ಪಟ್ನಾ: ಬಿಹಾರ ಲೋಕಸೇವಾ ಆಯೋಗ (ಬಿಪಿಎಸ್‌ಸಿ) ಡಿಸೆಂಬರ್ 13ರಂದು ನಡೆಸಿದ್ದ ಪರೀಕ್ಷೆಯನ್ನು ರದ್ದುಪಡಿಸಲು ಒತ್ತಾಯಿಸಿ ಆಮರಣಾಂತ ಉಪವಾಸ ನಡೆಸುತ್ತಿದ್ದ ‘ಜನ ಸೂರಜ್’ ಪಕ್ಷದ ಸ್ಥಾಪಕ ಪ್ರಶಾಂತ್ ಕಿಶೋರ್ ಅವರನ್ನು ಇಂದು ಮುಂಜಾನೆ ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಪ್ರತಿಭಟನನಿರತ ಸ್ಥಳದಿಂದ ಪ್ರಶಾಂತ್ ಕಿಶೋರ್ ಮತ್ತು ಅವರ ಬೆಂಬಲಿಗರನ್ನು ಪೊಲೀಸರು ಹೊರ ಕಳಿಸಿದ್ದಾರೆ. ಕಿಶೋರ್ ಅವರನ್ನು ಪಟ್ನಾದ ಏಮ್ಸ್ ಗೆ ವೈದ್ಯಕೀಯ ಪರೀಕ್ಷೆಗಾಗಿ ಕರೆದೊಯ್ದಿದ್ದಾರೆ ಎಂದು ಬೆಂಬಲಿಗರು ತಿಳಿಸಿದ್ದಾರೆ. ಪಟ್ನಾದ ಗಾಂಧಿ ಮೈದಾನದಲ್ಲಿ ಪ್ರಶಾಂತ್ ಕಿಶೋರ್ ಅವರು ಆಮರಣಾಂತ ಉಪವಾಸವನ್ನು ಕಳೆದ ಜ.2ರಂದು ಆರಂಭಿಸಿದ್ದರು.
ಡಿಸೆಂಬರ್ 13ರಂದು ನಡೆದ 70ನೇ ಬಿಪಿಎಸ್‌ಸಿ ಕಂಬೈನ್ಸ್ ನೇಮಕಾತಿ ಪರೀಕ್ಷೆಯ (ಸಿಸಿಇ) ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ ಎಂಬ ಆರೋಪ ಕೇಳಿ ಬಂದಿತ್ತು. ಈ ಹಿನ್ನೆಲೆ, ಪರೀಕ್ಷೆ ರದ್ದುಗೊಳಿಸುವಂತೆ ಆಗ್ರಹಿಸಿ ನೂರಾರು ಅಭ್ಯರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ. ಭಾನುವಾರ ಗಾಂಧಿ ಮೈದಾನದಿಂದ ಮುಖ್ಯಮಂತ್ರಿ ನಿವಾಸದ ಕಡೆಗೆ ಮೆರವಣಿಗೆ ಮಾಡುವಾಗ ಪ್ರತಿಭಟನಕಾರರು ಮತ್ತು ಪೊಲೀಸರ ನಡುವೆ ಘರ್ಷಣೆ ನಡೆದಿತ್ತು. ಈ ವೇಳೆ ಪೊಲೀಸರು ಪ್ರತಿಭಟನಕಾರರ ಮೇಲೆ ಲಾಠಿ ಚಾರ್ಜ್ ಮಾಡಿದ್ದರು. ಈ ನಡುವೆ, ಪ್ರತಿಭಟನನಿರತ ಅಭ್ಯರ್ಥಿಗಳಿಗೆ ಪ್ರಚೋದನೆ ನೀಡಿದ್ದಾರೆ ಎಂಬ ಆರೋಪದ ಮೇಲೆ ಪ್ರಶಾಂತ್ ಕಿಶೋರ್ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲು ಮಾಡಿದ್ದರು.