ರಾಮನಗರ: ಇಂದು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಸ್ನಾತಕೋತ್ತರ ವಿಶ್ವವಿದ್ಯಾಲಯ ಡಾನ್‌ಬೊಸ್ಕೊ ಹಾಗೂ ಜಿಲ್ಲೆಯ ಎಲ್ಲಾ ಸ್ವಯಂ-ಸೇವಾ ಸಂಸ್ಥೆಗಳ ಸಹಯೋಗದೊಂದಿಗೆ ಮಾನವ ಕಳ್ಳ ಸಾಗಾಣಿಕೆ ತಡೆ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಬಾಲಕಾರ್ಮಿಕರನ್ನಾಗಿ ಮಕ್ಕಳಿಂದ ದುಡಿಸಿಕೊಳ್ಳುತ್ತಿರುವುದು, ಮಹಿಳೆಯರ ಅಸಹಯಕತೆಯನ್ನು ಬಳಸಿಕೊಂಡು ಅವರನ್ನು ಒಂದು ಜೀತಪದ್ದತಿಗೆ ಅಥವಾ ಅವರಿಗೆ ಕಡಿಮೆ ಸಂಬಳಕೊಟ್ಟು ನೇಮಕ ಮಾಡಿಕೊಳ್ಳುತ್ತಿರುವ ಕೆಟ್ಟ ಪದ್ದತಿ ಆಚರಣೆಯಾಗುತ್ತಿರುವುದು ದುಃಖಕರ ಸಂಗತಿಯಾಗಿದೆ ಎಂದರು.
ಮಾನವ ಕಳ್ಳ ಸಾಗಾಣಿಕೆ ತಡೆ ಕೇವಲ ಒಬ್ಬ ವ್ಯಕ್ತಿಯಿಂದ ಅಥವಾ ಒಂದು ಸಂಸ್ಥೆಯಿoದ ಆಗುವುದಂತಹದ್ದಲ್ಲ. ಇದಕ್ಕೆ ಎಲ್ಲಾ ಇಲಾಖೆಗಳು ಕೈ ಜೋಡಿಸಬೇಕು ಹಾಗೂ ಸಾರ್ವಜನಿಕರು ಸಹ ಇದರಲ್ಲಿ ಭಾಗಿಯಾಗಬೇಕು. ವಿದ್ಯಾರ್ಥಿಗಳ ದೆಸೆಯಿಂದಲೇ ಒಂದು ಅರಿವಿನ ಕಾರ್ಯಕ್ರಮವಾಗಬೇಕು. ಎಲ್ಲೆಲ್ಲಿ ಇಂತಹ ಅವ್ಯವಹಾರಗಳು ಮಾನವ ಕಳ್ಳ ಸಾಗಾಣಿಕೆ ನಡೆಯುತ್ತಿದೆಯೋ ಅದನ್ನು ಎಲ್ಲಾ ಇಲಾಖೆಗಳು ಬಹಳ ಎಚ್ಚರಿಕೆಯಿಂದ ಪರಿಗಣಿಸಿ ಒಂದು ಸೂಕ್ತ ಕ್ರಮವನ್ನು ಸೂಕ್ತ ಸಮಯದಲ್ಲಿ ಕೈಗೊಳ್ಳುವ ಮೂಲಕ ಮಾನವ ಕಳ್ಳ ಸಾಗಾಣಿಕ ಎಂಬ ಪದ್ಧತಿಯನ್ನು ತೊಲಗಿಸಬೇಕು ಎಂದರು.
ಈ ಪದ್ಧತಿಯು ವಿದ್ಯಾಭ್ಯಾಸ ಕೊರತೆಯಿಂದ, ಬಡತನದ ದಾರಿಯಿಂದ ಹಾಗೂ ಸಾಮಾಜಿಕ ಮೂಡನಂಬಿಕೆಗಳಿoದ ಶುರುವಾಗುತ್ತದೆ. ಆದ್ದರಿಂದ ಸಂಬoಧಪಟ್ಟ ಇಲಾಖೆಗಳು ನೊಂದ ವ್ಯಕ್ತಿಗಳಿಗೆ ಧೈರ್ಯತುಂಬಿ ಈ ಪದ್ದತಿಯನ್ನು ಹೋಗಲಾಡಿಸಲು ಕೈಜೋಡಿಸುವಂತೆ ತಿಳಿಸಿದರು.
ಆಶಾ ಕಾರ್ಯಕರ್ತೆಯರು ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಪ್ರತಿ ಮನೆ ಮನೆಗೂ ಭೇಟಿ ನೀಡಿ ಶಿಕ್ಷಣದಿಂದ ವಂಚಿತರಾದವರ ಕುರಿತು ಶಿಕ್ಷಣ ಇಲಾಖೆಗೆ ಮಾಹಿತಿ ನೀಡಿ ಅವರಿಗೆ ಶಿಕ್ಷಣ ನೀಡಲು ಸಹಕರಿಸುವಂತೆ ತಿಳಿಸಿದರು.
ಯಾರು ಮಾನವ ಕಳ್ಳ ಸಾಗಾಣಿಕೆಗೆ ಒಳಪಟ್ಟಿರುತ್ತಾರೋ ಅವರಿಗೆ ಪುರ್ನವಸತಿ ಕಲ್ಪಿಸಿಕೊಟ್ಟು, ಅವರ ಮಕ್ಕಳಿಗೆ ಶಿಕ್ಷಣ ಒದಗಿಸುವುದು ಹಾಗೂ ಸಾಮಾಜಿಕ ಸೌಲಭ್ಯಗಳನ್ನು ಕಾನೂನು ಸೇವೆಗಳ ಪ್ರಾಧಿಕಾರದ ವತಿಯಿಂದ ನೀಡಲಾಗುವುದು ಎಂದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರಾದ ನಾರಾಯಣ ಸ್ವಾಮಿ ಅವರು ಮಾತನಾಡಿ, ಮಹಿಳೆಯರು ಮತ್ತು ಮಕ್ಕಳ ರಕ್ಷಣೆ ಕುರಿತು ವಿವಿಧ ಇಲಾಖೆಗಳ ಸಹಭಾಗಿತ್ವದಲ್ಲಿ ಸಮನ್ವಯತೆಯಲ್ಲಿ ಕಾರ್ಯನಿರ್ವಹಿಸುವ ಅವಶ್ಯಕತೆ ಇದೆ. ಸಮುದಾಯದಲ್ಲಿ ಮಹಿಳೆಯರ ಮತ್ತು ಮಕ್ಕಳ ಹಕ್ಕುಗಳು, ಕಾನೂನುಗಳ ಕುರಿತು ಸಾರ್ವಜನಿಕರಿಗೆ ಅರಿವು ಮೂಡಿಸಬೇಕು. ಎಲ್ಲಾ ಇಲಾಖೆಗಳು ಮಾನವ ಕಳ್ಳ ಸಾಗಾಣಿಕೆ ಪದ್ದತಿಯನ್ನು ಹೋಗಲಾಡಿಸಲು ಕೈಜೋಡಿಸುವಂತೆ ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಸುರೇಂದ್ರ ಬಿ.ಎಲ್ ಅವರು ಮಾನವ ಕಳ್ಳ ಸಾಗಾಣಿಕೆ ತಡೆ ಕುರಿತು ಪ್ರತಿಜ್ಞಾ ವಿಧಿ ಬೋಧಿಸಿದರು.
ಕಾರ್ಯಕ್ರಮದಲ್ಲಿ ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷರಾದ ಷಣ್ಮುಗಂ ಸುಂದರo, ಬೆಂಗಳೂರು ವಿಶ್ವವಿದ್ಯಾಲಯದ ಸಮಾಜಕಾರ್ಯ ವಿಭಾಗದ ಉಪನ್ಯಾಸಕರಾದ ಮಧು, ಡಾನ್‌ಬೋಸ್ಕೋ ಜಿಲ್ಲಾ ಸಂಯೋಜಕರಾದ ಫಾದರ್ ಸಜ್ಜಿ, ಬಾಸ್ಕೋ ಸಂಸ್ಥೆಯ ರಾಮಸ್ವಾಮಿ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು, ಎನ್‌ಜಿಓಗಳು, ಆಶಾ-ಅಂಗನವಾಡಿ ಕಾರ್ಯರ್ತೆಯರು ಹಾಗೂ ಇತರರು ಉಪಸ್ಥಿತರಿದ್ದರು.
