ಮಂಗಳೂರು : 15ನೇ ವರ್ಷದ ಜಪ್ಪಿನಮೊಗರು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ, ಜಪ್ಪಿನಮೊಗರು ಮಂಗಳೂರು ಇದರ ಆಶ್ರಯದಲ್ಲಿ ಇದೇ ಸೆ. 18ನೇ ಸೋಮವಾರದಿಂದ 21ನೇ ಗುರುವಾರದವರೆಗೆ ವಿಜೃಂಭಣೆಯಿಂದ ಆಚರಿಸಲಾಗುವುದು ಎಂದು ಸಮಿತಿಯ ಅಧ್ಯಕ್ಷ ಜೆ. ನಾಗೇಂದ್ರ ಕುಮಾರ್ ಮಂಗಳೂರಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ.
ಸೆ. 18 ರ ಸೋಮವಾರದಂದು ಸಂಜೆ 4 ಗಂಟೆಗೆ ಪೂರ್ಣಕುಂಭ ಸ್ವಾಗತದೊಂದಿಗೆ ಜಪ್ಪಿನಮೊಗರು ಶ್ರೀ ವೈದ್ಯನಾಥ ಮಹಾದ್ವಾರದಿಂದ ಶ್ರೀ ಗಣಪತಿಯ ವಿಗ್ರಹವನ್ನು ಹಾಗೂ ಭಕ್ತರ ಸಹಕಾರದೊಂದಿಗೆ ನಿರ್ಮಾಣಗೊಂಡ ಬೆಳ್ಳಿಯ ಪ್ರಭಾವಳಿಯನ್ನು ಶ್ರೀ ಗಣೇಶ ಮಂಟಪಕ್ಕೆ ತರಲಾಗುವುದು. ಆನಂತರ ಸಂಜೆ 6.30ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮದ ಉದ್ಘಾಟನಾ ಸಭಾ ಕಾರ್ಯಕ್ರಮವನ್ನು ಶ್ರೀಮತಿ ಸುರೇಖಾ ಎಸ್. ರೈ ಮತ್ತು ಸುರೇಶ ರೈ ದೀಪ ಬೆಳಗಿಸಿ ಉದ್ಘಾಟಿಸಲಿದ್ದಾರೆ. ಸಭಾಧ್ಯಕ್ಷತೆಯನ್ನು ರಮಾನಾಥ ಹೆಗಡೆ ವಹಿಸಲಿದ್ದಾರೆ. ಅಲ್ಲದೇ ಇನ್ನಿತರ ಗಣ್ಯರು ಭಾಗವಹಿಸಲಿರುವರು. ಆನಂತರ ವಿದುಷಿ ಸುನೀತಾ ಉಳ್ಳಾಲ್ ಇವರ ಶಿಷ್ಯವೃಂದದಿಂದ ನೃತ್ಯರೂಪಕ, ಹಾಗೂ ದೇವದಾಸ್ ಕಾಪಿಕಾಡ್‌ರವರು ರಚಿಸಿ, ನಿರ್ದೇಶಿಸಿದ ‘ನಾಯಿದ ಬೀಲ’ ತುಳು ಹಾಸ್ಯ ನಾಟಕ ನಡೆಯಲಿದೆ. ಸೆ.19ರಂದು ಬೆಳಿಗ್ಗೆ 7 ಗಂಟೆಗೆ ವೇದಮೂರ್ತಿ ಬ್ರಹ್ಮಶ್ರೀ ವಿಠಲದಾಸ್ ತಂತ್ರಿಗಳು, ದೇರೆಬೈಲ್ ಇವರ ಪೌರೋಹಿತ್ಯದಲ್ಲಿ ಶ್ರೀ ಮಹಾಗಣಪತಿ ದೇವರ ಪ್ರತಿಷ್ಠಾಪನೆ ನಡೆಯಲಿರುವುದು ಹಾಗೂ 14 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡ ಬೆಳ್ಳಿಯ ಪ್ರಭಾವಳಿಯನ್ನು ಶ್ರೀ ಮಹಾಗಣಪತಿ ದೇವರಿಗೆ ಸಮರ್ಪಿಸಲಾಗುವುದು. ಭಾಸ್ಕರ ಪಿ. ಮತ್ತು ಗೀತಾ ಪಿ. ಕಂರ್ಬೆಟ್ಟುರವರು ನಂದಾದೀಪ ಬೆಳಗಿಸಲಿರುವರು. ಬೆಳಿಗ್ಗೆ ಗಂಟೆ 9ಕ್ಕೆ ಪ್ರತಿಷ್ಠಾಪನಾ ಕಾರ್ಯಕ್ರಮವನ್ನು ಮಾಜಿ ಸಚಿವ ಕೃಷ್ಣ ಜೆ. ಪಾಲೆಮಾರ್ ಉದ್ಘಾಟಿಸಲಿದ್ದಾರೆ ಎಂದರು.