ಟೋಕಿಯೊ: ಹೊಸ ವರ್ಷದ ಮೊದಲ ದಿನವೇ ಜಪಾನ್ ನಲ್ಲಿ ಸರಣಿ ಭೂಕಂಪಗಳು ಸಂಭವಿಸಿದ್ದು, ಸೋಮವಾರದಿಂದ ಇಲ್ಲಿಯವರೆಗೆ 155 ಭೂಕಂಪಗಳು ಸಂಭವಿಸಿವೆ ಎಂದು ಜಪಾನ್ ಹವಾಮಾನ ಇಲಾಖೆ (ಜೆಎಂಎ) ತಿಳಿಸಿದೆ.
ಸೋಮವಾರದ 7.6 ಮತ್ತು 6 ತೀವ್ರತೆಯ ಎರಡು ಪ್ರಬಲ ಭೂಕಂಪಗಳೂ ಸಂಭವಿಸಿವೆ ಎಂದು ಹವಾಮಾನ ಇಲಾಖೆ ಬಹಿರಂಗಪಡಿಸಿದೆ.
ಭೂಕಂಪನದಿಂದ ಕನಿಷ್ಠ 12 ಮಂದಿ ಮೃತಪಟ್ಟಿದ್ದಾರೆ. ಬದುಕುಳಿದವರ ಹುಡುಕಾಟದಲ್ಲಿ ರಕ್ಷಣಾ ತಂಡ ನಿರತವಾಗಿದೆ ಎಂದು ಹೇಳಲಾಗಿದೆ. ಭೂಕಂಪದ ತೀವ್ರತೆಗೆ ಸಮುದ್ರದಲ್ಲಿ ಸುನಾಮಿ ಭೀತಿ ಆವರಿಸಿದ್ದು ದೊಡ್ಡ ದೊಡ್ಡ ಅಲೆಗಳ ಹೊಡೆತಕ್ಕೆ ಅನೇಕ ಮನೆಗಳು ನೆಲಸಮವಾಗಿದ್ದು ಎಂದು ಅಧಿಕಾರಿಗಳು ಹೇಳಿದ್ದಾರೆ.
ಭೂಕಂಪನದಿಂದ ವಾಜಿಮಾ ಪಟ್ಟಣದಲ್ಲಿ ಸುಮಾರು 30 ಕಟ್ಟಡಗಳು ಕುಸಿದಿವೆ. ವಿದ್ಯುತ್ ಕಡಿತದಿಂದ 32,700 ಕ್ಕೂ ಹೆಚ್ಚು ನಿವಾಸಿಗಳು ಕತ್ತಲೆಯಲ್ಲಿ ದಿನಕಳೆಯುವಂತಾಗಿದೆ ಎಂದು ಹೇಳಲಾಗಿದೆ. ಅಲ್ಲದೆ ಪ್ರಮುಖ ರಸ್ತೆಗಳು ಕುಸಿದ ಪರಿಣಾಮ ರಕ್ಷಣಾ ಕಾರ್ಯಾಚಣೆ, ವೈದ್ಯಕೀಯ ಸಹಾಯಕ್ಕೆ ತೊಡಕು ಉಂಟಾಗಿದೆ.
ಭೂಕಂಪದ ಕೇಂದ್ರಬಿಂದುವಾಗಿರುವ ವಾಜಿಮಾ ಪಟ್ಟಣದಲ್ಲಿ ಕನಿಷ್ಠ ಎಂಟು ಮಂದಿ ಸಾವನ್ನಪ್ಪಿರುವ ವರದಿಯಾಗಿವೆ ಎಂದು ಜಪಾನ್‌ನ ಸಾರ್ವಜನಿಕ ಪ್ರಸಾರಕ ಎನ್‌ಎಚ್‌ಕೆ ತಿಳಿಸಿದೆ.
ವಿಮಾನ, ರೈಲು ಸಂಚಾರ ಸ್ಥಗಿತ:
ಭೂಕಂಪದಿಂದ ನಾಲ್ಕು ಎಕ್ಸ್ ಪ್ರೆಸ್ ವೇಗಳು, ಎರಡು ಹೈಸ್ಪೀಡ್ ರೈಲು ಸೇವೆಗಳು, 34 ಸ್ಥಳೀಯ ರೈಲು ಮಾರ್ಗಗಳು ಮತ್ತು 16 ಫೆರ್ರಿ ಲೈನ್ ಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ಜಪಾನ್ ನ ಸಾರಿಗೆ ಸಚಿವಾಲಯ ತಿಳಿಸಿದೆ. ಅಷ್ಟು ಮಾತ್ರವಲ್ಲದೆ 38 ವಿಮಾನಗಳ ಹಾರಾಟವನ್ನು ರದ್ದುಗೊಳಿಸಲಾಗಿದೆ ಎಂದು ಹೇಳಲಾಗಿದೆ.