ಹುಣಸೂರು: ತಾಲೂಕಿನಲ್ಲಿ 20 ವರ್ಷಗಳ ಹಿಂದೆಯೆ ನಮ್ಮ ಸವಿತಾ ಸಮಾಜದ ಸಮುದಾಯ ಭವನ ನಿರ್ಮಾಣವಾಗಿದ್ದರು ಅದು ಇನ್ನು ನಮ್ಮ ಸಮಾಜದ ಹೆಸರಿಗೆ ನೋಂದಣಿ ಆಗದೇ ಪುರಸಭೆ ಹೆಸರಲ್ಲೇ ಇರುವುದು ಬೇಸರದ ಸಂಗತಿ ಎಂದು ತಾಲೂಕು ಕುಲವೃತ್ತಿ ರಕ್ಷಣಾ ವೇದಿಕೆ ಅಧ್ಯಕ್ಷ ಗೋವಿಂದರಾಜು ತಿಳಿಸಿದರು.
ಅವರು ನಗರದ ಪತ್ರಕರ್ತರ ಸಂಘದ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ ನಮ್ಮ ಸಮಾಜದ ಇಂದಿನ ಅಧ್ಯಕ್ಷರಾದ ಗೌರಿಶ್ ರವರು ಸಮಾಜದ ಒಳಿತಿಗಾಗಿ ಯಾವುದೇ ಕೆಲಸವನ್ನು ಮಾಡದೆ, ನಮ್ಮ ಸಮಾಜದ ಸಮುದಾಯ ಭವನವನ್ನು ನಮ್ಮ ಜನಾಂಗದ ಹೆಸರಿಗೆ ಮಾಡದೆ, ನಮ್ಮ ತಾಲೂಕು ಸಂಘವನ್ನು ರಿನಿವಲ್ ಮಾಡದೆ ಸುಮ್ಮನೆ ನಾನೇ ಅಧ್ಯಕ್ಷ ಎಂದು ಹೇಳಿ ಸಮಾಜಕ್ಕೆ ಮೋಸ ಮಾಡುತ್ತಿರುವುದು ಎಷ್ಟು ಸರಿ ಎಂದು ಪ್ರಶ್ನೆ ಮಾಡಿದರು. ನಮ್ಮ ಸಮಾಜದ ಅಧ್ಯಕ್ಷ ಅಂತ ಹೇಳಿ ಕರೆಸಿಕೊಳ್ಳುತ್ತಿರುವ ಗೌರೀಸ್‍ರವರು ನಮ್ಮ ಸಮಾಜದ ಯುವಕರ ವಿಶ್ವಾಸವನ್ನು ತೆಗೆದುಕೊಳ್ಳದೆ ಅವರ ಪ್ರಯತ್ನಗಳಿಗೆ ಅಡ್ಡಗಾಲಾಗುತ್ತಾ ಸಮಾಜದ ಬೆಳವಣಿಗೆಗೆ ತೊಡಕಾಗಿದ್ದಾರೆ ಎಂದು ಆರೋಪಿಸಿದರು.
ನಮ್ಮ ಸಮಾಜದ ನಡೆಗೆ ಗೌರೀಶ್ ರವರೇ ನೇರ ಕಾರಣ , ನಮ್ಮ ಜನಾಂಗದ ಏಳಿಗೆಗಾಗಿ, ಅಭಿವೃದ್ಧಿಗಾಗಿ ದುಡಿಯಬೇಕಾಗಿದೆ. ಸಮಾಜದ ಅಭಿವೃದ್ಧಿ ಯಾಗಬೇಕು. ಸುಮ್ಮನೆ ನಮ್ಮ ಸಮಾಜದ ಅಧ್ಯಕ್ಷ ಅಂತ ಹೇಳಿ ಸುತ್ತಾಡಿಕೊಂಡು ಸಮಯ ವ್ಯರ್ಥ ಮಾಡದೆ ರಾಜೀನಾಮೆ ಕೊಟ್ಟು ಜನಾಂಗದ ಅಭಿವೃದ್ಧಿಗೆ ಸಹಕರಿಸಬೇಕೆಂದು ಕೇಳಿಕೊಳ್ಳುತ್ತೇನೆ ಎಂದರು
ಕಾರ್ಯದರ್ಶಿ ಗಿರೀಶ್ ಮಾತನಾಡಿ, ನಮ್ಮ ಸವಿತಾ ಸಮಾಜದ ತಾಲೂಕು ಸಂಘವನ್ನು ಸುಮಾರು ವರ್ಷಗಳಿಂದ ನವೀಕರಣ ಮಾಡದೆ ಸಂಘದ ಅಧ್ಯಕ್ಷ ಎಂದು ಹೇಳಿ ತಿರುಗುವುದು ತಪ್ಪು, ದಯಮಾಡಿ ಸಂಘವನ್ನು ನವೀಕರಣ ಮಾಡಿ ಸಮಾಜದ ಮುಂದಿನ ಪೀಳಿಗೆಗೆ ಅವಕಾಶ ಮಾಡಿಕೊಟ್ಟು ನಮ್ಮ ಸವಿತ ಸಮಾಜದ ಅಭಿವೃದ್ಧಿಗಾಗಿ ಎಲ್ಲರೂ ಸೇರಿ ದುಡಿಯೋಣ ಎಂದರು.
ಸುದ್ದಿಗೋಷ್ಠಿಯಲ್ಲಿ ಸಮಾಜದ ಯುವಕರಾದ ಯಮಗುಂಬ ಶಿವು, ಚಿಲ್ಕುಂದ ಮನುಕುಮಾರ್, ಹರೀಶ್ ಇದ್ದರು.