ಕೆ.ಆರ್.ಪೇಟೆ: ರೈತರಿಗೆ ಪರಹಾರ ನೀಡದೇ ಜಲಸೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ರಸ್ತೆ ಕಾಮಗಾರಿಯನ್ನು ಕೆಶಿಫ್ ಅಧಿಕಾರಿಗಳು ಆರಂಭಿಸಿರುವುದನ್ನು ವಿರೋಧಿಸಿ ರೈತರು ಪ್ರತಿಭಟನೆ ನಡೆಸಿದ್ದಾರೆ.
ತಾಲೂಕಿನ ಅಗ್ರಹಾರಬಾಚಹಳ್ಳಿ ಬಳಿ ಹಾದು ಹೋಗಿರುವ ರಸ್ತೆಗೆ ಭೂಮಿ ನೀಡಿದ ರೈತರಿಗೆ ವೈಜ್ಞಾನಿಕ ಪರಿಹಾರ ನೀಡದೇ ಪೋಲೀಸ್ ಸರ್ಪಗಾವಲಿನಲ್ಲಿ ಮುಂಜಾನೆ 5ಗಂಟೆಗೆ ಕೆಶಿಫ್ ಅಧಿಕಾರಿಗಳು, ಕಂದಾಯ ಅಧಿಕಾರಿಗಳ ತಂಡ ರಸ್ತೆ ಕಾಮಗಾರಿ ಆರಂಭಿಸಿದ್ದಾರೆ.
ವೈಜ್ಞಾನಿಕ ಪರಿಹಾರ ನೀಡದೇ ಏಕಾಏಕಿ ರಸ್ತೆ ಕಾಮಗಾರಿ ಆರಂಭಿಸಿರುವುದನ್ನು ವಿರೋಧಿಸಿ ನೂರಾರು ರೈತರು ಎತ್ತಿನಗಾಡಿಗಳೊಂದಿಗೆ ಬಂದು ಕಾಮಗಾರಿಗೆ ಅಡ್ಡಿಪಡಿಸಿದ್ದಾರೆ.
ವೈಜ್ಞಾನಿಕ ಪರಿಹಾರ ನೀಡಿ ಕಾಮಗಾರಿ ಆರಂಭಿಸಿ ಎಂದು ಪಟ್ಟು ಹಿಡಿದು ಎತ್ತಿನಗಾಡಿಗಳೊಂದಿಗೆ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ.
ಕೇವಲ ಹತ್ತಿಪ್ಪತ್ತು ಸಾವಿರ ರೂಗಳಿಗೆ ಬಡ ರೈತರಿಂದ ಭೂಮಿ ಬರೆಸಿಕೊಂಡಿರುವ ಕೆಶಿಫ್ ಅಧಿಕಾರಿಗಳು, ಕೋರ್ಟ್ ಗೆ ದಾವೆ ಹಾಕಿದ ಶ್ರೀಮಂತ ರೈತರಿಗೆ ಗುಂಟೆಗೆ 3ಲಕ್ಷ ರೂ ಪರಿಹಾರ ನೀಡಿದ್ದಾರೆ ಎಂದು ರೈತರ ಆರೋಪಿಸಿದ್ದಾರೆ.
ಶಾಸಕರಾದ ಮಂಜು ಅವರು, ರೈತರಿಗೆ ವೈಜ್ಞಾನಿಕ ಪರಿಹಾರ ನೀಡಿ ಕಾಮಗಾರಿ ಆರಂಭಿಸಿ ಎಂದು ತಾಕೀತು ಮಾಡಿದ್ದರೂ ಆ ಬಗ್ಗೆ ಗಮನ ಹರಿಸದೇ ದಬ್ಬಾಳಿಕೆ ಮೂಲಕ ಕೆಲಸ ಮಾಡಲು ಬಂದಿರುವ ಕೆಶಿಫ್ ಅಧಿಕಾರಿಗಳ ತಂಡದ ವಿರುದ್ಧ ರೈತರು ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರತಿಭಟನೆಯಲ್ಲಿ ಅಗ್ರಹಾರಬಾಚಹಳ್ಳಿ, ಚಿಕ್ಕೋಸಹಳ್ಳಿ, ಬಿ.ಕೋಡಿಹಳ್ಳಿ, ಚಿಕ್ಕೋನಹಳ್ಳಿ ಹಾಗೂ ಕೆ.ಆರ್.ಪೇಟೆ ಗ್ರಾಮಗಳ ನೂರಾರು ರೈತರು ಭಾಗಿಯಾಗಿದ್ದರು.