ಮೈಸೂರು: ರಾಷ್ಟçದಲ್ಲಿ ವೈಚಾರಿಕವಾಗಿ ಮಹಾತ್ಮಾ ಗಾಂಧೀಜಿ ಅವರ ಜೀವನ, ಸಾಧನೆ ಹೋರಾಟಗಳನ್ನು ಜೀವಂತವಾಗಿಡಲು ಮತ್ತು ಸಂವಿಧಾನ ಉಳಿವಿಗಾಗಿ ಜನವರಿ ೨೧ ರಂದು ಬೆಳಗಾವಿಯಲ್ಲಿ ಜೈ ಬಾಪು, ಜೈ ಭೀಮ್, ಜೈ ಸಂವಿಧಾನ ಘೋಷವಾಕ್ಯಗಳೊಡನೆ ಎಐಸಿಸಿ ಅಧಿವೇಶನದ ಶತಮಾನೋತ್ಸವ ಆಚರಣೆ ಮಾಡಲಾಗುತ್ತಿದೆ ಎಂದು ಮಾಜಿ ಸಂಸದ ವಿ.ಎಸ್.ಉಗ್ರಪ್ಪ ತಿಳಿಸಿದರು.
ಇತ್ತೀಚೆಗೆ ಬಿಜೆಪಿ ಮತ್ತು ಆರ್.ಎಸ್.ಎಸ್ ನವರ ಹೇಳಿಕೆಗಳು ಸಂವಿಧಾನಕ್ಕೆ ಅಪಾಯ ಇದೆ ಎಂಬುದನ್ನು ತೋರಿಸುತ್ತಿವೆ. ಓ ನಿಟ್ಟಿನಲ್ಲಿ ರಾಷ್ಟçವ್ಯಾಪಿ ಜನರನ್ನು ಜಾಗೃತಿಗೊಳಿಸಲು ಬೆಳಾಗಂ ನಿಂದಲೇ ಕಾರ್ಯಕ್ರಮ ರೂಪಿಸುತ್ತಿದ್ದೇವೆ ಎಂದು ಹೇಳಿದರು.
೧೯೨೪ರ ಡಿಸೆಂಬರ್ ೨೬ ಮತ್ತು ೨೭ ರಂದು ಮಹಾತ್ಮ ಗಾಂಧಿ ಅಧಿಕೃತವಾಗಿ ಕಾಂಗ್ರೆಸ್ ನಾಯಕತ್ವ ವಹಿಸಿಕೊಂಡು ಬೆಳಗಾಂ ನಲ್ಲಿ ಎಐಸಿಸಿ ಅಧಿವೇಶನ ಮಾಡಿದ್ದರು. ಇದು ೧೦೦ ವರ್ಷ ಪೂರೈಸಿದ ಹಿನ್ನಲೆಯಲ್ಲಿ ಸಾಮರಸ್ಯ ಉಳಿಸಲು ಮತ್ತು ಸಾಮಾಜಿಕವಾಗಿ ಶೈಕ್ಷಣಿಕವಾಗಿ ದೇಶವನ್ನು ಅಭಿವೃದ್ಧಿಪಡಿಸಲು ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ವಿವರಿಸಿದರು.
ಸಮಾವೇಶದಲ್ಲಿ ಗಾಂಧಿ ವೈಚಾರಿಕತೆ ಮತ್ತು ನಾಥುರಾಮ್ ಗೂಡ್ಸೆ ವೈಚಾರಿಕತೆ ಕುರಿತು ತಿಳಿಸಲಾಗುತ್ತದೆ. ಪ್ರತಿ ವಿಧಾನ ಸಭಾ ಕ್ಷೇತ್ರದಿಂದ ಕನಿಷ್ಠ ನೂರು ಮಂದಿ ಭಾಗವಹಿಸಲು ಸೂಚಿಸಲಾಗಿದೆ. ಇಲ್ಲಿಗೆ ಆಗಮಿಸಿದ ಕಾರ್ಯಕರ್ತರುಗಳು ಇಲ್ಲಿನ ವಿಚಾರಗಳನ್ನು ತಮ್ಮ ಊರಿಗೆ ಹೋದಾಗ ಅಲ್ಲಿ ತಿಳಿಸುವ ಕೆಲಸವನ್ನು ಮಾಡುತ್ತಾರೆ. ೨೦೨೫ ರ ವರ್ಷ ಪೂರ್ತಿ ಕಾಂಗ್ರೆಸ್ ಸಂಘಟನೆಯ ಕೆಲಸ ಮಾಡುತ್ತದೆ ಎಂದು ತಿಳಿಸಿದರು.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ಈ ಕಾರ್ಯಕ್ರಮ ನಡೆಯುತ್ತಿರುವುದು ಸಂತೋಷದ ವಿಷಯ, ಕಾರ್ಯಕ್ರಮಕ್ಕೆ ಎಐಸಿಸಿ ನಾಯಕರುಗಳಾದ ರಾಹುಲ್ ಗಾಂಧಿ, ಸುರ್ಜೇವಾಲ ಸೇರಿದಂತೆ ಎಲ್ಲಾ ಕಾಂಗ್ರೆಸ್ ಅಧ್ಯಕ್ಷರುಗಳು ಮುಖಂಡರುಗಳು ಆಗಮಿಸಲಿದ್ದಾರೆ ಎಂದು ಹೇಳಿದರು.
ಶೀಘ್ರದಲ್ಲೇ ಜಾತಿಗಣತಿ ವರದಿ ಬಿಡುಗಡೆ : ವಿ.ಎಸ್.ಉಗ್ರಪ್ಪ
ಮೈಸೂರು: ಜಾತಿಗಣತಿ ವಿಚಾರವಾಗಿ ನಮ್ಮ ಸರ್ಕಾರ ೧೬೮ ಕೋಟಿ ಖರ್ಚು ಮಾಡಿ ಕಾಂತರಾಜ್ ಆಯೋಗದ ನೇತೃತ್ವದಲ್ಲಿ ಸಮೀಕ್ಷೆ ನಡೆಸಿದೆ. ಆದಷ್ಟು ಶೀಘ್ರದಲ್ಲಿ ಜಾತಿಗಣತಿ ವರದಿ ಬಿಡುಗಡೆ ಮಾಡುತ್ತೇವೆ ಎಂದು ಮಾಜಿ ಸಂಸದ ವಿ.ಎಸ್.ಉಗ್ರಪ್ಪ ವಿಶ್ವಾಸ ವ್ಯಕ್ತಪಡಿಸಿದರು. ಕಾಂಗ್ರೆಸ್ ಪಕ್ಷ ತನ್ನ ಚುನಾವಣಾ ಪ್ರಣಾಳಿಕೆಯಲ್ಲೇ ವರದಿ ಬಿಡುಗಡೆ ಮಾಡುವುದಾಗಿ ಹೇಳಿದೆ. ಕೆಲ ವಿಚಾರಗಳಿಂದ ಬಿಡುಗಡೆ ಮಾಡಲು ಸಾಧ್ಯವಾಗಿಲ್ಲ ಮುಂದಿನ ಸಚಿವ ಸಂಪುಟದಲ್ಲಿ ಬಿಡುಗಡೆ ಮಾಡುವುದಾಗಿ ಸಚಿವ ಎಚ್.ಕೆ.ಪಾಟೀಲ್ ಹೇಳಿದ್ದಾರೆ. ಹಾಗಾಗಿ ಶೀಘ್ರದಲ್ಲಿ ಇದು ಆಗಲಿದೆ ಎಂದು ಹೇಳಿದರು.
ಕಾಂಗ್ರೆಸ್ ಸರ್ಕಾರ ಪಥನವಾಗಲಿದೆ ಎಂಬ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿಕೆಗೆ ಗರಂ ಆದ ಅವರು, ಕೇಂದ್ರ ಸರ್ಕಾರ ಬಿದ್ದುಹೋಗುತ್ತೆ, ಮೋದಿ ರಾಜೀನಾಮೆ ಕೊಡುತ್ತಾರೆ ಎಂದರೆ ನಿಮಗೆ ಏನನಿಸುತ್ತದೆ. ೧೩೬ ಸ್ಥಾನವನ್ನು ಜನ ಕೊಟ್ಟಿದ್ದಾರೆ. ಯಾಕೆ ಸರ್ಕಾರ ಪಥನವಾಗಲಿದೆ ಎಂದು ಪ್ರಶ್ನಿಸಿದರು.
ವಿಜಯೇಂದ್ರ ಅವರ ಕೊಡುಗೆ ಏನು. ಯಡಿಯೂರಪ್ಪ ನಿಂದ ವಿಜಯೇಂದ್ರ ಹೊರತು ವಿಜಯೇಂದ್ರ ಅವರ ಕೊಡುಗೆ ಏನು ಇಲ್ಲ. ಹಾಗಾಗಿ ಅವರ ಹೇಳಿಕೆಗಳು ಸಮಂಜಸವಲ್ಲ ಎಂದು ಹೇಳಿದರು.
ಪವರ್ ಶೇರಿಂಗ್ ವಿಚಾರ ಕುರಿತು ಮಾತನಾಡಿದ ಅವರು, ಆಂತರಿಕ ವಿಚಾರಗಳನ್ನು ಸಾರ್ವಜನಿಕವಾಗಿ ಚರ್ಚೆ ಮಾಡೋಲ್ಲ. ಪಕ್ಷದ ಹೈಕಮಾಂಡ್ ಏನು ನಿರ್ಧಾರ ಕೈಗೊಳ್ಳುತ್ತದೊ ಅವರಿಗೆ ಬಿಟ್ಟಿದ್ದು. ಸಿದ್ಧರಾಮಯ್ಯ, ಖರ್ಗೆ, ಡಿ.ಕೆ.ಶಿವಕುಮಾರ್, ನೇತೃತ್ವದಲ್ಲಿ ಸರ್ಕಾರ ನಡೆಯುತ್ತಿದೆ ಎಂದು ಹೇಳಿದರು.