ರಾಮನಗರ: ಸಮುದಾಯಗಳಲ್ಲಿ ಯಾವ ರೀತಿ ಮಲೇರಿಯಾ ಜ್ವರ ಪರಿಣಾಮಕಾರಿಯಾಗಿ ರೋಗವನ್ನು ಉಂಟುಮಾಡುತ್ತದೆ ಎಂಬುವುದನ್ನು ಜನರಲ್ಲಿ ಅರಿವು ಮೂಡಿಸುವುದು ಈ ಕಾರ್ಯಕ್ರಮದ ಮುಖ್ಯ ಗುರಿಯಾಗಿದೆ ಎಂದು ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ. ಶಶಿಧರ್ ಅವರು ತಿಳಿಸಿದರು.
ಅವರು ಇಂದು ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿ ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿಗಳ ಕಚೇರಿ, ಜಿಲ್ಲಾ ತರಬೇತಿ ಸಂಸ್ಥೆಯ ಸಂಯುಕ್ತಾಶ್ರಯದಲ್ಲಿ ವಿಶ್ವ ಮಲೇರಿಯಾ ದಿನ-೨೦೨೪ರ ಅಂಗವಾಗಿ ಆಯೋಜಿಸಲಾಗಿದ್ದ ಜಾಗೃತಿ ಜಾಥಾ ಹಾಗೂ ಅರಿವು ಮೂಡಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಕರ್ನಾಟಕದಲ್ಲಿ ೨೦೨೫ ರ ವೇಳೆಗೆ ಮಲೇರಿಯಾ ನಿರ್ಮೂಲನೆ ಮಾಡುವ ಗುರಿಹೊಂದಿದ್ದು, ಈ ನಿಟ್ಟಿನಲ್ಲಿ ಮಲೇರಿಯಾ ನಿಯಂತ್ರಿಸಲು ಇಲಾಖೆಯೊಂದಿಗೆ ಎಲ್ಲರು ಸಹಕರಿಸಬೇಕು ಆದ್ದರಿಂದ ಎಲ್ಲರ ಸಹಭಾಗಿತ್ವದೊಂದಿಗೆ ಮಲೇರಿಯಾವನ್ನು ಸೋಲಿಸೋಣ ಎಂದರು.
ಸ್ವಚ್ಛನೀರು ಈ ಸೊಳ್ಳೆಗಳ ಉತ್ಪತ್ತಿ ತಾಣವಾಗಿದ್ದು, ಬಾವಿ, ಕೆರೆ-ಕಟ್ಟೆಗಳು ಮತ್ತು ಹಳ್ಳ,ಕಲ್ಯಾಣಿಗಳಲ್ಲಿ ನೀರಿನ ಸ್ವಚ್ಛತೆಯನ್ನು ಕಾಪಾಡುವಂತೆ ಹಾಗೂ ಮನೆಯ ಸುತ್ತಮುತ್ತ ನೀರು ನಿಲ್ಲದಂತೆ ಎಚ್ಚರ ವಹಿಸಬೇಕು. ಮಲೇರಿಯಾ ಹರಡದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಬೇಕು ಎಂದು ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಅರ್ಪಿತ ಕೆ.ಜೆ ತಿಳಿಸಿದರು. ಮಲೇರಿಯಾ ನಿರ್ಮೂಲನೆ ಮಾಡುವ ನಿಟ್ಟಿನಲ್ಲಿ ಪ್ರತಿಜ್ಞಾ ವಿಧಿಯನ್ನು ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ರಾಜೇಂದ್ರ ಅವರು ಬೋಧಿಸಿದರು.
ವಿಶ್ವ ಮಲೇರಿಯಾ ದಿನಾಚರಣೆ ಅಂಗವಾಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿಯಿಂದ ಬಿ.ಇ.ಓ ಕಚೇರಿಯ ವರೆಗೆ ಹೆಚ್ಚು ಸಮಾನತೆಯ ಜಗತ್ತಿಗೆ ಮಲೇರಿಯಾ ವಿರುದ್ಧ ಹೋರಾಟವನ್ನು ತೀವ್ರಗೊಳಿಸೋಣ ಎಂಬ ಘೋಷವಾಕ್ಯದೊಂದಿಗೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಾದ ಡಾ. ನಿರಂಜನ್, ಡಿ.ಎಲ್.ಒ ಡಾ. ಮಂಜುನಾಥ್, ಆರ್.ಸಿ.ಹೆಚ್.ಒ ಡಾ. ರಾಜು, ಡಿ.ಟಿ.ಒ ಡಾ. ಕುಮಾರ್, ಡಿ.ಎಮ್.ಒ ಆರೋಗ್ಯ ಮೇಲ್ವಿಚಾರಣಾಧಿಕಾರಿ ವಿಶ್ವೇಶ್ವರಯ್ಯ, ಕೀಟಶಾಸ್ತ್ರಜ್ಞೆ ಸೌಮ್ಯ, ವಿಠಲ್, ಜಿಲ್ಲಾ ನೋಡಲ್ ಪ್ರಯೋಗಶಾಲಾ ತಂತ್ರಜ್ಞರಾದ ಸೌಭಾಗ್ಯ, ಆರೋಗ್ಯ ಸಿಬ್ಬಂದಿಗಳು ಹಾಗೂ ಅರೆ ವೈದ್ಯಕೀಯ ಶಿಬಿರಾರ್ಥಿಗಳು ಹಾಜರಿದ್ದರು