್ಟು ಪ್ರದರ್ಶನಕ್ಕೆ ಹರ್ಷ ವ್ಯಕ್ತಪಡಿಸಿದರು.
ಫಿಲ್ಮ್ ಚೇಂಬರ್ ಅಧ್ಯಕ್ಷರಾಗಿ ಎನ್ ಎಂ ಸುರೇಶ್ ಅವಿರೋಧವಾಗಿ ಆಯ್ಕೆ ಆಗುತ್ತಿದ್ದಂತೆ ಅವರ ಹೆಗಲಿಗೆ ಈ ಜಲಭಾರ ಬಿದ್ದಿದೆ. ಓರ್ವ ಅಧ್ಯಕ್ಷ ಕೆಲಸ ಮಾಡುವ ಲಕ್ಷಣ ಹೀಗೆ ಇರುತ್ತದೆ ಅಂದರೆ, ಅವನ ಕಾಲು, ಕೈ, ಭುಜದ ಮೇಲೆ ಕೆಲಸಗಳ ರಾಶಿ ಇರುತ್ತದೆ. ಅದೇ ರೀತಿ ಎನ್ ಎಂ ಸುರೇಶ್ ಅಧ್ಯಕ್ಷರಾಗುತ್ತಿದ್ದಂತೆ ಅವರ ಹೆಗಲ ಮೇಲೆ ಈ ಜಲಭಾರ ಸಮಸ್ಯೆ ಬಿದ್ದಿದೆ. ಈ ಜಲಭಾರದ ಜೊತೆಗೆ ನಮ್ಮಂತ ಕಲಾವಿದರ ಕಷ್ಟ-ನಷ್ಟಗಳನ್ನು ಆಲಿಸಬೇಕಿದೆ. ಅವರ ರಕ್ತ ಬಿಸಿಯಾಗಿದೆ. ಎಲ್ಲವದನ್ನು ಎದುರಿಸುತ್ತಿದ್ದಾರೆ. ಅವರು ಏರ್ಪಡಿಸಿರುವ ಈ ಒಗ್ಗಟ್ಟು ಪ್ರದರ್ಶನದ ಸಮಾವೇಶಕ್ಕೆ ಧನ್ಯವಾದಗಳನ್ನು ಸಲ್ಲಿಸಬೇಕು ಎಂದು ಫಿಲ್ಮ್ ಚೇಂಬರ್ ಅಧ್ಯಕ್ಷರಾಗಿ ಎನ್ ಎಂ ಸುರೇಶ್ ಅವರ ಗುಣಗಳನ್ನು ಹಂಸಲೇಖ ಕೊಂಡಾಡಿದರು.
ಶಿವರಾಜ್ ಕುಮಾರ್ ಅವರು ಹೇಳಿದಂತೆ ಈ ಸಮಸ್ಯೆಯನ್ನು ನಾವು ಹೃದಯದಿಂದ ಬಗೆಹರಿಸಿಕೊಳ್ಳಬೇಕು. ಮನಸ್ಸಿನ ವಿಚಾರದಿಂದ ಅಲ್ಲ. ಕಾರಣ ಮನಸ್ಸು ಯಾವಾಗಲು ವ್ಯಾಪಾರದಂತೆ ವರ್ತಿಸುತ್ತಿದೆ. ಆದರೆ, ಹೃದಯ ಹಾಗಲ್ಲ. ಯಾವಾಗಲೂ ಸತ್ಯ ಮತ್ತು ಪ್ರೀತಿಯಿಂದ ವರ್ತಿಸುತ್ತಿದೆ. ಈ ಪ್ರಜಾಪ್ರಭುತ್ವದಲ್ಲಿ ಪ್ರತಿಭಟನೆಯೇ ಶ್ರೇಷ್ಠ ಮಾರ್ಗ. ರಾಜಕಾರಣಿಗಳು ಪ್ರತಿಭಟನೆ ಮಾಡಿದರೆ ಆಕ್ರೋಶ ಹೊರಬರುತ್ತದೆ. ದಾಳಿಕೋರರು ಪ್ರತಿಭಟನೆ ಮಾಡಿದರೆ ಹಿಂಸೆ ಆಗುತ್ತದೆ. ಮಣಿಪುರದಲ್ಲಿ ಇಂದು ಎರಡು ಸಮುದಾಯಗಳ ನಡುವೆ ಹಿಂಸಾಚಾರ ಆಗುತ್ತಿದೆ. ನಿತ್ಯ ಕೊಲೆ ಆಗುತ್ತಿದೆ. ನಾವು ಪ್ರತಿಭಟನೆ ಮಾಡಿದರೆ ಶಾಂತಿ ಮತ್ತು ಸಂಯಮದಿಂದ ಕೂಡಿರಬೇಕು. ಅದು ಇಂದು ನೆರವೇರಿಸಿದೆ ಎಂದು ೧೦ನೇ ಶತಮಾದ ವಾಕ್ಯವೊಂದನ್ನು ಇದೇ ವೇಳೆ ಹೇಳಿದರು.