ಮೈಸೂರು: ಜಯದೇವ ಹೃದ್ರೋಗ ಆಸ್ಪತ್ರೆ ದೇಶದಲ್ಲಿಯೇ ಮಾದರಿ ಆಸ್ಪತ್ರೆಯಾಗಿದ್ದು ಬಡವರಿಗೆ ಕೈಗೆಟುಕುವುದರಲ್ಲಿ ಗುಣಮಟ್ಟದ ಚಿಕಿತ್ಸೆಯನ್ನು ನೀಡಲಾಗುತ್ತಿದೆ ಎಂದು ಜಯದೇವ ಹೃದ್ರೋಗ ಮತ್ತು ವಿಜ್ಞಾನ ಸಂಸ್ಥೆಯ ಪ್ರಭಾರ ನಿರ್ದೇಶಕ ಡಾ. ರವೀಂದ್ರನಾಥ್ ಹೇಳಿದರು.
ಮೈಸೂರು ಜಯದೇವ ಆಸ್ಪತ್ರೆಗೆ ಶುಕ್ರವಾರ ಪ್ರಥಮ ಬಾರಿಗೆ ಭೇಟಿ ನೀಡಿ ಪರಿಶೀಲಿಸಿ ಮಾತನಾಡಿದ ಅವರು ಬೆಂಗಳೂರು, ಮೈಸೂರು, ಕಲ್ಬುರ್ಗಿ ಆಸ್ಪತ್ರೆಗಳು ಉತ್ತಮವಾಗಿ ಕೆಲಸ ನಿರ್ವಹಿಸುತ್ತಿವೆ. ಬೆಂಗಳೂರಿನ ಜಯದೇವ ಆಸ್ಪತ್ರೆಯ ಮುಖ್ಯ ಕಟ್ಟಡದಲ್ಲಿದ್ದ ತುರ್ತು ಚಿಕಿತ್ಸಾ ಘಟಕವನ್ನು ಇನ್ಫೋಸಿಸ್ ಬ್ಲಾಕ್‌ಗೆ ಸ್ಥಳಾಂತರಿಸಲಾಗಿದೆ. ಕಲ್ಬುರ್ಗಿ ಆಸ್ಪತ್ರೆಯ ಕೆಲಸ ಮುಗಿಯುವ ಹಂತದಲ್ಲಿದ್ದು ಆಗಸ್ಟ್ ತಿಂಗಳಲ್ಲಿ ಉದ್ಘಾಟನೆ ಮಾಡಲಿದ್ದೇವೆ. ಮೈಸೂರು ಜಯದೇವ ಆಸ್ಪತ್ರೆಯ ಆವರಣದಲ್ಲಿ ಆಸ್ಪತ್ರೆಗೆ ಬರುವ ರೋಗಿಯ ಕಡೆಯವರಿಗೆ ಉಳಿದುಕೊಳ್ಳಲು ಡಾರ್ಮೆಂಟರಿಯ ನಿರ್ಮಾಣವನ್ನು ಚುನಾವಣಾ ನೀತಿ ಸಂಹಿತೆ ಮುಗಿದ ಮೇಲೆ ಪ್ರಾರಂಭಿಸಲಾಗುವುದು. ಗುತ್ತಿಗೆ ಸಿಬ್ಬಂದಿಗೆ ಈಗಾಗಲೇ ಇನ್ಸುರೆನ್ಸ್ ಮಾಡಿಸಿದ್ದು ಆಸ್ಪತ್ರೆಯ ಎಲ್ಲಾ ಗುತ್ತಿಗೆ ಸಿಬ್ಬಂದಿಯವರಿಗೆ ಪಿ.ಎಫ್. ನೀಡಲು ಚಿಂತನೆ ನಡೆಸಿದ್ದೇವೆ. ಆಸ್ಪತ್ರೆಗೆ ಬರುವ ರೋಗಿಗಳ ಸಂಖ್ಯೆ ಪ್ರತಿದಿನ ಹೆಚ್ಚಾಗುತ್ತಿದೆ. ಡಾ. ಸಿ.ಎನ್. ಮಂಜುನಾಥ್‌ರವರು ಆಸ್ಪತ್ರೆಗೆ ಭದ್ರ ಬುನಾದಿಯನ್ನು ಹಾಕಿಕೊಟ್ಟಿದ್ದಾರೆ. ಅದನ್ನು ಮುಂದುವರೆಸಿಕೊಂಡು ಹೋಗುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.
ಈ ಸಂದರ್ಭದಲ್ಲಿ ವೈದ್ಯಕೀಯ ಅಧೀಕ್ಷಕ ಡಾ.ಕೆ.ಎಸ್. ಸದಾನಂದ್, ಡಾ.ದಿನೇಶ್, ಡಾ. ಸಂತೋಷ್, ಡಾ. ವೀಣಾನಂಜಪ್ಪ, ಡಾ.ಹೇಮ ಎಸ್., ಡಾ.ಭಾರತಿ, ಡಾ.ಮಧುಪ್ರಕಾಶ್, ಡಾ.ಜಯಪ್ರಕಾಶ್, ಡಾ. ರಜಿತ್, ಡಾ.ವಿಶ್ವನಾಥ್, ಡಾ.ಹರ್ಷ, ಡಾ. ಶ್ರೀನಿಧಿ ಹೆಗ್ಗಡೆ, ಡಾ. ಸಚಿನ್, ಡಾ. ಅಶ್ವಿನಿ, ಡಾ. ನಂಜಪ್ಪ, ಡಾ. ಮಂಜುನಾಥ್, ನಿರ್ದೇಶಕರ ಆಪ್ತ ಸಹಾಯಕ ಸಾಧಿಕ್ ಪಾಷಾ, ನರ್ಸಿಂಗ್ ಅಧೀಕ್ಷಕಿ ಯೋಗಲಕ್ಷ್ಮಿ, ಪಿಆರ್‌ಓ ವಾಣಿ, ಚಂಪಕಮಾಲ ಹಾಜರಿದ್ದರು.