Thursday, April 3, 2025
Google search engine

Homeರಾಜಕೀಯಬೆಲೆ ಏರಿಕೆ ಖಂಡಿಸಿ ಶೀಘ್ರವೇ ಜೆಡಿಎಸ್‌ನಿಂದ ರಾಜ್ಯಾದ್ಯಂತ ಉಗ್ರ ಹೋರಾಟ: ನಿಖಿಲ್ ಕುಮಾರಸ್ವಾಮಿ

ಬೆಲೆ ಏರಿಕೆ ಖಂಡಿಸಿ ಶೀಘ್ರವೇ ಜೆಡಿಎಸ್‌ನಿಂದ ರಾಜ್ಯಾದ್ಯಂತ ಉಗ್ರ ಹೋರಾಟ: ನಿಖಿಲ್ ಕುಮಾರಸ್ವಾಮಿ

ಬೆಂಗಳೂರು: ರಾಜ್ಯ ಸರ್ಕಾರದ ಬೆಲೆ ಏರಿಕೆ ಖಂಡಿಸಿ ಜೆಡಿಎಸ್‌ನಿಂದ ರಾಜ್ಯಾದ್ಯಂತ ಶೀಘ್ರವೇ ಉಗ್ರ ಹೋರಾಟ ಮಾಡುವುದಾಗಿ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ತಿಳಿಸಿದ್ದಾರೆ.

ಜೆಪಿ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದು 2 ವರ್ಷ ಕಳೆದಿದೆ. ಸಾಮಾನ್ಯ ಜನರ ಜೇಬಿಗೆ ಕತ್ತರಿ ಹಾಕುವ ಕೆಲಸ ಈ ಸರ್ಕಾರ ಮಾಡುತ್ತಿದೆ. ಜನ ಸಾಮಾನ್ಯರ ಮೇಲೆ ಸರ್ಕಾರ ಬೆಲೆ ಏರಿಕೆಯ ಹೊರೆಹಾಕಿದ್ದಾರೆ. ಬೆಲೆ ಏರಿಕೆ ಜನರನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ಕಸಕ್ಕೂ ಟ್ಯಾಕ್ಸ್ ಹಾಕುತ್ತಿದ್ದಾರೆ. ಮೆಟ್ರೋ, ಹಾಲು, ನೀರು, ಪೆಟ್ರೋಲ್, ಡಿಸೇಲ್ ಸೇರಿ ಎಲ್ಲಾ ಬೆಲೆ ಏರಿಕೆ ಆಗಿದೆ. ಇದನ್ನು ಖಂಡಿಸಿ ಜೆಡಿಎಸ್ ಪಕ್ಷ ಉಗ್ರ ಪ್ರತಿಭಟನೆ ಮಾಡುತ್ತದೆ. ಈ ವಾರದಲ್ಲಿ ಶಾಸಕರು, ಪದಾಧಿಕಾರಿಗಳು ಸಭೆ ಮಾಡಿ, ಹೋರಾಟದ ರೂಪುರೇಷೆ ಸಿದ್ದತೆ ಮಾಡುವುದಾಗಿ ತಿಳಿಸಿದರು.

ಬಿಜೆಪಿ ಮಾಡುತ್ತಿರುವ ಹೋರಾಟದಲ್ಲಿ ಜೆಡಿಎಸ್ ಭಾಗಿಯಾಗದ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಬೆಲೆ ಏರಿಕೆ ಖಂಡಿಸಿ ಬಿಜೆಪಿ ಅಹೋರಾತ್ರಿ ಧರಣಿ ಮಾಡುತ್ತಿದೆ. ಅಹೋರಾತ್ರಿ ಧರಣಿ ಜೊತೆಗೆ ಜನಾಕ್ರೋಶ ಯಾತ್ರೆ ಮಾಡುತ್ತಿದ್ದಾರೆ. ಮಿತ್ರ ಪಕ್ಷವಾಗಿ ಸದನದ ಒಳಗೆ, ಹೊರಗೆ ನಾವು ಒಟ್ಟಾಗಿ ಹೋರಾಟ ಮಾಡುತ್ತೇವೆ. ಬಿಜೆಪಿ ಅವರು ತನ್ನದೇ ಹೋರಾಟವನ್ನು ಮಾಡ್ತಿದ್ದಾರೆ. ಜೆಡಿಎಸ್ ಕೂಡಾ ಬೆಲೆ ಏರಿಕೆ ಬಗ್ಗೆ ಶೀಘ್ರವೇ ಹೋರಾಟ ಮಾಡುತ್ತದೆ ಅಂದರು.

ಬಿಜೆಪಿ-ಜೆಡಿಎಸ್ ನಡುವೆ ಲೋಕಸಭಾ ಚುನಾವಣೆಯಿಂದ ಸಂಬಂಧ ಬೆಳೆದಿದೆ. ಸಮನ್ವಯ ಮಾಡೋದಕ್ಕೆ ಕಮಿಟಿ ಆಗಬೇಕು. ಬಿಜೆಪಿ-ಜೆಡಿಎಸ್ ಸಮನ್ವಯ ಸಮಿತಿ ಮಾಡಿಕೊಳ್ಳುತ್ತೇವೆ. ನಮ್ಮಲ್ಲಿ ಯಾವುದೇ ಗೊಂದಲ ಇಲ್ಲ. ಆದರೆ ಸಮನ್ವಯ ಇನ್ನು ಜಾಸ್ತಿ ಆಗಬೇಕು. ಈ ನಿಟ್ಟಿನಲ್ಲಿ ಸಮನ್ವಯ ಸಮಿತಿ ರಾಜ್ಯ ಮಟ್ಟದಲ್ಲಿ ಮಾಡಿಕೊಳ್ಳಬೇಕು ಎಂದು ತಿಳಿಸಿದರು.

ಮುಸ್ಲಿಂಮರಿಗೆ ಗುತ್ತಿಗೆಯಲ್ಲಿ ಮೀಸಲಾತಿ ಕೊಟ್ಟಿರುವ ಸರ್ಕಾರದ ಕ್ರಮವನ್ನು ವಿರೋಧಿಸಿ ಮಾತನಾಡಿದ ಅವರು, ಒಂದು ಸಮುದಾಯಕ್ಕೆ ಸೀಮಿತವಾಗಿ ಮೀಸಲಾತಿ ಕೊಟ್ಟಿರೋದು ಸರಿಯಲ್ಲ. 2ಬಿ ಮೀಸಲಾತಿಯಲ್ಲಿ ಮುಸ್ಲಿಂಮರು ಬಿಟ್ಟು ಇನ್ಯಾರು ಇಲ್ಲ. ಅವರಿಗೆ ಮೀಸಲಾತಿ ಕೊಟ್ಟಿರೋದು ಸಂವಿಧಾನ ವಿರೋಧ ಎಂದು ಕಿಡಿಕಾರಿದರು.

ಡಿಸಿಎಂ ಡಿಕೆಶಿವಕುಮಾರ್ ಅವರು ನನ್ನ ಕೈಗೆ ಪೆನ್ನು ಪೇಪರ್ ಕೊಡಿ ಅಂದರು. ಹಾಗಾದ್ರೆ 136 ಸ್ಥಾನ ಕಾಂಗ್ರೆಸ್‌ಗೆ ಬರಲು ಮುಸ್ಲಿಂಮರು ಮಾತ್ರ ಕಾರಣನಾ? ಬೇರೆ ಸಮುದಾಯ ನಿಮಗೆ ಮತ ಹಾಕಿಲ್ಲವಾ? ಮುಸ್ಲಿಂಮರಿಗೆ ಮೀಸಲಾತಿ ಕೊಡುವ ನಿಮ್ಮ ಅಜೆಂಡಾ ಏನು? 2ಬಿಗೆ ಮೀಸಲಾತಿ ಕೊಟ್ಟಂತೆ 3ಎ, 3ಬಿಗೂ ಮೀಸಲಾತಿ ಕೊಡಿ. ಕಾಂಗ್ರೆಸ್ ಅವರು ಬಿಜೆಪಿ ವಿರುದ್ದ 40% ಕಮಿಷನ್ ಆರೋಪ ಮಾಡಿದರು. ಈಗ ನಿಮ್ಮ ಪಕ್ಷದವರೇ ಕಾಂಗ್ರೆಸ್ ಸರ್ಕಾರದಲ್ಲಿ ಎಷ್ಟು ಕಮಿಷನ್ ಇದೆ ಎಂದು ಕೇಳುತ್ತಿದ್ದಾರೆ. 4% ಮೀಸಲಾತಿ ಕೊಟ್ಟಿರುವ ಮುಸ್ಲಿಂ ಸಮುದಾಯಕ್ಕೆ ಕಮಿಷನ್‌ನಲ್ಲಿ ಡಿಸ್ಕೌಂಟ್ ಇದೆಯಾ ಎಂದು ಪ್ರಶ್ನಿಸಿದರು.

ಕೇವಲ ಒಂದು ಸಮುದಾಯ ಮೆಚ್ಚಿಸಲು, ಮುಸ್ಲಿಂಮರನ್ನು ಒಲೈಕೆ ಮಾಡಲು ಮೀಸಲಾತಿ ಕೊಟ್ಟಿರೋದು ಸರಿಯಲ್ಲ. ಮುಸ್ಲಿಂಮರಿಗೆ ಮೀಸಲಾತಿ ಕೊಡೋಕೆ ನಮ್ಮ ವಿರೋಧ ಇಲ್ಲ. ಆದರೆ ಒಂದು ಸಮುದಾಯ ಬದಲು ಎಲ್ಲಾ ಸಮುದಾಯಕ್ಕೆ ಮೀಸಲಾತಿ ಕೊಡಿ ಎಂದು ಆಗ್ರಹಿಸಿದರು.

RELATED ARTICLES
- Advertisment -
Google search engine

Most Popular