ಚಿಕ್ಕಮಗಳೂರು: ಜಿಲ್ಲೆಯ ಕಳಸ ತಾಲೂಕಿನ ಬಸ್ತಿಗದ್ದೆ ಗ್ರಾಮದ ಜಿಪ್ ಚಾಲಕ ನಾಗೇಶ್ ಎಂಬಾತನ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸುಳ್ಳು ಆರೋಪ ಮಾಡಿ ಹಲ್ಲೆ ನಡೆಸಿದ್ದ ಕುದುರೆಮುಖ ಪೊಲೀಸ್ ಠಾಣೆಯ ಕಾನ್ಸ್ ಸ್ಟೇಬಲ್ ನನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಸಿದ್ದೇಶ್ ಎಂದು ಗುರುತಿಸಲಾಗಿದೆ. ಕುದುರೆಮುಖ ಪೊಲೀಸ್ ಠಾಣೆಯಲ್ಲಿ ಪೇದೆಯಾಗಿ ಕಾರ್ಯನಿರ್ವಹಿಸುತ್ತಿದ್ದ ಸಿದ್ದೇಶ್ ಎಂಬಾತ ಮೃತ ಜಿಪ್ ಚಾಲಕ ನಾಗೇಶ್ ಎಂಬಾತನ ಮೇಲೆ ಹಲ್ಲೆ ನಡೆಸಿ ಕಿರುಕುಳ ನೀಡಿದ್ದ.
ಇದರಿಂದ ಮನನೊಂದ ನಾಗೇಶ್ ಡೆತ್ ನೋಟ್ ಬರೆದಿಟ್ಟು ಆ.13 ರಂದು ಆತ್ಮಹತ್ಯೆ ಮಾಡಿಕೊಂಡಿದ್ದ ಇದೀಗ ಡೆತ್ ನೋಟ್ ಪೊಲೀಸರಿಗೆ ಸಿಕ್ಕಿದ್ದು, ಇದರಲ್ಲಿ ಪೊಲೀಸರ ಕಾಟಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಬರೆದಿದ್ದ ಎನ್ನಲಾಗಿದೆ. ತನ್ನ ಬಗ್ಗೆ ಅಪವಾದ ಬರುತ್ತಿದ್ದಂತೆ ಪೇದೆ ಸಿದ್ದೇಶ್ ಗೋವಾದಲ್ಲಿ ತಲೆಮರೆಸಿಕೊಂಡಿದ್ದ, ಅದರಂತೆ ಇದೀಗ ಆರೋಪಿಯ ಜಾಡು ಹಿಡಿದು ಹೊರಟ ಪೊಲೀಸರು ಆರೋಪಿ ಸಿದ್ದೇಶ್ ನನ್ನು ಗೋವಾದಲ್ಲಿ ಬಂಧಿಸಿ ಕರೆತಂದಿದ್ದಾರೆ. ಜೊತೆಗೆ ಆತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಇನ್ನು ನಾಗೇಶ್ ಆತ್ಮಹತ್ಯೆಯ ಬಳಿಕ ತಾಲೂಕಿನ ದಲಿತ ಹಾಗೂ ಪ್ರಗತಿಪರ ಸಂಘಟನೆಗಳು ಆಕ್ರೋಶ ಹೊರಹಾಕಿದ್ದು, ಕೂಡಲೇ ಆರೋಪಿಯನ್ನು ಬಂಧಿಸುವಂತೆ ಆಗ್ರಹಿಸಿದ್ದರು. ಅಷ್ಟೇ ಅಲ್ಲದೆ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳುವವರೆಗೂ ಮರಣೋತ್ತರ ಪರೀಕ್ಷೆಗೆ ಬಿಡುವುದಿಲ್ಲ ಎಂದು ಕುಟುಂಬಸ್ಥರ ಪಟ್ಟು ಹಿಡಿದಿದ್ದರು.
ಬಳಿಕ ಮೂಡಿಗೆರೆ ಶಾಸಕಿ ನಯನ ಮೋಟಮ್ಮ ಈ ಬಗ್ಗೆ ಸಂತ್ರಸ್ತ ಕುಟುಂಬಸ್ಥರ ಬಳಿ ದೂರವಾಣಿ ಮೂಲಕ ಮಾತಾಡಿದ ಮನವೊಲಿಸಿದ ಬಳಿಕವೇ ಉಳಿದ ಕಾರ್ಯ ನಡೆಯಿತು.
ಮೃತ ನಾಗೇಶ್ ಕಳಸ ಸಮೀಪದ ಸಂಸೆ ಎನ್ನುವ ಎಸ್ಟೇಟ್ನಲ್ಲಿ ಜೀಪ್ ಚಾಲಕನಾಗಿ ಕೆಲಸ ಮಾಡುತ್ತಿದ್ದ. ಎಂದಿನಂತೆ ತನ್ಮ ಕೆಲಸ ಮುಗಿಸಿ ಜುಲೈ 17ರಂದು ಮನೆಗೆ ಬರುತ್ತಿದ್ದ ವೇಳೆ ಕುದುರೆಮುಖ ಪೊಲೀಸ್ ಠಾಣೆಯ ಪೇದೆ ಸಿದ್ದೇಶ್, ರಸ್ತೆಯ ಮಧ್ಯೆದಲ್ಲಿ ಎಣ್ಣೆ ಪಾರ್ಟಿ ಮಾಡುತ್ತಿದ್ದ.
ಈ ವೇಳೆ ಹೋಗಲು ಜಾಗ ಇಲ್ಲದಿದ್ದಾಗ ಜಿಪ್ ನಿಂದ ಇಳಿದು ಯಾಕೆ ರಸ್ತೆಯ ಮಧ್ಯದಲ್ಲಿ ಪಾರ್ಟಿ ಮಾಡುತ್ತಿದ್ದೀರಿ. ಸೈಡ್ ಅಲ್ಲಿ ಕೂತು ಮಾಡಿ ಎಂದು ತಿಳಿ ಹೇಳಿದ್ದಾನೆ. ನಾಗೇಶ್ ನ ಈ ಮಾತಿನಿಂದ ಸಿಟ್ಟಾದ ಸಿದ್ದೇಶ್, ಆತನ ಮೇಲೆ ಮನಬಂದಂತೆ ಹಲ್ಲೆ ಮಾಡಿದ್ದಾನೆ. ಜೊತೆಗೆ ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದಾನೆ ಎಂದು ಆರೋಪಿಸಿದಲ್ಲದೇ ತನ್ನ ಮೇಲೆ ಹಲ್ಲೆಗೆ ಯತ್ನಿಸಿದ್ದಾನೆ ಎಂದು ಸುಳ್ಳು ಎಫ್‌ಐಆರ್ ಸಹ ದಾಖಲು ಮಾಡಿದ್ದ. ಇದರಿಂದ ಸಿಟ್ಟಾದ ನಾಗೇಶ್ ಕೂಡ ಕುದುರೆಮುಖ ಠಾಣೆಯಲ್ಲಿ ಸಿದ್ದೇಶ್ ಕುಡಿದ ಮತ್ತಿನಲ್ಲಿ ಹಲ್ಲೆ ಮಾಡಿರುವ ಬಗ್ಗೆ ದೂರು ನೀಡಿದ್ದ.
ಈ ಪ್ರಕರಣದ ಗಂಭೀರವಾಗಿ ಪರಿಗಣಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಕ್ರಮ್ ಆಮ್ಟೆ ಕೊಪ್ಪ, DYSP ನೇತೃತ್ವದಲ್ಲಿ ತಂಡ ಸಹ ರಚನೆ ಮಾಡಿದ್ದರು. ಆದರೆ ಇತ್ತ ತನಿಖೆ ನಡೆಯುತ್ತಿರುವಾಗಲೇ ನಾಗೇಶ್ ತನ್ನ ಮನೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.