ಹೊಸದಿಲ್ಲಿ: ರಾಷ್ಟ್ರೀಯ ಪರೀಕ್ಷಾ ಮಂಡಳಿ (NTA) ೨೦೨೪ನೇ ಸಾಲಿನ ಮುಖ್ಯ ಜಂಟಿ ಪ್ರವೇಶ ಪರೀಕ್ಷೆ (ಜೆಇಇ)ಯ ಫಲಿತಾಂಶ ಪ್ರಕಟವಾಗಿದೆ. ಇಂಜಿನಿಯರಿಂಗ್ ಪ್ರವೇಶ ಪರೀಕ್ಷೆಯಲ್ಲಿ ೨೩ ಅಭ್ಯರ್ಥಿಗಳು ೧೦೦ಕ್ಕೆ ೧೦೦ ಅಂಕಗಳನ್ನು ಗಳಿಸಿದ್ದಾರೆ. ಇವರಲ್ಲಿ ತೆಲಂಗಾಣದವರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಮುಖ್ಯ ಪರೀಕ್ಷೆಯ ಮೊದಲ ಆವೃತ್ತಿಯಲ್ಲಿ ೧೧.೭೦ ಲಕ್ಷ ಅಭ್ಯರ್ಥಿಗಳು ಹಾಜರಾಗಿದ್ದರು. ಇವರಲ್ಲಿ ತೆಲಂಗಾಣದ ೭, ಹರಿಯಾಣದ ಇಬ್ಬರು, ಆಂಧ್ರಪ್ರದೇಶ, ರಾಜಸ್ಥಾನ ಮತ್ತು ಮಹಾರಾಷ್ಟ್ರದ ತಲಾ ಮೂವರು, ದೆಹಲಿಯ ಇಬ್ಬರು, ಗುಜರಾತ್, ಕರ್ನಾಟಕ ಮತ್ತು ತಮಿಳುನಾಡಿನ ತಲಾ ಒಬ್ಬರು ಪೂರ್ಣ ಅಂಕ ಪಡೆದಿದ್ದಾರೆ.
ಪರೀಕ್ಷೆಯನ್ನು ಸುಗಮವಾಗಿ ನಡೆಸಲು ಮತ್ತು ಮೇಲ್ವಿಚಾರಣೆ ಮಾಡಲು ಕೇಂದ್ರ ನಿಯಂತ್ರಣ ಕೊಠಡಿಯನ್ನು ತೆರೆಯಲಾಗಿತ್ತು. ೨ ರಾಷ್ಟ್ರೀಯ ಸಂಯೋಜಕರು, ೧೮ ಪ್ರಾದೇಶಿಕ ಸಂಯೋಜಕರು, ೩೦೩ ನಗರ ಸಂಯೋಜಕರು, ೧,೦೮೩ ವೀಕ್ಷಕರು, ೧೫೦ ತಾಂತ್ರಿಕ ವೀಕ್ಷಕರು ಹಾಗೂ ೧೬೨ ಉಪ ವೀಕ್ಷಕರನ್ನು ನಿಯೋಜಿಸಲಾಗಿತ್ತು. ಪರೀಕ್ಷೆಯಲ್ಲಿ ಅವ್ಯವಹಾರವನ್ನು ತಡೆಗಟ್ಟಲು ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿ ಸಿಸಿಟಿವಿ ಅಳವಡಿಸಲಾಗಿತ್ತು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಪರೀಕ್ಷೆಯು ಅಸ್ಸಾಮಿ, ಬಂಗಾಳಿ, ಇಂಗ್ಲಿಷ್, ಗುಜರಾತಿ, ಹಿಂದಿ, ಕನ್ನಡ, ಮಲಯಾಳಂ, ಮರಾಠಿ, ಒಡಿಯಾ, ಪಂಜಾಬಿ, ತಮಿಳು, ತೆಲುಗು ಮತ್ತು ಉರ್ದು ಭಾಷೆಗಳಲ್ಲಿ ನಡೆದಿತ್ತು. ಅಲ್ಲದೇ ವಿದೇಶಗಳಲ್ಲಿ ಮನಾಮ, ದೋಹಾ , ದುಬೈ, ಕಠ್ಮಂಡು, ಮಸ್ಕತ್, ರಿಯಾದ್, ಶಾರ್ಜಾ, ಸಿಂಗಾಪುರ, ಕುವೈತ್ ಸಿಟಿ, ಕೌಲಾಲಂಪುರ್, ಲಾಗೋಸ್/ಅಬುಜಾ, ಕೊಲಂಬೊ, ಜಕಾರ್ತ, ಮಾಸ್ಕೋ, ಒಟ್ಟಾವಾ, ಪೋರ್ಟ್ ಲೂಯಿಸ್, ಬ್ಯಾಂಕಾಕ್ ಮತ್ತು ವಾಷಿಂಗ್ಟನ್ ಡಿಸಿಯಲ್ಲಿಯೂ ನಡೆಸಲಾಗಿತ್ತು.
ಅಲ್ಲದೇ ಮೊದಲ ಬಾರಿಗೆ ಅಬುಧಾಬಿ, ಹಾಂಗ್ ಕಾಂಗ್ ಮತ್ತು ಓಸ್ಲೋದಲ್ಲಿ ನಡೆಸಲಾಗಿತ್ತು. ಪರೀಕ್ಷೆ ಎರಡನೇ ಆವೃತ್ತಿಯನ್ನು ಏಪ್ರಿಲ್‌ನಲ್ಲಿ ನಿಗದಿಪಡಿಸಲಾಗಿದೆ. ಜೆಇಇ-ಮೇನ್ಸ್ ಪೇಪರ್ ೧ ಮತ್ತು ಪೇಪರ್ ೨ ರ ಫಲಿತಾಂಶಗಳ ಆಧಾರದ ಮೇಲೆ, ಅಭ್ಯರ್ಥಿಗಳು ಜೆಇಇ -ಅಡ್ವಾನ್ಸ್ಡ್ ಪರೀಕ್ಷೆಗೆ ಹಾಜರಾಗಲು ಅರ್ಹತೆ ಗಿಟ್ಟಿಸಿಕೊಳ್ಳಲಿದ್ದಾರೆ. ಈ ಪರೀಕ್ಷೆಯು ದೇಶದ ೨೩ ಪ್ರಮುಖ ಭಾರತೀಯ ತಂತ್ರಜ್ಞಾನ ಸಂಸ್ಥೆಗಳಿಗೆ ( ಐಐಟಿ) ಪ್ರವೇಶ ಪಡೆಯಲು ಇರುವ ಒಂದು ಮಾನದಂಡವಾಗಿದೆ.