ಮೈಸೂರು : ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಚಿನ್ಹೆಯಡಿ ಸ್ಪರ್ಧೆ ಮಾಡುವ ಕುರಿತು ಸಾಕಷ್ಟು ಊಹಾಪೂಹಳಿಗೆ ಮಾಜಿ ಸಚಿವ ಸಾರಾ ಮಹೇಶ್ ಸ್ಪಷ್ಟನೆ ನೀಡಿದ್ದು, ನನ್ನ ಆರ್ಥಿಕ ಪರಿಸ್ಥಿತಿ ಚೆನ್ನಾಗಿಲ್ಲ ಯಾವುದೇ ಎಲೆಕ್ಷನ್ ಫೇಸ್ ಮಾಡೋ ಇಚ್ಚೆ ಇಲ್ಲ ಎಂದರು.
ಮೈಸೂರಿನಲ್ಲಿಂದು ಮಾಧ್ಯಮದವರೊಂದಿಗೆ ಅವರು ಮಾತನಾಡಿ, ಸದ್ಯದ ಪರಿಸ್ಥಿತಿಯಲ್ಲಿ ನಾನು ಆಕಾಂಕ್ಷಿ ಖಂಡಿತ ಅಲ್ಲ,
ನನ್ನ ಮಾನಸಿಕ ಮತ್ತು ಆರ್ಥಿಕ ಪರಿಸ್ಥಿತಿ ಅಷ್ಟು ಚೆನ್ನಾಗಿಲ್ಲ ಹೀಗಾಗಿ ಯಾವುದೇ ಸಾರ್ವಜನಿಕ ಚುನಾವಣೆಯಲ್ಲಿ ನಿಲ್ಲಲು ಆಸಕ್ತಿ ಇಲ್ಲ ಎಂದರು. ಬಿಜೆಪಿ ಮುಖಂಡ ಭೇಟಿ ಕುರಿತು ಪ್ರತಿಕ್ರಿಯಿಸಿದ ಅವರು, ೩೫ ವರ್ಷಗಳಿಂದಲೂ ಬಿಜೆಪಿ ಜೊತೆ ನನ್ನ ಒಡನಾಟ ಇದೆ. ಆದರೆ ಚುನಾವಣೆ ವಿಚಾರವಾಗಿ ಯಾರನ್ನೂ ಭೇಟಿ ಮಾಡಿಲ್ಲ. ಅದರ ಬಗ್ಗೆ ಚರ್ಚೆಯೂ ಆಗಿಲ್ಲ. ಸದ್ಯಕ್ಕೆ ಮೈತ್ರಿ ಅಭ್ಯರ್ಥಿಯಾಗಿ ಹಾಲಿ ಸಂಸದ ಪ್ರತಾಪ್ ಸಿಂಹ ಅವರೇ ಕಣಕ್ಕಿಳಿಯಲಿದ್ದಾರೆ. ನಮ್ಮದು ಒಂದೇ ಗುರಿ ಇನ್ನೊಮ್ಮೆ ಮೋದಿ ಅವರನ್ನು ಪ್ರಧಾನಿ ಮಾಡೋದು. ಸದ್ಯಕ್ಕೆ ರಾಜಕೀಯ ಪಡಸಾಲೆಯಲ್ಲಿ ನಡೆಯುತ್ತಿರುವ ಚರ್ಚೆ ಸತ್ಯಕ್ಕೆ ದೂರ ಎಂದರು.
ನಮ್ಮ ನಾಯಕರಾದ ಕುಮಾರಸ್ವಾಮಿ ಅವರು ಇದರ ಬಗ್ಗೆ ಏನು ನಿರ್ಧಾರ ಮಾಡುತ್ತಾರೆ ಗೊತ್ತಿಲ್ಲ. ಬಿಜೆಪಿ ವರಿಷ್ಠರನ್ನು ಭೇಟಿ ಮಾಡಿದ್ದರು. ಚುನಾವಣೆ ವಿಚಾರ ಎಲ್ಲೂ ಪ್ರಸ್ತಾಪ ಮಾಡಿಲ್ಲ. ಮಾಧ್ಯಮಗಳಲ್ಲಿ ಬರುತ್ತಿರುವುದು ಊಹಾಪೋಹಗಳಷ್ಟೇ ಎಂದು ಸಾರಾ ಮಹೇಶ್ ತಿಳಿಸಿದರು.