Friday, April 18, 2025
Google search engine

Homeರಾಜ್ಯಡಿ.27ರಂದು ಜೈ ಬಾಪು, ಜೈ ಭೀಮ್, ಜೈ ಸಂವಿಧಾನ ಸಮಾವೇಶ: ಡಿ.ಕೆ. ಶಿವಕುಮಾರ್

ಡಿ.27ರಂದು ಜೈ ಬಾಪು, ಜೈ ಭೀಮ್, ಜೈ ಸಂವಿಧಾನ ಸಮಾವೇಶ: ಡಿ.ಕೆ. ಶಿವಕುಮಾರ್

ಬೆಂಗಳೂರು : ಡಿ.27ರಂದು ನಡೆಯಲಿರುವ ಸಾರ್ವಜನಿಕ ಸಭೆಗೆ ಜೈ ಬಾಪು, ಜೈ ಭೀಮ್, ಜೈ ಸಂವಿಧಾನ ಸಮಾವೇಶ ಎಂದು ಹೆಸರಿಡಲಾಗಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.

ಬೆಳಗಾವಿ ಕ್ಲಬ್ ರಸ್ತೆಯ ಸಿಪಿಇಡಿ ಶಾಲಾ ಮೈದಾನದಲ್ಲಿ ಶಿವಕುಮಾರ್ ಅವರು ಮಾಧ್ಯಮಗೋಷ್ಠಿ ಉದ್ದೇಶಿಸಿ ಬುಧವಾರ ಮಾತನಾಡಿದರು. ಈ ಪ್ರದೇಶವನ್ನು ಮಹಾತ್ಮಾ ಗಾಂಧೀಜಿ ನವನಗರ ಎಂದು ಘೋಷಣೆ ಮಾಡಿದ್ದೇವೆ. 26 ರಂದು ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ಸಭೆಯನ್ನು ಗಾಂಧಿ ಬಾವಿ (ಪಂಪ ಸರೋವರ) ಬಳಿ ಹಮ್ಮಿಕೊಳ್ಳಲಾಗಿದೆ. 1924ರಲ್ಲಿ ನಡೆದ ಬೆಳಗಾವಿ ಕಾಂಗ್ರೆಸ್ ಅಧಿವೇಶನದಲ್ಲಿ ಮಹಾತ್ಮಾ ಗಾಂಧಿ ಅವರು ಅಧ್ಯಕ್ಷರಾಗಿದ್ದರು. ಇಂದು ಆ ಸ್ಥಾನದಲ್ಲಿ ಕರ್ನಾಟಕದವರೇ ಆದ ಮಲ್ಲಿಕಾರ್ಜುನ ಖರ್ಗೆ ಅವರು ಕುಳಿತಿರುವುದು ನಮ್ಮ ಹೆಮ್ಮೆಯ ವಿಚಾರ. ಕರ್ನಾಟಕದವರೇ ಆದ ಗಂಗಾಧರ ದೇಶಪಾಂಡೆ ಹಾಗೂ ಜವಾಹರ್ ಲಾಲ್ ನೆಹರು ಅವರು ಅಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾಗಿದ್ದರು. ಅವರೂ ಸೇರಿ ಬೆಳಗಾವಿಯಲ್ಲಿ ಈ ಅಧಿವೇಶನ ಮಾಡಿದ್ದರು. ಅಂದು 80 ಎಕರೆ ಜಾಗದಲ್ಲಿ ಅಧಿವೇಶನ ನಡೆದಿತ್ತು. ಇಂದು ಅದೇ ಸ್ಥಳದಲ್ಲಿ ಕಾರ್ಯಕಾರಿ ಸಮಿತಿ ಸಭೆ ಮಾಡುತ್ತಿದ್ದೇವೆ.” ಎಂದು ತಿಳಿಸಿದರು.

ಅಂದು ನಮ್ಮ ನಾಯಕರು ಸ್ವಾತಂತ್ರ್ಯ ಹೋರಾಟದ ನಾಯಕತ್ವ ವಹಿಸಿಕೊಂಡು ಈ ದೇಶಕ್ಕೆ ಮಾರ್ಗದರ್ಶನ ನೀಡಿದ್ದರು. ಈ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟು ಮಹಾತ್ಮರಾದರು. ಇದನ್ನು ಸ್ಮರಿಸಲು ನಾವು ಕಾರ್ಯಕ್ರಮ ರೂಪಿಸಿದ್ದೇವೆ. ಇದು ಕೇವಲ ಕಾಂಗ್ರೆಸ್ ಪಕ್ಷದ ಕಾರ್ಯಕ್ರಮವಲ್ಲ, ಎಲ್ಲರ ಕಾರ್ಯಕ್ರಮ. ಇಂದಿನ ಪರಿಸ್ಥಿತಿಯಲ್ಲಿ ದೇಶವನ್ನು ಯಾವ ದಿಕ್ಕಿನಲ್ಲಿ ಮುನ್ನಡೆಸಬೇಕು. ದೇಶಕ್ಕೆ ಯಾವ ರೀತಿ ಶಕ್ತಿ ತುಂಬಬೇಕು ಎಂದು ಈ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಚರ್ಚೆ ಮಾಡಲಿದ್ದೇವೆ” ಎಂದು ತಿಳಿಸಿದರು.

ಈ ಕಾರ್ಯಕ್ರಮದಲ್ಲಿ ಪಕ್ಷದ ಕಾರ್ಯಕಾರಿ ಸಮಿತಿ ಸದಸ್ಯರು, ದೇಶದ ವಿವಿಧ ರಾಜ್ಯಗಳ ಕಾಂಗ್ರೆಸ್ ಪಕ್ಷದ ಹಾಲಿ ಮುಖ್ಯಮಂತ್ರಿಗಳು, ಮಾಜಿ ಮುಖ್ಯಮಂತ್ರಿಗಳು, ಎಲ್ಲಾ ರಾಜ್ಯಗಳ ಶಾಸಕಾಂಗ ಪಕ್ಷದ ನಾಯಕರು, ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರು, ಎಲ್ಲಾ ಸಂಸತ್ ಸದಸ್ಯರು, ಶಾಸಕರು, ರಾಜ್ಯದುದ್ದಗಲದ ಕಾರ್ಯಕರ್ತರು ಹಾಗೂ ಸಾರ್ವಜನಿಕರಿಗೆ ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಹ್ವಾನ ನೀಡಿದ್ದೇವೆ” ಎಂದು ಹೇಳಿದರು.

ಕಾರ್ಯಕ್ರಮದ ವಿವರಗಳು: “1924ರ ಅಧಿವೇಶನದ ದಾಖಲೆಗಳನ್ನು ಸಂಗ್ರಹಿಸಿದ್ದು, ಅದನ್ನು ಪುಸ್ತಕ ಮಾಡಿ ನಾಳೆ ಬಿಡುಗಡೆ ಮಾಡುತ್ತಿದ್ದೇವೆ. 26ರಂದು ಬೆಳಗ್ಗೆ 10 ಗಂಟೆಗೆ ವೀರ ಸೌಧದಲ್ಲಿ ಗಾಂಧಿ ಅವರ ಪುತ್ಥಳಿ ಅನಾವರಣ ಮಾಡಲಾಗುವುದು. ಜತೆಗೆ ಛಾಯಾಚಿತ್ರ ಪ್ರದರ್ಶನಕ್ಕೆ ಚಾಲನೆ ನೀಡಲಾಗುವುದು. ಬೆಳಗ್ಗೆ 10.45ಕ್ಕೆ ಖಾದಿ ಮೇಳವನ್ನು ಉದ್ಘಾಟನೆ ಮಾಡಲಾಗುವುದು. 11.15ಕ್ಕೆ ಗಂಗಾಧರ ದೇಶಪಾಂಡೆ ಅವರ ಸ್ಮಾರಕವನ್ನು ನಾನು ಹಾಗೂ ಮುಖ್ಯಮಂತ್ರಿಗಳು ಅನಾವರಣ ಮಾಡಲಿದ್ದೇವೆ. ನಂತರ ಗಂಗಾಧರ ದೇಶಪಾಂಡೆ ಅವರ ಛಾಯಾಚಿತ್ರ ಪ್ರದರ್ಶನಕ್ಕೆ ಚಾಲನೆ ನೀಡಲಾಗುವುದು. ಮಧ್ಯಾಹ್ನ 3 ಗಂಟೆಗೆ ಕಾರ್ಯಕಾರಿ ಸಮಿತಿ ಸಭೆ ನಡೆಯಲಿದ್ದು, ರಾತ್ರಿ 7ಕ್ಕೆ ಎಐಸಿಸಿ ಅಧ್ಯಕ್ಷರಿಂದ ಭೋಜನಕೂಟ ಏರ್ಪಡಿಸಲಾಗಿದೆ.

27ರಂದು ಬೆಳಗ್ಗೆ 10.30ಕ್ಕೆ ಸುವರ್ಣಸೌಧದಲ್ಲಿ ಗಾಂಧಿ ಪ್ರತಿಮೆಯನ್ನು ಮಲ್ಲಿಕಾರ್ಜುನ ಖರ್ಗೆ ಹಾಗೂ ರಾಹುಲ್ ಗಾಂಧಿ ಅವರು ಅನಾವರಣಗೊಳಿಸಲಿದ್ದಾರೆ. ಮುಖ್ಯಮಂತ್ರಿಗಳು ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ಸಭಾಧ್ಯಕ್ಷರಾದ ಯು.ಟಿ ಖಾದರ್ ಹಾಗೂ ಸಭಾಪತಿಗಳಾದ ಬಸವರಾಜ ಹೊರಟ್ಟಿ ಅವರ ಮುಖಂಡತ್ವದಲ್ಲಿ ಈ ಕಾರ್ಯಕ್ರಮ ನಡೆಯಲಿದ್ದು, ಎಲ್ಲಾ ಪಕ್ಷದ ನಾಯಕರಿಗೆ ಆಹ್ವಾನ ನೀಡಲಾಗುವುದು. ಸ್ಥಳೀಯ ನಾಯಕರು, ರಾಜ್ಯದ ಎಲ್ಲಾ ಸಂಸದರನ್ನು ನಾವು ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದೇವೆ. 12 ಗಂಟೆಗೆ ಮುಖ್ಯಮಂತ್ರಿಗಳಿಂದ ಔತನಕೂಟ, ಮಧ್ಯಾಹ್ನ 1 ಗಂಟೆಗೆ ಸಾರ್ವಜನಿಕ ಸಮಾವೇಶ ನಡೆಯಲಿದೆ” ಎಂದು ತಿಳಿಸಿದರು.

RELATED ARTICLES
- Advertisment -
Google search engine

Most Popular