ನವದೆಹಲಿ: ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಮುಂದಿನ ಐಸಿಸಿ ಮುಖ್ಯಸ್ಥರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಪ್ರಸ್ತುತ ಅಧ್ಯಕ್ಷರಾಗಿರುವ ಗ್ರೆಗ್ ಬಾರ್ಕ್ಲೇ ಮೂರನೇ ಅವಧಿಯನ್ನು ಬಯಸದಿರಲು ನಿರ್ಧರಿಸಿದ ನಂತರ ಜಯ್ ಶಾ ಆ ಸ್ಥಾನಕ್ಕೆ ಏಕೈಕ ನಾಮನಿರ್ದೇಶಿತರಾಗಿದ್ದರು.
ಅಕ್ಟೋಬರ್ 2019 ರಿಂದ ಬಿಸಿಸಿಐ ಗೌರವ ಕಾರ್ಯದರ್ಶಿಯಾಗಿ ಮತ್ತು ಜನವರಿ 2021 ರಿಂದ ಏಷ್ಯನ್ ಕ್ರಿಕೆಟ್ ಕೌನ್ಸಿಲ್‌ನ ಅಧ್ಯಕ್ಷರಾಗಿ ಸೇವೆ ಸಲ್ಲಿಸಿರುವ ಜಯ್ ಶಾ ಅವರು ಮುಂದಿನ ಡಿಸೆಂಬರ್ 1ರಂದು ಐಸಿಸಿ ಅಧ್ಯಕ್ಷ ಸ್ಥಾನವನ್ನು ವಹಿಸಿಕೊಳ್ಳಲಿದ್ದಾರೆ ಎಂದು ಐಸಿಸಿ ತಮ್ಮ ವೆಬ್‌ಸೈಟ್ ನಲ್ಲಿ ತಿಳಿಸಿದೆ.
ಐಸಿಸಿ ಮುಖ್ಯಸ್ಥರಾಗಿ ನಾಮನಿರ್ದೇಶನಗೊಳಿಸಿದ್ದಕ್ಕೆ ವಿನಮ್ರ. ಕ್ರಿಕೆಟ್ ಜಾಗತೀಕರಣಕ್ಕೆ ಸದಸ್ಯ ರಾಷ್ಟ್ರಗಳೊಂದಿಗೆ ನಿಕಟವಾಗಿ ಕೆಲಸ ಮಾಡಲು ಬದ್ಧ ಎಂದು ಜಯ್ ಶಾ ಪ್ರತಿಕ್ರಿಯಿಸಿದ್ದರು.
ಕ್ರಿಕೆಟ್ ಅನ್ನು ಮತ್ತಷ್ಟು ಜಾಗತೀಕರಣಗೊಳಿಸಲು ಐಸಿಸಿ ತಂಡ ಮತ್ತು ನಮ್ಮ ಸದಸ್ಯ ರಾಷ್ಟ್ರಗಳೊಂದಿಗೆ ನಿಕಟವಾಗಿ ಕೆಲಸ ಮಾಡಲು ನಾನು ಬದ್ಧನಾಗಿದ್ದೇನೆ. ಬಹು ಸ್ವರೂಪಗಳ ಸಹಬಾಳ್ವೆಯನ್ನು ಸಮತೋಲನಗೊಳಿಸುವುದು, ಸುಧಾರಿತ ತಂತ್ರಜ್ಞಾನಗಳ ಅಳವಡಿಕೆಯನ್ನು ಉತ್ತೇಜಿಸುವುದು ಮತ್ತು ಹೊಸ ಜಾಗತಿಕ ಮಾರುಕಟ್ಟೆಗಳಿಗೆ ನಮ್ಮ ಮಾರ್ಕ್ಯೂ ಈವೆಂಟ್‌ಗಳನ್ನು ಪರಿಚಯಿಸುವ ಮುಖ್ಯವಾದ ನಿರ್ಣಾಯಕ ಘಟ್ಟದಲ್ಲಿ ನಾವು ನಿಂತಿದ್ದೇವೆ. ಕ್ರಿಕೆಟ್ ಅನ್ನು ಹಿಂದೆಂದಿಗಿಂತಲೂ ಹೆಚ್ಚು ಅಂತರ್ಗತ ಮತ್ತು ಜನಪ್ರಿಯಗೊಳಿಸುವುದು ನಮ್ಮ ಗುರಿಯಾಗಿದೆ ಎಂದು ಅಭಿಪ್ರಾಯಪಟ್ಟಿದ್ದರು.
ಲಾಸ್ ಏಂಜಲೀಸ್‌ನಲ್ಲಿ ನಡೆಯಲಿರುವ 2028 ರ ಒಲಿಂಪಿಕ್ಸ್‌ನಲ್ಲಿ ನಮ್ಮ ಕ್ರೀಡೆಯನ್ನು ಸೇರಿಸುವುದು ಕ್ರಿಕೆಟ್‌ನ ಬೆಳವಣಿಗೆಗೆ ಗಮನಾರ್ಹವಾದ ತಿರುವು ನೀಡುತ್ತದೆ. ಇದು ಕ್ರೀಡೆಯನ್ನು ಅಭೂತಪೂರ್ವ ರೀತಿಯಲ್ಲಿ ಮುನ್ನಡೆಸುತ್ತದೆ ಎಂದು ನನಗೆ ವಿಶ್ವಾಸವಿದೆ ಎಂದಿದ್ದರು.