ಬೆಳಗಾವಿ: ಕಾಂಗ್ರೆಸ್ ಪಕ್ಷದಲ್ಲಿ ನಾಯಕತ್ವ ಬದಲಾವಣೆ ವಿಚಾರ ತಾತ್ಕಾಲಿಕವಾಗಿ ಶಮನವಾಗಿದ್ದರೂ ಪಕ್ಷದ ಆಂತರಿಕ ವಲಯದಲ್ಲಿ ಮಾತ್ರ ಕುರ್ಚಿ ಕುರುಕ್ಷೇತ್ರ ಸದ್ದಿಲ್ಲದೇ ನಡೆಯುತ್ತಿದೆ. ಈ ವಿಚಾರವಾಗಿ ನಾಯಕರು ದಿನಕ್ಕೊಂದು ಡಿನ್ನರ್ ಮೀಟಿಂಗ್ ನಡೆಸುವ ಮೂಲಕ ತಮ್ಮ-ತಮ್ಮ ಬಣಗಳ ಶಕ್ತಿ ಪ್ರದರ್ಶನ ನಡೆಸುತ್ತಿದ್ದಾರೆ.
ಇನ್ನೂ ಇತ್ತೀಚೆಗೆ ಡಿಸಿಎಂ ಡಿ.ಕೆ. ಶಿವಕುಮಾರ್ ಸುಮಾರು 40ಕ್ಕೂ ಹೆಚ್ಚು ಶಾಸಕರಿಗೆ ಔತಣ ಕೂಟ ನೀಡಿದ್ದರು. ಇದರ ಬೆನ್ನಲ್ಲೇ ಸಿದ್ದರಾಮಯ್ಯ ಅವರ ಆಪ್ತ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅವರು ಪಕ್ಷಾತೀತವಾಗಿ ದಲಿತ ಶಾಸಕರು, ಸಚಿವರು ಹಾಗೂ ಉದ್ಯಮಿಗಳ ಸಭೆ ನಡೆಸಿದ್ದು, ಈ ಬೆಳವಣಿಗೆ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಕೆರಳಿಸಿದೆ.
ಬೆಳಗಾವಿ ನಗರದ ಖಾಸಗಿ ಹೋಟೆಲ್‌ನಲ್ಲಿ ಮಂಗಳವಾರ ರಾತ್ರಿ ಸತೀಶ್ ಜಾರಕಿಹೊಳಿಯವರು ಸಭೆ ನಡೆಸಿದ್ದು, ಈ ಸಭೆಯಲ್ಲಿ ದಲಿತ ಮುಖ್ಯಮಂತ್ರಿ ವಿಷಯ ಪ್ರಸ್ತಾಪವಾಗದಿದ್ದರೂ ದಲಿತ ರಾಜಕಾರಣಿಗಳು ಹಾಗೂ ಉದ್ಯಮಿಗಳ ಸಮಸ್ಯೆ ಆಲಿಸುವ ನೆಪದಲ್ಲಿ ದಲಿತ ಸಿಎಂ ಬೇಡಿಕೆಯನ್ನು ಮುನ್ನೆಲೆಗೆ ತಂದಿದ್ದಾರೆಂಬ ಮಾತುಗಳು ಇದೀಗ ಕೇಳಿ ಬರುತ್ತಿದೆ.
ಈ ಔತಣಕೂಟದಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್. ಮುನಿಯಪ್ಪ, ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ್, ಟಿ. ರಘುಮೂರ್ತಿ, ಎ.ಆರ್. ಕೃಷ್ಣಮೂರ್ತಿ, ಕಾಂಗ್ರೆಸ್‌ನ ರಘುಮೂರ್ತಿ, ಪರಿಷತ್ತಿನ ಸದಸ್ಯ ಛಲವಾದಿ ನಾರಾಯಣಸ್ವಾಮಿ, ದುರ್ಯೋಧನ ಐಹೊಳೆ ಮತ್ತು ಬಿಜೆಪಿಯ ಹೊಳಲ್ಕೆರೆ ಶಾಸಕ ಎಂ. ಚಂದ್ರಪ್ಪ, ಜೆಡಿಎಸ್‌ನ ಕರೆಮ್ಮ ನಾಯಕ್ ಸೇರಿದಂತೆ ಎಲ್ಲಾ ಪಕ್ಷಗಳ 33 ಶಾಸಕರು ಭಾಗವಹಿಸಿದ್ದರು.
ಸಿದ್ದರಾಮಯ್ಯ ನಂತರ ರಾಜ್ಯದಲ್ಲಿ ದಲಿತ ನಾಯಕರಿಗೆ ಮುಖ್ಯಮಂತ್ರಿ ಸ್ಥಾನ ಸಿಗಬೇಕೆಂದು ಕೆಲ ದಲಿತ ಶಾಸಕರು ಬಯಸಿದ್ದಾರೆ. ಆದರೆ, ಗೃಹ ಸಚಿವ ಪರಮೇಶ್ವರ್ ಅವರ ಆಸಕ್ತಿಯ ಕೊರತೆ ಅವರನ್ನು ನಿರಾಶೆಗೊಳಿಸಿದೆ ಎಂದು ಶಾಸಕರೊಬ್ಬರು ಹೇಳಿದ್ದಾರೆ.
ಈ ಹಿಂದೆ ಮಾತನಾಡಿದ್ದ ಛಲವಾದಿ ನಾರಾಯಣ ಸ್ವಾಮಿಯವರು, ಕಾಂಗ್ರೆಸ್‌ನಲ್ಲಿರುವ ದಲಿತ ನಾಯಕರು ಪವರ್ ಲೆಸ್. ಅವರಿಗೆ ತಾಕತ್ತೇ ಇಲ್ಲ. ಪಕ್ಷವನ್ನು ಸರಿಯಾಗಿ ಕೇಳಿದ್ದರೆ 2013ರಲ್ಲಿಯೇ ದಲಿತರೊಬ್ಬರು ಮುಖ್ಯಮಂತ್ರಿಯಾಗುತ್ತಿದ್ದರು ಎಂದು ಹೇಳಿದ್ದರು. ಕರ್ನಾಟಕ ಕಾಂಗ್ರೆಸ್ ನಾಯಕತ್ವದ ಬಿಕ್ಕಟ್ಟನ್ನು ಪರಿಹರಿಸಬೇಕಾದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ನನ್ನ ಕೈಯಲ್ಲಿ ಏನೂ ಇಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ. ಹಾಗಾದರೆ ಹೈಕಮಾಂಡ್ ಯಾರು? ಕಸ ಹೊಡೆಯಲು ತಾವು ಅಧ್ಯಕ್ಷರಾಗಿರುವುದಾ? ಆ ತಾಕತ್ತು ನಿಮಗೇ ಇಲ್ಲವೇ ಎಂದು ಈ ವೇಳೆ ಲೇವಡಿ ಮಾಡಿದ್ದಾರೆ.
ಇನ್ನೂ ಏತನ್ಮಧ್ಯೆ ಅನುದಾನ ಬಿಡುಗಡೆ ಮಾಡುವಲ್ಲಿ ಸರ್ಕಾರ ನಿರ್ಲಕ್ಷ್ಯ ವಹಿಸುತ್ತಿದ್ದು, ಕೈಗಾರಿಕಾ ನಿವೇಶನಗಳನ್ನು ಮಂಜೂರು ಮಾಡಲು ಹಿಂಜರಿಯುತ್ತಿದೆ ಎಂದು ಕರ್ನಾಟಕ ದಲಿತ ಉದ್ಯಮಿಗಳ ಸಂಘದ ಸದಸ್ಯರು ಸರ್ಕಾರದ ವಿರುದ್ಧ ಆರೋಪ ಮಾಡಿದ್ದು, ಸತೀಶ್ ಜಾರಕಿಹೊಳಿ ಅವರೊಂದಿಗೆ ನಡೆದ ಭೋಜನಕೂಟದಲ್ಲಿ ಕರ್ನಾಟಕ ದಲಿತ ಉದ್ಯಮಿಗಳ ಸಂಘದ ಸದಸ್ಯರು ಈ ವಿಚಾರವನ್ನು ಪ್ರಸ್ತಾಪಿಸಿದ್ದಾರೆ.
ಈ ವೇಳೆ ಬಜೆಟ್‌ನಲ್ಲಿ ಘೋಷಿಸಿದಂತೆ ಸರ್ಕಾರವು 300 ಕೋಟಿ ರೂ.ಗಳನ್ನು ಮತ್ತು 2016 ರಿಂದ 2025 ರವರೆಗೆ ಕೆಐಎಡಿಬಿಗೆ ಬಾಕಿ ಇರುವ 1,092 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿಲ್ಲ ಹಾಗೂ ಕೈಗಾರಿಕಾ ಭೂಮಿಯ ಶೇ. 24 ರಷ್ಟು ಎಸ್‌ಸಿ/ಎಸ್‌ಟಿಗಳಿಗೆ ಮೀಸಲಿಡುವ ನಿಯಮವನ್ನು ಉಲ್ಲಂಘಿಸಲಾಗಿದ್ದು, 239 ಎಕರೆಗಳನ್ನು ಇತರರಿಗೆ ಅನ್ಯಾಯವಾಗಿ ಹಂಚಿಕೆ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.



