ಬೆಂಗಳೂರು: ರಾಜ್ಯದ ಖಾಸಗಿ ಕೈಗಾರಿಕೆಗಳು ಹಾಗೂ ಇತರೆ ಸಂಸ್ಥೆಗಳಲ್ಲಿ ಕನ್ನಡಿಗರಿಗೆ ಆಡಳಿತಾತ್ಮಕ ಹುದ್ದೆಗಳಿಗೆ ಶೇ.೫೦ ಹಾಗೂ ಆಡಳಿತಾತ್ಮಕವಲ್ಲದ ಹುದ್ದೆಗಳಿಗೆ ಶೇ.೭೫ ಮೀಸಲಾತಿ ನಿಗದಿಪಡಿಸುವ ವಿಧೇಯಕಕ್ಕೆ ಕಳೆದ ಸೋಮವಾರ ನಡೆದ ರಾಜ್ಯ ಸಚಿವ ಸಂಪುಟ ಸಭೆ ಅನುಮೋದನೆ ನೀಡಿತ್ತು. ಈಗ ಕಾರ್ಪೊರೇಟ್ ಲಾಬಿಯ ಒತ್ತಡಕ್ಕೆ ಮಣಿದು ವಿಧೇಯಕವನ್ನು ತಡೆಹಿಡಿಯುವ ನಿರ್ಧಾರ ಮಾಡಿದೆ. ಈ ನಿರ್ಧಾರ ಕನ್ನಡಿಗರ ಪಾಲಿಗೆ ಅತ್ಯಂತ ಕರಾಳ ಮತ್ತು ಆತ್ಮಘಾತಕತನದ ನಿರ್ಧಾರವಾಗಿದೆ ಎಂದು ಕರವೇ ನಾರಾಯಣಗೌಡ ಬೇಸರ ವ್ಯಕ್ತಪಡಿಸಿದ್ದಾರೆ.
ಸಂಪುಟ ಸಭೆಯ ಅನುಮೋದನೆ ಪಡೆದಿದ್ದ ವಿಧೇಯಕವನ್ನು ಈಗ ತಡೆಹಿಡಿದಿರುವುದಕ್ಕೆ ಕರ್ನಾಟಕದಲ್ಲಿ ನೆಲೆನಿಂತಿರುವ ಕಾರ್ಪೊರೇಟ್ ಶಕ್ತಿಗಳು ಕಾರಣ ಎಂಬುದು ಈಗ ಸ್ಪಷ್ಟವಾಗಿದೆ. ಸರ್ಕಾರ ವಿಧೇಯಕ ತರುತ್ತಿರುವುದು ಗೊತ್ತಾಗುತ್ತಿದ್ದಂತೆ ಹಲವಾರು ಉದ್ಯಮಿಗಳು ವಿರೋಧ ವ್ಯಕ್ತಪಡಿಸಿದ್ದಾರೆ. ನಾಡಿನ ಮಕ್ಕಳು ಕನ್ನಡದ ನೆಲದಲ್ಲೇ ಉದ್ಯೋಗ ವಂಚಿತರಾಗುವುದನ್ನು ತಡೆಯುವ ಪ್ರಯತ್ನವನ್ನು ಈ ಪಟ್ಟಭದ್ರ ಹಿತಾಸಕ್ತಿಗಳು ತಡೆದಿವೆ ಎಂದು ಕಿಡಿಕಾರಿದ್ದಾರೆ.
ರಾಜ್ಯ ಸರ್ಕಾರವನ್ನು ಆಯ್ಕೆ ಮಾಡಿರುವುದು ಕೋಟ್ಯಂತರ ಸಂಖ್ಯೆಯ ಸಾಮಾನ್ಯ ಜನರೇ ಹೊರತು ಈಗ ವಿಧೇಯಕವನ್ನು ವಿರೋಧಿಸುತ್ತಿರುವ ಬೆರಳೆಣಿಕೆಯಷ್ಟು ಸ್ವಾರ್ಥ ಉದ್ಯಮಿಗಳಲ್ಲ. ರಾಜ್ಯ ಸರ್ಕಾರ ತಮ್ಮನ್ನು ಕಾಪಾಡುತ್ತದೆ ಎಂದು ಆಸೆಗಣ್ಣಿನಿಂದ ಕಾಯುತ್ತಿರುವ ಸಾಮಾನ್ಯ ಜನರ ಪರವಾಗಿ ನಿಲ್ಲಬೇಕಿತ್ತೇ ಹೊರತು, ಸರ್ಕಾರವನ್ನು ಬೆದರಿಸುವ ಕುತಂತ್ರ ಮಾಡುತ್ತಿರುವ ಉದ್ಯಮಿಗಳ ಪರವಾಗಿ ಅಲ್ಲ. ಎಂಥದ್ದೇ ಒತ್ತಡ ಬಂದರೂ ಅದನ್ನು ಎದುರಿಸಿ ನಿಲ್ಲುವ ಬದಲು ಸರ್ಕಾರ ಇಂಥ ಶಕ್ತಿಗಳ ಎದುರು ಮಂಡಿಯೂರಿ ನಿಲ್ಲುವುದು ಶೋಚನೀಯವಾಗಿದೆ, ದುರದೃಷ್ಟಕರವಾಗಿದೆ. ಇದನ್ನು ನಾವು ಯಾರೂ ನಿರೀಕ್ಷಿಸಿರಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಇದೇ ವಿಷಯ ಸಂಬಂಧ ಮುಖ್ಯಮಂತ್ರಿ ಸಿದ್ಧರಾಮಯ್ಯನವರನ್ನು ಎರಡು ಬಾರಿ ಭೇಟಿ ಮಾಡಿದಾಗಲೂ ಕನ್ನಡಿಗರ ಹಿತರಕ್ಷಣೆ ವಿಷಯದಲ್ಲಿ ಯಾವುದೇ ರಾಜಿ ಇಲ್ಲ ಎಂದೇ ಅವರು ಹೇಳಿದ್ದರು. ಆದರೆ ಪಟ್ಟಭದ್ರ ಹಿತಾಸಕ್ತಿಗಳು ಅವರ ಕೈಕಟ್ಟಿಹಾಕಿರುವಂತೆ ಕಂಡುಬರುತ್ತಿದೆ. ಇಂಥ ಶಕ್ತಿಗಳಿಗೆ ಮುಖ್ಯಮಂತ್ರಿಗಳು ಅಂಜಬಾರದು, ಇಟ್ಟಹೆಜ್ಜೆಯನ್ನು ಹಿಂದಕ್ಕೆ ಇಡಬಾರದು ಎಂದು ಆಗ್ರಹಿಸುತ್ತೇನೆ ಎಂದಿದ್ದಾರೆ.
ಕರ್ನಾಟಕದಲ್ಲಿ ಉದ್ಯಮ ನಡೆಸುತ್ತಿರುವ ಹಲವಾರು ಉದ್ಯಮಗಳಲ್ಲಿ ಉದ್ದೇಶಪೂರ್ವಕವಾಗಿ ಕನ್ನಡರಿಗೆ ಉದ್ಯೋಗ ನೀಡುತ್ತಿಲ್ಲ. ಇತರ ರಾಜ್ಯಗಳಿಂದ (ವಿಶೇಷವಾಗಿ ಉತ್ತರ ಭಾರತದಿಂದ) ಅಭ್ಯರ್ಥಿಗಳನ್ನು ಕರೆತಂದು ತುಂಬಿಕೊಳ್ಳಲಾಗುತ್ತಿದೆ. ಇದರಿಂದಾಗಿ ಬೆಂಗಳೂರು ಮತ್ತು ಪ್ರಮುಖ ನಗರಗಳು ವಲಸಿಗರಿಂದ ತುಂಬಿ ತುಳುಕುವಂತಾಗಿದ್ದು ಮೂಲನಿವಾಸಿಗಳ ಪಾಡು ಹೇಳತೀರದಂತಾಗಿದೆ. ಇಂಥ ಸಂಸ್ಥೆಗಳಿಗೆ ಕಡಿವಾಣ ಹಾಕದೇ ಹೋದರೆ ಉದ್ಯೋಗ ಮಾತ್ರವಲ್ಲ, ಕರ್ನಾಟಕವೂ ಕನ್ನಡಿಗರ ಪಾಲಿಗೆ ಉಳಿಯುವುದಿಲ್ಲ ಎಂದಿದ್ದಾರೆ.
ಕರ್ನಾಟಕದ ಉದ್ಯೋಗಗಳು ಕನ್ನಡಿಗರ ಹಕ್ಕು, ನಾವು ಕೇಳುತ್ತಿರುವ ಭಿಕ್ಷೆಯಲ್ಲ. ನಮ್ಮ ಹಕ್ಕನ್ನು ಕಸಿಯಲು ಯಾರಿಗೂ ಬಿಡುವುದಿಲ್ಲ. ಈ ಹಾದಿಯಲ್ಲಿ ಅಡ್ಡ ಬರುವ ಶಕ್ತಿಗಳು ಎಷ್ಟೇ ಪ್ರಬಲವಾಗಿದ್ದರೂ ನಾವು ಹೋರಾಟ ಕೈಬಿಡುವುದಿಲ್ಲ ಎಂದಿದ್ದಾರೆ.