ಭೇರ್ಯ: ಜ್ಞಾನ ವಿಕಾಸ ಕಾರ್ಯಕ್ರಮವು ಮಹಿಳೆಯರ ಜ್ಞಾನವನ್ನು ಹೆಚ್ಚಿಸುವುದರ ಜೊತೆಗೆ ಅವರಿಗೆ ಧೈರ್ಯ, ನಂಬಿಕೆ, ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ. ಇಂದಿನ ದಿನ ನೀವೆಲ್ಲಾ ಇಷ್ಟು ಬದಲಾವಣೆಯಾಗಲು ಕಾರಣ ಜ್ಞಾನ ವಿಕಾಸ ಕಾರ್ಯಕ್ರಮ ಎಂದು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಸ್ಥೆಯ ಮಾನವ ಸಂಪನ್ಮೂಲ ವಿಭಾಗದ ಉಪನ್ಯಾಸಕ ಹರೀಶ್ ಹೇಳಿದರು.
ಅವರು ಭೇರ್ಯ ಗ್ರಾಮದ ಕೆ.ಪಿ.ಕಲ್ಯಾಣ ಮಂಟಪದಲ್ಲಿ ಕೆ.ಆರ್.ನಗರ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ.ಸಿ.ಟ್ರಸ್ಟ್ ವತಿಯಿಂದ ಜ್ಞಾನವಿಕಾಸ ಕಾರ್ಯಕ್ರಮದಡಿಯಲ್ಲಿ ಸ್ವ-ಉದ್ಯೋಗ ಪ್ರೇರಣಾ ಶಿಬಿರ ಮತ್ತು ಜ್ಞಾನವಿಕಾಸ ಕೇಂದ್ರ ಉದ್ಘಾಟಿಸಿ ಮಾತನಾಡಿದರು.
ಹೆಣ್ಣುಮಕ್ಕಳು ಅಬಲೆಯಲ್ಲ ಸಬಲೆ ಅವಳಲ್ಲಿ ಒಂದು ಶಕ್ತಿ ಇರುತ್ತದೆ ಆ ಶಕ್ತಿಯನ್ನು ಹೊರಗೆ ತರುವಂತಹ ಕೆಲಸ ಆಗುತ್ತಿದೆ. ಜ್ಞಾನವಿಕಾಸ ಕಾರ್ಯಕ್ರಮದಿಂದ ತುಂಬಾ ಮಹಿಳೆಯರು ಬದಲಾವಣೆ ಆಗಿದ್ದಾರೆ. ಡಾ.ಹೇಮಾವತಿ ಅಮ್ಮನವರ ಮಾರ್ಗದರ್ಶನಲ್ಲಿ ಈ ಕಾರ್ಯಕ್ರಮ ನಡೆಯುತ್ತಿದೆ ಎಂದರು.
ತಾಲೂಕು ವಿಚಕ್ಷಣಾಧಿಕಾರಿ ಸ್ವರಾಜ್ ಮಾತನಾಡಿ, ಕೆ.ಆರ್.ನಗರ ವಲಯ ವ್ಯಾಪ್ತಿಯಲ್ಲಿ ೨೫ ಜ್ಞಾನವಿಕಾಸ ಕೇಂದ್ರ ಸ್ಥಾಪಿಸಲಾಗಿದೆ, ಸ್ವ- ಉದ್ಯೋಗ, ಬಗ್ಗೆ ಮಾಹಿತಿ ನೀಡಿದ ಅವರು ಮಹಿಳೆಯರು ಸ್ಚ ಉದ್ಯೋಗದ ಮೂಲಕ ತಮ್ಮ ಹಸನಾದ ಬದುಕನ್ನು ರೂಪಿಸ ಕೊಳ್ಳ ಬಹುದು ಎಂದು ತಿಳಿಸಿದರು.