ನವದೆಹಲಿ: ಮುಂಬರುವ ಜಮ್ಮು ಮತ್ತು ಕಾಶ್ಮೀರದ ವಿಧಾನಸಭಾ ಚುನಾವಣೆಗೆ ಬಿಜೆಪಿ 44 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಇಂದು (ಆ.26) ಬಿಡುಗಡೆ ಮಾಡಿದೆ.
ಜಮ್ಮು ಕಾಶ್ಮೀರದಲ್ಲಿ ಒಟ್ಟು 90 ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ. ಈ ಬಾರಿಯ ವಿಧಾನಸಭೆ ಚುನಾವಣೆಯು ಸೆ.18, 25, ಹಾಗೂ ಅ.1 ರಂದು ಮೂರು ಹಂತಗಳಲ್ಲಿ ನಡೆಯಲಿದೆ ಮತ್ತು ಅ.4 ರಂದು ಮತ ಎಣಿಕೆ ನಡೆಯಲಿದೆ.
ಪುಲ್ವಾಮಾ ಜಿಲ್ಲೆಯ ರಾಜ್‌ಪೋರಾ ವಿಧಾನಸಭಾ ಕ್ಷೇತ್ರದಿಂದ ಅರ್ಷಿದ್ ಭಟ್, ಶೋಪಿಯಾನ್‌ನಿಂದ ಜಾವೇದ್ ಅಹ್ಮದ್ ಖಾದ್ರಿ, ಅನಂತನಾಗ್ ಪಶ್ಚಿಮದಿಂದ ಮೊಹಮ್ಮದ್ ರಫೀಕ್ ವಾನಿ, ಅನಂತನಾಗ್‌ನಿಂದ ಸೈಯದ್ ವಜಾಹತ್, ಕಿಶ್ತ್ವಾರ್ ವಿಧಾನಸಭೆ ಕ್ಷೇತ್ರದಿಂದ ಸುಶ್ರೀ ಶಗುನ್ ಪರಿಹಾರ್ ಮತ್ತು ದೋಡಾದಿಂದ ಗಜಯ್ ಸಿಂಗ್ ರಾಣಾ ಸ್ಪರ್ಧಿಸಲಿದ್ದಾರೆ.
ರಿಯಾಸಿ ಕ್ಷೇತ್ರದಿಂದ ಕುಲದೀಪ್ ರಾಜ್ ದುಬೆ, ಮಾತಾ ವೈಷ್ಣೋದೇವಿ ಕ್ಷೇತ್ರದಿಂದ ರೋಹಿತ್, ಪೂಂಚ್ ಹವೇಲಿ ಕ್ಷೇತ್ರದಿಂದ ಚೌಧರಿ ಅಬ್ದುಲ್ ಘನಿ, ಉಧಮ್‌ಪುರ ಪಶ್ಚಿಮ ಕ್ಷೇತ್ರದಿಂದ ಪವನ್ ಗುಪ್ತಾ, ರಾಮಗಢ (ಎಸ್‌ಸಿ ಮೀಸಲು) ಕ್ಷೇತ್ರದಿಂದ ಡಾ. ದೇವಿಂದರ್ ಕುಮಾರ್ ಮಣಿಯಾಲ್ ಹಾಗೂ ಅಖ್ನೂರ್ ಕ್ಷೇತ್ರದಿಂದ ಮೋಹನ್ ಲಾಲ್ ಭಗತ್ ಸ್ಪರ್ಧಿಸಲಿದ್ದಾರೆ.
ನಿನ್ನೆ (ಆ.25) ದೆಹಲಿ ಯಲ್ಲಿ ಪ್ರಧಾನಿ ಮೋದಿ, ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ, ಗೃಹ ಸಚಿವ ಅಮಿತ್ ಶಾ ಸೇರಿದಂತೆ ಹಲವರನ್ನೊಳಗೊಂಡ ಕೇಂದ್ರ ಚುನಾವಣೆ ಸಮಿತಿ ಸಭೆ ನಡೆಸಲಾಗಿತ್ತು. ಸಭೆ ನಡೆದ ಬೆನ್ನಲ್ಲೆ ಇಂದು ಬಿಜೆಪಿ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆಗೊಳಿಸಿದೆ.