Monday, April 21, 2025
Google search engine

Homeರಾಜ್ಯಸುದ್ದಿಜಾಲಹಿಂದುಳಿದ ವರ್ಗಗಳಿಗೆ ದಿಸೆ ನೀಡಿದ ಅರಸು ಅವರನ್ನು ಸ್ಮರಿಸುವದು ನಮ್ಮೆಲ್ಲರ‌ ಕರ್ತವ್ಯ: ಈರಣ್ಣ ಕಡಾಡಿ

ಹಿಂದುಳಿದ ವರ್ಗಗಳಿಗೆ ದಿಸೆ ನೀಡಿದ ಅರಸು ಅವರನ್ನು ಸ್ಮರಿಸುವದು ನಮ್ಮೆಲ್ಲರ‌ ಕರ್ತವ್ಯ: ಈರಣ್ಣ ಕಡಾಡಿ

ಡಿ.ದೇವರಾಜ ಅರಸು 109ನೇ ಜನ್ಮ ದಿನಾಚರಣೆ

ಬೆಳಗಾವಿ: ಹಿಂದುಳಿದ ವರ್ಗಗಳಿಗೆ ಒಂದು‌ ದಿಸೆಯನ್ನು ನೀಡಿದಂತಹ ಮಹಾನ ಚೇತನರು ಹಾಗೂ ಹಿಂದುಳಿದ ವರ್ಗ ಎಂದು ಗುರುತಿಸುವ ಜನರಿಗೆ ಗೌರವದ ಬದುಕನ್ನು ಕಟ್ಟಿಕೊಳ್ಳಲು ಪ್ರಥಮವಾಗಿ ಪ್ರಯತ್ನಿಸಿದ ಡಿ ದೇವರಾಜ ಅರಸು ಅವರನ್ನು ಸ್ಮರಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ರಾಜ್ಯ ಸಭಾ ಸದಸ್ಯರಾದ ಈರಣ್ಣ ಕಡಾಡಿ ನುಡಿದರು.

ನಗರದ ಕುಮಾರ ಗಂಧರ್ವ ರಂಗಂಮದಿರದಲ್ಲಿ (ಆ.20)ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಮಹಾನಗರ ಪಾಲಖೆ ಸಂಯುಕ್ತಾಶ್ರಯದಲ್ಲಿ ಜರುಗಿದ ಡಿ.ದೇವರಾಜ ಅರಸು ರವರ 109ನೇ ಜನ್ಮ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಡಿ.ದೇವರಾಜ ಅರಸು ಅವರು ತಮ್ಮ‌ ಮುಖ್ಯಮಂತ್ರಿಗಳ ಆಡಳಿತಾವಧಿಯಲ್ಲಿ ಶೋಷಿತರನ್ನು ಮುಖ್ಯವಾಹಿನಿಗೆ ತರುವಲ್ಲಿ ಎಲ್ಲ ವಿರೋಧಗಳನ್ನು‌ ಮೀರಿ ಪ್ರಯತ್ನಿಸಿ ತಮ್ಮ ಛಾಪನ್ನು ಮೂಡಿಸಿದ್ದರು ಎಂದರು. ಅರಸುರವರು ಸಮಾಜದ ಸ್ವಾಸ್ಥ್ಯ ಕಾಪಾಡಿಕೊಳ್ಳಲು ಅನೇಕ ಕ್ರಾಂತಿಕಾರಿಕ ಬದಲಾವಣೆಗಳನ್ನು ತಂದರು. ಜೀತ ಪದ್ಧತಿ ನಿರ್ಮೂಲನೆ, ಮಲ ಹೊರುವ‌ ಪದ್ಧತಿಯಂತಹ ಅನೇಕ ಅನಿಷ್ಠ ಪದ್ಧತಿಗಳನ್ನು ತೊಡದು ಹಾಕಲು ಪ್ರಮುಖ ನಿರ್ಣಯಗಳನ್ನು ತೆಗೆದುಕೊಂಡಂತಹ‌ ಮಹಾನುಭಾವರಾಗಿದ್ದರು.

ಇಂದು ಸರಕಾರಗಳು ಶೋಷಿತರ ಅಭ್ಯುಧ್ಯಯಕ್ಕಾಗಿ ಅನೇಕ ಯೋಜನೆಗಳನ್ನು ಜಾರಿಗೊಳಿಸುತ್ತಿವೆ. ಈ ಯೋಜನೆಗಳು ಅರ್ಹರಿಗೆ ತಲುಪವಂತಹ ಕಾರ್ಯವಾಗಬೇಕಾಗಿದೆ. ಈ ನಿಟ್ಟಿನಲ್ಲಿ ಹಿಂದುಳಿದ ವರ್ಗಗಳ ಸಮುದಾಯಗಳು ಜಾಗೃತವಾಗಿ ಸರಕಾರದ ಯೋಜನೆಗಳ ಸೌಲಭ್ಯಗಳನ್ನು ಪಡೆದುಕೊಂಡು ಆರ್ಥಿಕ, ಶೈಕ್ಷಣಿಕವಾಗಿ ಸಮಾಜದ ಮುನ್ನೆಲೆಗೆ ಬರುವಂತೆ ಕರೆ ನೀಡಿದರು.

ಅಧಿಕಾರಿದಲ್ಲಿರುವಂತಹವರು ಸರಕಾರದ ಯೋಜನೆಗಳು ಸಮರ್ಪಕವಾಗಿ ಅನುಷ್ಠಾನಗೊಳಿಸುವದರ ಮೂಲಕ ಸಮಾಜದಲ್ಲಿ ಸಮಾನತೆ ತರಬಹುದಾಗಿದೆ ಎಂದು ಈರಣ್ಣ ಕಡಾಡಿ ಅಭಿಪ್ರಾಯ ಪಟ್ಟರು. ಜಿಲ್ಲಾ ಉಸ್ತುವಾರಿ ಸಚಿವರ ಸಂದೇಶ: ಡಿ. ದೇವರಾಜ ಅರಸು ಅವರು ರಾಜ್ಯದ ಮುಖ್ಯಮಂತ್ರಿಗಳಾಗಿ ನಾಡಿನ ಪರಿಶಿಷ್ಟ ಜಾತಿ ಮತ್ತು ಹಿಂದುಳಿದ ವರ್ಗಗಳ ಅಭಿವೃದ್ಧಿಯಹರಿಕಾರ ಎಂದೇ ಪ್ರಖ್ಯಾತಿಯಾದ ಹಾಗೂ ರಾಜ್ಯ ಕಂಡಂತಹ ಧೀಮಂತ ರಾಜಕಾರಣಿಯಾಗಿದ್ದರು.

ನಾಡಿನ ಹಿಂದುಳಿದ ವರ್ಗಗಳ ಏಳಿಗೆಗಾಗಿ ಸ್ಥಾಪಿಸಿದ ಹಿಂದುಳಿದ ವರ್ಗಗಳ ಆಯೋಗದ ಪ್ರತಿಫಲದಿಂದಾಗಿ ಇಂದು ನಾಡಿನ ಅಸಂಖ್ಯಾತ ಹಿಂದುಳಿದ ವರ್ಗದ ಜನರು ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹಾಗೂ ಏಳಿಗೆ ಹೊಂದಲು ಸಾಧ್ಯವಾಗಿದೆ. ಇವರು ಜಾರಿಗೆ ತಂದ ಭೂಸುಧಾರಣೆಗಳು, ಗೇಣಿ ಶಾಸನ ಹಾಗೂ ಉಳುವವನೆ ಭೂಮಿಯ ಒಡೆಯ ಎಂಬ ಕಾನೂನುಗಳು ಶ್ರಮಿಕ ರೈತಾಪಿ ಕೂಲಿ ವರ್ಗದವರನ್ನು ಗೇಣಿದಾರರ ಕಪಿಮುಷ್ಠಿಯಿಂದ ಬಿಡಿಸಿ ಭೂ ಒಡೆಯನನ್ನಾಗಿ ಮಾಡಿದ ಕೀರ್ತಿ ದೇವರಾಜ ಅರಸುರವರಿಗೆ ಸಲ್ಲುತ್ತದೆ.

ಇಂತಹ ಮಹಾನ್ ನೇತಾರರ ತತ್ವ ಆದರ್ಶಗಳನ್ನು ನಮ್ಮಲ್ಲಿ ಮೈಗೂಡಿಸಿಕೊಂಡು ಅವರ ಆಶೋತ್ತರಗಳನ್ನು ಸಾಕಾರಗೊಳಿಸುವಲ್ಲಿ ಶ್ರಮಿಸೋಣ ಎಂಬ ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ ಜಾರಕಿಹೊಳಿ ಅವರ ಸಂದೇಶವನ್ನು ಅಪರ ಜಿಲ್ಲಾಧಿಕಾರಿ ವಿಜಯಕುಮಾರ ಹೊನಕೇರಿ ಅವರು ವಾಚಿಸಿದರು.

ಜಿ.ಪಂ.ಉಪಕಾರ್ಯದರ್ಶಿ ಬಸವರಾಜ ಹೆಗನಾಯಕ‌ ಮಾತನಾಡಿ, ರಾಜ್ಯದಲ್ಲಿನ ಹಿಂದುಳಿದ ವರ್ಗಗಳ ಇಲಾಖೆಯಡಿಯಲ್ಲಿನ ವಸತಿ ನಿಲಯಗಳು ಉತ್ತಮವಾಗಿವೆ. ಇಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಒಳ್ಳೆಯ ಶಿಕ್ಷಣ ಪಡೆದುಕೊಳ್ಳುವದರ ಮೂಲಕ ದೇಶದ ಉನ್ನತ ಸ್ಥಾನಮಾನ ಪಡೆದುಕೊಳ್ಳುವಂತೆ ತಮ್ಮ‌ಬಾಲ್ಯದ ನೆನಪುಗಳನ್ನು ಮೆಲಕು ಹಾಕುತ್ತಾ ವಿಧ್ಯಾರ್ಥಗಳಿಗೆ ಪ್ರೋತ್ಸಾಹಿಸಿದರು.

ಕಾರ್ಯಕ್ರಮದ‌ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಯಕ್ಕುಂಡಿಯ ಸರಕಾರಿ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯರಾದ ಡಾ.ವಾಯ್.ಎಮ್ ಯಾಕ್ಕೋಳಿ ಅವರು, ಡಿ.ದೇವರಾಜ ಅರಸು ರವರ ಜೀವನ ಸಾಧನೆ ಕುರಿತು ಮಾತನಾಡುತ್ತಾ ಡಿ.ದೇವರಾಜ ಅರಸು ಅವರು ತಮ್ಮ ಮುಖ್ಯ ಮಂತ್ರಿಗಳ ಆಡಳಿತಾವದಿಯಲ್ಲಿ ಬಡವರು, ಶೋಷಿತರು ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣಕ್ಕಾಗಿ ಶ್ರಮಿಸಿದ್ದರು. ಸಮಾಜದಲ್ಲಿನ ಹಿಂದುಳಿದ ವರ್ಗದವರು ಸಮಾಜದ ಮುಖ್ಯವಾಹಿನಿಗೆ ಬರಬೇಕಾದರೆ ಶೈಕ್ಷಣಿಕವಾಗಿ ಮುಂದೆ ಬರುವದು ಅವಶ್ಯಕ‌ ಎಂದು‌ ಮನಗಂಡ ಅವರು ಹಿಂದುಳಿದ ವರ್ಗದವರಿಗಾಗಿ ಅನೇಕ ಯೋಜನೆಗಳನ್ನು ಜಾರಿಗೊಳಿಸಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯನ್ನು ಜಾರಿಗೊಳಿಸಿದರು.

ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಕಲ್ಯಾಣಕ್ಕಾಗಿ ತಮ್ಮ ಜೀವನ‌ ಮುಡಿಪಾಗಿಡುವದರ ಜೊತೆಗೆ ತಮ್ಮ ಆಡಳಿತಾವಧಿಯಲ್ಲಿ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಿದ್ದು ಇಂದು ನಾವೆಲ್ಲ ಅವರನ್ನು ಮಾದರಿಯಾಗಿಟ್ಟುಕೊಳ್ಳಬೇಕು ಎಂದು ವಾಯ್.ಎಮ್ ಯಾಕ್ಕೊಳಿ ನುಡಿದರು.

ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ‌ ಅಧಿಕಾರಿ ಶಿವಪ್ರಿಯಾ ಕಡೇಚೂರ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ನಂದಗಡದ ಸಂಗೋಳ್ಳಿ ರಾಯಣ್ಣ ಸ್ಮಾರಕ ಶಾಲೆಯ ವಿಧ್ಯಾರ್ಥಿಗಳು ನಾಡಗೀತೆ ಹಾಗೂ ಪ್ರಾರ್ಥನೆ ಪ್ರಸ್ತುತಿಸಿದರು. ಶ್ರೀಮತಿ ಸುನಿತಾ ದೇಸಾಯಿ ಕಾರ್ಯಕ್ರಮ ನಿರ್ವಹಿಸಿದರು.

ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ: ಡಿದೇವರಾಜ ಅರಸು ರವರ 109ನೇ ಜನ್ಮ ದಿನಾಚರಣೆಯ ವೇದಿಕೆ ಕಾರ್ಯಕ್ರಮದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ, ವಿವಿಧ ಕ್ರೀಡೆಗಳಲ್ಲಿ, ಪ್ರಬಂಧ, ರಸಪ್ರಶ್ನೆ ಸ್ಪರ್ಧೆಗಳಲ್ಲಿ ವಿಜೇತ ವಿಧ್ಯಾರ್ಥಿಗಳಿಗೆ ಗಣ್ಯರುಗಳು ಪ್ರಶಸ್ತಿ ‌ಪತ್ರ ನೀಡುವದರ ಮೂಲಕ ಗೌರವಿಸಿದರು.

ಕಾರ್ಯಕ್ರಮದಲ್ಲಿ ಬೆಳಗಾವಿ ಉತ್ತರ ಶಾಸಕರಾದ ರಾಜು(ಆಸಿಫ)ಸೇಠ, ಪಾಲಿಕ ಆಯುಕ್ತರಾದ ಅಶೋಕ ದುಡಗುಂಟಿ, ಡಿ.ದೇವರಾಜ ಅರಸು ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರಾದ ಎಸ್.ನ್.ಬಾನಸಿ,ವಿವಿಧ ಶಾಲಾ‌‌ ಮಕ್ಕಳು, ವಸತಿ ಶಾಲಾ ಮಕ್ಕಳು,ಗಣ್ಯರು, ಸಮಾಜದ ಮುಖಂಡರು, ಸಾರ್ವಜನಿಕರು ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular