ಬೆಂಗಳೂರು : ಕೋಗಿಲು ಲೇಔಟ್‌ನಲ್ಲಿ ಅನಧಿಕೃತವಾಗಿ ಮನೆ ನಿರ್ಮಾಣ ಆಗಿದ್ದು ನಿಜ. ಇದು ಬಿಬಿಎಂಪಿ ಜಾಗವಾಗಿದ್ದು, ಕಂದಾಯ ಇಲಾಖೆಯ ಜಾಗವಲ್ಲ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದ್ದಾರೆ.
ಈ ಕುರಿತು ಇಂದು ವಿದೇಶ ಪ್ರವಾಸ ಮುಗಿಸಿ ಬೆಂಗಳೂರಿಗೆ ಆಗಮಿಸಿದ ಕೃಷ್ಣ ಬೈರೇಗೌಡ ಅವರು ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಬಿಬಿಎಂಪಿ ಇರಲಿ, ಕಂದಾಯ ಇರಲಿ ಒತ್ತುವರಿಯಾಗಿರುವ ಜಾಗವನ್ನು ನಿರಂತರವಾಗಿ ತೆರವು ಮಾಡಲಾಗುತ್ತದೆ. ಇದು ಆಡಳಿತ ವ್ಯವಸ್ಥೆಯಲ್ಲಿ ನಿರಂತರವಾಗಿ ನಡೆಯುವ ಕೆಲಸ. ಕಂದಾಯ ಇಲಾಖೆಯಲ್ಲಿ ಪ್ರತಿ ಶನಿವಾರ ತೆರವು ನಡೆಯುತ್ತಿರುತ್ತದೆ. ಸರ್ಕಾರಿ ಜಾಗದಲ್ಲಿ ಇರಬಹುದು, ಬಿಬಿಎಂಪಿ ಜಾಗದಲ್ಲಿ ಹಕ್ಕು ಪತ್ರ ನೀಡಲು ಸಾಧ್ಯವಿಲ್ಲ ಎಂದು ತಿಳಿಸಿದರು.
ಅಲ್ಲದೆ ಇದು ಒಂದೇ ಪ್ರಕರಣ ಅಲ್ಲ, ಬೇರೆ ಪ್ರಕರಣ ಇದೆ. ಸರ್ಕಾರಿ ಜಾಗವನ್ನು ಭದ್ರ ಮಾಡಲು ತೆರವು ಮಾಡಲಾಗಿದ್ದು, ತೆರವಾದ ಜಾಗದಲ್ಲಿ ಬಡವರು, ಅರ್ಹರು ಇದ್ದಾರೆ. ಬಹಳ ಕಾಲದಿಂದ ವಾಸ ಮಾಡುತ್ತಿರುವ ಕಾರಣ ಮಾನವೀಯ ದೃಷ್ಟಿಯಿಂದ ಬಡವರಿಗೆ ಮನೆ ನೀಡಲು ಸಿಎಂ ನಿರ್ಧಾರ ಮಾಡಿದ್ದಾರೆ ಎಂದು ತಿಳಿಸಿದರು.
ಇನ್ನೂ ಬಾಂಗ್ಲಾದೇಶದವರು ನೆಲೆಸಿದ್ದಾರೆ ಎನ್ನುವುದು ಊಹಾಪೋಹ. ಊಹಾಪೋಹಗಳ ಮೇಲೆ ಹೇಳಿಕೆ ಮಾಡಬಾರದು. ರಾಜ್ಯದವರು ಯಾರು? ಹೊರ ರಾಜ್ಯದವರು ಇದ್ದಾರೆ ಎನ್ನುವುದನ್ನು ಪೊಲೀಸರು ತನಿಖೆ ನಡೆಸಲಿ. ವಸೀಂ ನನ್ನ ಜೊತೆ ಇದ್ದಾರೆ ಎಂದು ಬಿಜೆಪಿಯವರು ಹೇಳುತ್ತಾರೆ.
ಯಾರೇ ಭಾಗಿಯಾಗಿದರೂ ಕಾನೂನು ಕ್ರಮ ನಡೆಯಲಿ. ಬಿಜೆಪಿ ಕಾರ್ಯಕರ್ತರು ಅಕ್ರಮದಲ್ಲಿ ಭಾಗಿಯಾಗಿದ್ದರೆ ಕ್ರಮ ಆಗಲಿ ಎಂದರು. ಕೃಷ್ಣಬೈರೇಗೌಡ ವಿದೇಶ ಪ್ರವಾಸದಲ್ಲಿ ಇದ್ದ ಕಾರಣ ಕೋಗಿಲು ಲೇಔಟ್ ನಿವಾಸಿಗಳಿಗೆ ಮನೆ ಹಂಚುವ ಕೆಲಸ ವಿಳಂಬವಾಗಿತ್ತು. ಸರ್ಕಾರದಿಂದ ನಿವೇಶನಗಳನ್ನು ನೀಡಲು ಹಾಗೂ ನಿರ್ಣಯ ಮಾಡಲು ಸ್ಥಳೀಯ ಶಾಸಕರ ಪಾತ್ರ ಮಹತ್ವ.
ಹೀಗಾಗಿ ಮನೆಗಳನ್ನ ನೀಡಲು ಕೃಷ್ಣಬೈರೇಗೌಡ ಅಭಿಪ್ರಾಯಕ್ಕೆ ಸರ್ಕಾರ ಕಾದಿದೆ. ಇಂದು ಮುಂಜಾನೆ 3 ಗಂಟೆಗೆ ವಿದೇಶದಿಂದ ಕೃಷ್ಣ ಬೈರೇಗೌಡ ಆಗಮಿಸಿದ ನಂತರ ಬೆಳಗ್ಗೆಯೇ ವಸತಿ ಸಚಿವ ಜಮೀರ್ ಅವರ ಆಪ್ತ ಕಾರ್ಯದರ್ಶಿ ಸರ್ಫರಾಜ್ ಖಾನ್ ಸಚಿವರ ನಿವಾಸಕ್ಕೆ ಆಗಮಿಸಿ ಮನೆ ಹಂಚುವ ವಿಚಾರದ ಬಗ್ಗೆ ಮಾತನಾಡಲಿದ್ದಾರೆ ಎನ್ನಲಾಗಿದೆ.



