ಮೈಸೂರು: ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರ ಬಣ್ಣದ ಬಗ್ಗೆ ನೀಡಿದ್ದ ವಿವಾದಾತ್ಮಕ ಹೇಳಿಕೆಗೆ ಸಚಿವ ಜಮೀರ್ ಅಹ್ಮದ್ ಸಾರ್ವಜನಿಕವಾಗಿ ಕ್ಷಮೆಯಾಚಿಸಿದರು.
ಮೈಸೂರಿನಲ್ಲಿ ಮಾತನಾಡಿದ ಅವರು, ಜೆಡಿಎಸ್ ಕಾರ್ಯಕರ್ತರಿಗೆ ನೋವಾಗಿದ್ದರೆ ಕ್ಷಮೆ ಕೋರುತ್ತೇನೆ ಎಂದು ತಮ್ಮ ಹೇಳಿಕೆ ಬಹಳಷ್ಟು ವಿವಾದ ಸೃಷ್ಟಿಯಾಗ್ತಿದ್ದಂತೆ ಕ್ಷಮೆ ಕೋರಿದರು.
ನಾನು ಮತ್ತು ಕುಮಾರಸ್ವಾಮಿ ಅವರು ಆತ್ಮೀಯರಾಗಿದ್ದವರು. 24 ಗಂಟೆಯಲ್ಲಿ 14 ಗಂಟೆ ಜೊತೆಯಲ್ಲಿ ಇರ್ತಾ ಇದ್ದೊ. ಅವರು ನನ್ನ ಕುಳ್ಳ ಅಂತಾ ಇದ್ರು, ನಾನು ಕರಿಯಣ್ಣ ಅಂತಿದ್ದೆ. ಈಗ ಚುನಾವಣೆ ಹಿನ್ನೆಲೆ ಅದನ್ನು ದೊಡ್ಡ ವಿಚಾರ ಮಾಡ್ತಾ ಇದ್ದಾರೆ. ನಾನು ಮೊದಲ ಬಾರಿಗೆ ಕರಿಯಣ್ಣ ಅಂತಿಲ್ಲ. ನಾನು ಅಂತಹದ್ದು ಏನು ಹೇಳಿಲ್ಲ. ಪ್ರೀತಿಯಿಂದ ಅವರು ಕುಳ್ಳ ಅಂತಾ ಇದ್ರು, ನಾನು ಕರಿಯಣ್ಣ ಅಂತಾ ಇದ್ದೆ. ನನ್ನ ಮಾತಿಂದ ಯಾರಿಗಾದ್ರು ನಾವಾಗಿದ್ರೆ ನಾನು ಕ್ಷಮೆ ಕೇಳ್ತೀನಿ. ನನ್ನ ಹೇಳಿಕೆಯಿಂದ ಉಪಚುನಾವಣೆ ಮೇಲೆ ಪರಿಮಾಣ ಬೀರಲ್ಲ ಎಂದು ತಿಳಿಸಿದರು.
19 ರಂದು ವಕ್ಫ್ ಚುನಾವಣೆ ಇದೆ. ಈ ಹಿನ್ನೆಲೆ ಇಂದು ಸಭೆ ಕರೆದಿದ್ದೇವೆ. ಮತದಾರರು ಮಾತ್ರ ಭಾಗಿಯಾಗಿದ್ದಾರೆ. ವಕ್ಫ್ ಜಮೀನಿನ ವಿವಾದ ಇಲ್ಲಿ ಚರ್ಚೆ ಇಲ್ಲ. ವಕ್ಫ್ ಚುನಾವಣೆ ಪ್ರಚಾರ ಮಾತ್ರ ಮಾಡ್ತೀವಿ ಎಂದು ಸ್ಪಷ್ಟಪಡಿಸಿದರು.
ದೇವೇಗೌಡರ ಕುಟುಂಬ ಕೊಂಡುಕೊಳ್ಳಲು ಸಾಧ್ಯವಾ? ನನಗೆ ದೇವೇಗೌಡರ ಮೇಲೆ ಬಹಳ ಗೌರವವಿದೆ. ಈ ಹಿಂದೆ ಚುನಾವಣೆಯಲ್ಲಿ ಹೆಚ್‌ಡಿಕೆ ಮುಸ್ಲಿಂ ಮತಗಳು ಬೇಡ ಎಂದಿದ್ರು. ಈಗ ದುಡ್ಡು ಕೊಟ್ಟು ಖರೀದಿಸಲು ಮುಂದಾಗಿದ್ದಾರೆ. ಅದನ್ನು ಉಲ್ಲೇಖಸಿ ನಾನು ಹೇಳಿದ್ದೇನೆ ಅಷ್ಟೇ ಎಂದು ಜಮೀರ್ ಸ್ಪಷ್ಟಪಡಿಸಿದರು.