ಮಂಗಳೂರು (ದಕ್ಷಿಣ ಕನ್ನಡ): ರಾಜ್ಯದಲಿ ಕಳೆದ 20 ತಿಂಗಳಿನಿಂದಲೂ ನಿರಂತರ ಬೆಲೆ ಏರಿಕೆ, ದಲಿತರ ಹಣ ಲೂಟಿ, ಹಿಂದೂ ವಿರೋಧಿ ನೀತಿ, ಮುಸ್ಲಿಂ ಓಲೈಕೆ, ರೈತರ ನಿರ್ಲಕ್ಷ್ಯ ಹೀಗೆ ಸಾಲು ಸಾಲು ವೈಫಲ್ಯಕ್ಕೀಡಾಗಿರುವ ಕಾಂಗ್ರೆಸ್ ಸರ್ಕಾರದ ದುರಾಡಳಿತದ ವಿರುದ್ಧ ಇಡೀ ರಾಜ್ಯದ ಜನತೆ ಬೇಸತ್ತಿದ್ದಾರೆ. ಅಂತಹ ಜನ ವಿರೋಧಿ ಆಡಳಿತ ನೀಡುತ್ತಿರುವ ಭ್ರಷ್ಟ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ವತಿಯಿಂದ ಇಂದಿನಿಂದ ರಾಜ್ಯಾದ್ಯಂತ ಜನಾಕ್ರೋಶ ಯಾತ್ರೆಯು ಆರಂಭಗೊಳ್ಳಲಿದ್ದು ಏಪ್ರಿಲ್ 9 ಬುಧವಾರದಂದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆಯಲಿದೆ ಎಂದು ಮಂಗಳೂರು ನಗರದ ದಕ್ಷಿಣ ಕ್ಷೇತ್ರದ ಶಾಸಕ ವೇದವ್ಯಾಸ ಕಾಮತ್ ಹೇಳಿದ್ದಾರೆ. ಅವರು ಇಂದು ತನ್ನ ಕಚೇರಿಯಲ್ಲಿ ನಡೆದ ಪ್ರೆಸ್ ಮೀಟ್ ನಲ್ಲಿ ಮಾತನಾಡಿದರು.
ಜನತೆಯಲ್ಲಿ ಮಡುಗಟ್ಟಿರುವ ಆಕ್ರೋಶದ ಬಿಸಿಯನ್ನು ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಮುಟ್ಟಿಸುವ ಭಾಗವಾಗಿ ಏಪ್ರಿಲ್ 9 ರಂದು ಮಧ್ಯಾಹ್ನ 3 ಗಂಟೆಗೆ ಸರಿಯಾಗಿ ಮಂಗಳೂರಿನ ಅಂಬೇಡ್ಕರ್ ಸರ್ಕಲ್ ನಿಂದ ಕ್ಲಾಕ್ ಟವರ್ ವರೆಗೆ ಜನಾಕ್ರೋಶ ಯಾತ್ರೆ ನಡೆಯಲಿದ್ದು ಈ ಬೃಹತ್ ಪಾದಯಾತ್ರೆಯಲ್ಲಿ ನಮ್ಮ ಪಕ್ಷದ ರಾಜ್ಯಾಧ್ಯಕ್ಷರಾದ ಶ್ರೀ ಬಿ.ವೈ ವಿಜಯೇಂದ್ರ, ಆರ್ ಅಶೋಕ್, ಛಲವಾದಿ ನಾರಾಯಣ ಸ್ವಾಮಿ, ಅಶ್ವಥ್ ನಾರಾಯಣ್, ಸಿಟಿ ರವಿ, ನಳಿನ್ ಕುಮಾರ್ ಕಟೀಲ್, ಬ್ರಿಜೇಶ್ ಚೌಟ, ಸಹಿತ ಅನೇಕ ಪ್ರಮುಖ ನಾಯಕರು ಪಾಲ್ಗೊಳ್ಳಲಿದ್ದಾರೆ. ಈಗಾಗಲೇ ಈ ಹೋರಾಟದ ಯಶಸ್ಸಿಗೆ ಅಗತ್ಯವಿರುವ ಸಕಲ ಸಿದ್ಧತೆಗಳು ಬಹುತೇಕ ಪೂರ್ಣಗೊಂಡಿದೆ ಎಂದರು.