ಮಂಡ್ಯ: ಜೆಡಿಎಸ್ ನೆಲಕಚ್ಚಿದೆ ಎಂಬ ಕೈ ನಾಯಕರ ಆರೋಪಕ್ಕೆ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ತಿರುಗೇಟು ನೀಡಿದ್ದು, ಜೆಡಿಎಸ್ ಎಲ್ಲಿ ನೆಲ ಕಚ್ಚಿದೆ?. ಎಂಎಲ್ ಎ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದಿರಬಹುದು. ವ್ಯತ್ಯಾಸ ಮೂರೆ ಸಾವಿರ ಇರುವುದು. ಕಾಂಗ್ರೆಸ್ ನಾಯಕರಿಂದ ಜೆಡಿಎಸ್ ನೆಲಕಚ್ಚಿಸಲು ಆಗಲ್ಲ ಎಂದರು.
ಮಂಡ್ಯದಲ್ಲಿ ನಾಮಪತ್ರ ಸಲ್ಲಿಕೆಗೆ ಮುನ್ನ ಮಾಧ್ಯಮದವರೊಂದಿಗೆ ಮಾತನಾಡಿದ ಹೆಚ್.ಡಿ.ಕುಮಾರಸ್ವಾಮಿ, ಇಂದು ಕೊನೆಯ ದಿನದ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಇದೆ. ಮಂಡ್ಯ ಲೋಕ ಕ್ಷೇತ್ರದ NDA ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸುತ್ತಿದ್ದೇನೆ. ಮಾಜಿ ಸಿಎಂ ಯಡಿಯೂರಪ್ಪ, ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಹಾಗೂ ಜಿಲ್ಲೆಯ ಮೈತ್ರಿ ಪಕ್ಷದ ನಾಯಕರು ಸಾಥ್ ನೀಡಲಿದ್ದಾರೆ ಎಂದರು.
ಜೆಡಿಎಸ್ ವಿರುದ್ದ ಕೈ ನಾಯಕರ ವಾಗ್ದಾಳಿ ವಿಚಾರವಾಗಿ ಪ್ರತಿಕ್ರಿಯಿಸಿ, ಕಾಂಗ್ರೆಸ್ ನವರು ನನ್ನ ವಿರುದ್ದ ವಾಗ್ದಾಳಿ ನಡೆಸುತ್ತಿದ್ದಾರೆ. ಅದಕ್ಕೆ ಜನರೇ ಉತ್ತರವನ್ನ ಕೊಡ್ತಾರೆ. ಈ ಚುನಾವಣೆಯಲ್ಲಿ ಜಿಲ್ಲೆಯ ತಂದೆ-ತಾಯಂದಿರು ದೊಡ್ಡ ಮಟ್ಟದಲ್ಲಿ ಆಶೀರ್ವಾದ ಮಾಡ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ರಾಜ್ಯ ರಾಜಕಾರಣ ಬಿಟ್ಟು ರಾಷ್ಟ್ರ ರಾಜಕಾರಣಕ್ಕೆ ಹೋಗುತ್ತಿರುವ ವಿಚಾರವಾಗಿ ಮಾತನಾಡಿ, ಅನಿವಾರ್ಯ ಪರಿಸ್ಥಿತಿಯಲ್ಲಿ ಲೋಕಸಭಾ ಚುನಾವಣೆಗೆ ಸ್ಪರ್ಧೆ ಮಾಡುತ್ತಿದ್ದೇನೆ. ಈ ಜಿಲ್ಲೆ ಮತ್ತು ರಾಜ್ಯಕ್ಕೆ ರೈತರ ಪರವಾಗಿ ನಿಲ್ಲುತ್ತೇನೆ ಎಂದರು.
ಗೆದ್ದರೇ ಕೇಂದ್ರ ಸಚಿವರಾಗ್ತಿರಂತೆ ಎಂಬ ವಿಚಾರವಾಗಿ ಮಾತನಾಡಿ, ಭಗವಂತನ ಇಚ್ಚೆ ಮುಂದೆ ನೋಡೋಣಾ ಎಂದರು.
ಡಿಕೆಶಿ, ಸಿಎಂ ಪದೇ ಪದೇ ಹೆಚ್ಡಿಕೆ, ಹೆಚ್ಡಿಡಿ ವಿರುದ್ದ ವಾಗ್ದಾಳಿ ನಡೆಸುತ್ತಿರುವ ಕುರಿತು ಮಾತನಾಡಿ, ಕಾಂಗ್ರೆಸ್ ನಾಯಕರು ಭವಿಷ್ಯದ ಆತಂಕದಲ್ಲಿದ್ದಾರೆ. ಅದಕ್ಕಾಗಿ ವೈಯಕ್ತಿಕವಾಗಿ ಟೀಕೆ ಮಾಡ್ತಿದ್ದಾರೆ. ಅವರಿಂದ ನಾನು ಸರ್ಟಿಫಿಕೆಟ್ ತಕೋಬೇಕಾ?. ಸಿಎಂ, ಡಿಸಿಎಂ ಹಳೆ ಮೈಸೂರು ಭಾಗ ಟಾರ್ಗೆಟ್. ಜೆಡಿಎಸ್ ಮುಗಿಸಬೇಕೆಂದ್ರೆ ಹಳೆ ಮೈಸೂರು ಭಾಗದಲ್ಲಿ ಜೆಡಿಎಸ್ ನ ಸೋಲಿಸಬೇಕು. ಅವರ ಆ ಗುರಿ ತಲುಪಲು ಸಾಧ್ಯವಿಲ್ಲ ಎಂದು ಟಾಂಗ್ ನೀಡಿದರು.
ಮಂಡ್ಯ ಜಿಲ್ಲೆ ಜನತೆ ಆಶೀರ್ವಾದಿಂದ ಇಡೀ ರಾಜ್ಯದ ಸಮಸ್ಯೆ ಬಗೆಹರಿಸಬಹುದು. ಲೋಕಸಭೆಗೆ ಆಯ್ಕೆಯಾದರೇ ನೀರಾವರಿ, ರೈತರ ಸಮಸ್ಯೆ ಬಗೆಹರಿಸುತ್ತೇನೆ. ಸಾಲಮನ್ನಾ ಜೊತೆಗೆ ರೈತರ ಬೆಳೆಗೆ ವೈಜ್ಞಾನಿಕ ಬೆಲೆಗಾಗಿ ನನ್ನ ಹೋರಾಟ. ರೈತರಿಗೆ ಆರ್ಥಿಕ ಶಕ್ತಿ ತುಂಬಲು ಪ್ರಯತ್ನ ಮಾಡುವುದಾಗಿ ತಿಳಿಸಿದರು.