ಪಿರಿಯಾಪಟ್ಟಣ: ಪಟ್ಟಣದ ತಾಲೂಕು ಆಡಳಿತ ಭವನದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಬ್ರಹ್ಮಶ್ರೀ ಶ್ರೀ ನಾರಾಯಣಗುರು ಹಾಗೂ ಶ್ರೀ ನುಲಿಯ ಚಂದಯ್ಯ ಜಯಂತಿ ಕಾರ್ಯಕ್ರಮ ಆಚರಿಸಲಾಯಿತು.
ಕನ್ನಡ ಸಾಹಿತ್ಯ ಪರಿಷತ್ ನಗರ ಘಟಕ ಅಧ್ಯಕ್ಷ ಎನ್.ಆರ್ ಕಾಂತರಾಜು ಅವರು ಮಾತನಾಡಿ ಸಮಾಜದಲ್ಲಿ ಹಿಂದುಳಿದ ವರ್ಗದ ಜನರ ಅಭಿವೃದ್ಧಿಗೆ ಶ್ರಮಿಸಿದ ಮಹಾನ್ ಸಂತರಲ್ಲಿ ಶ್ರೀ ನಾರಾಯಣ ಗುರು ಹಾಗೂ ನುಲಿಯ ಚಂದಯ್ಯ ಪ್ರಮುಖರಾಗಿದ್ದರು, ಹಿಂದುಳಿದ ವರ್ಗದವರಿಗೆ ದೇವಾಲಯ ಪ್ರವೇಶ ನಿರಾಕರಿಸಿದ ಸಂದರ್ಭ ಖುದ್ದು ಶಿವ ದೇವಾಲಯ ನಿರ್ಮಿಸುವ ಮೂಲಕ ದೇವಾಲಯಗಳನ್ನು ಗ್ರಂಥಾಲಯಗಳನ್ನಾಗಿ ಮಾಡಿ ಶಿಕ್ಷಣ ಕ್ರಾಂತ್ರಿಗೆ ಮುನ್ನುಡಿ ಬರೆದ ಬ್ರಹ್ಮಶ್ರೀ ನಾರಾಯಣ ಗುರುಗಳು ಸಮಾಜದಲ್ಲಿ ಆಚರಣೆಯಲ್ಲಿದ್ದ ಅನಿಷ್ಟ ಪದ್ಧತಿ ಮೂಢ ನಂಬಿಕೆಯಂತಹ ಆಚಾರ ವಿಚಾರಗಳನ್ನು ತೊಡೆದು ಹಾಕಲು ಶ್ರಮಿಸಿದ್ದರು ಎಂದರು.
ತಹಶೀಲ್ದಾರ್ ಕುಂ ಇ ಅಹಮದ್ ಅವರು ಮಾತನಾಡಿ ಶಿವಶರಣ ನುಲಿಯ ಚಂದಯ್ಯ ಕಾಯಕದ ಮೂಲಕವೇ ಆತ್ಮೋನ್ನತಿ ಕಂಡು ಕಾಯಕನಿಷ್ಠೆ ಮತ್ತು ಪ್ರಾಮಾಣಿಕತೆಗೆ ಹೆಸರಾದವರು ಇಂತಹ ಮಹಾನ್ ಸಂತರ ಪರಿಶ್ರಮದ ಫಲವಾಗಿ ಇಂದು ಸಮಾಜ ಬದಲಾವಣೆಗೆ ಸಾಕ್ಷಿಯಾಗಿದೆ, ಇಂದು ಇಡಿ ಕೇರಳ ಶೈಕ್ಷಣಿಕವಾಗಿ ದೇಶದಲ್ಲಿಯೇ ಮುಂದಿದೆ ಹೀಗಾಗಿ ನಾರಾಯಣ ಗುರು ಅವರನ್ನು ಕೇರಳದ ಬಸವಣ್ಣ ಎಂದು ಸಂಬೋಧಿಸಲಾಗುತ್ತಿದೆ ಎಂದರು.
ಈ ಸಂದರ್ಭ ಶಿರಸ್ತೆದಾರ್ ಶಕೀಲಾ ಬಾನು, ಆಹಾರ ಇಲಾಖೆ ಶಿರಸ್ತೆದಾರ್ ಸಣ್ಣಸ್ವಾಮಿ, ಪಶು ಸಂಗೋಪನೆ ಇಲಾಖೆ ಸಹಾಯಕ ನಿರ್ದೇಶಕ ಡಾ.ಸೋಮಯ್ಯ, ರೇಷ್ಮೆ ಇಲಾಖೆ ಸಹಾಯಕ ನಿರ್ದೇಶಕ ಮಾದೇಶ್,
ಆರ್ಯ ಈಡಿಗರ ಸಂಘದ ಅಧ್ಯಕ್ಷ ಪಿ.ವೈ ಮಲ್ಲೇಶ್, ಉಪಾಧ್ಯಕ್ಷ ಸಿ.ಎನ್ ನಾರಾಯಣ, ಮುಖಂಡರಾದ ಪಿ.ಮಹದೇವ್, ಪಿ.ಎನ್ ಮಾದು, ತಿಮ್ಮಪ್ಪ, ಪಾಪಣ್ಣ, ಕೆಂಪರಾಜು, ಕಾಂತರಾಜ್, ಗಿರೀಶ್, ಕೆ.ಕೆ.ಶಶಿ, ಪಿ.ಪಿ ಮಹದೇವ್, ಬಾಲಾಜಿ, ಮಹೇಶ್, ತಾಲೂಕು ಆಡಳಿತ ಕಚೇರಿ ಸಿಬ್ಬಂದಿ ಇದ್ದರು.
