ಬೀದರ್: ಬೀದರ್‌ನಲ್ಲಿ ವರದಿ ಮಾಡಲು ತೆರಳಿದ್ದ ಪತ್ರಕರ್ತ ರವಿ ಬಸವರಾಜ ಬೋಸುಂಡೆ ಮೇಲೆ ಹಲ್ಲೆ ನಡೆಸಿದ್ದ ಅರಣ್ಯ ಸಿಬ್ಬಂದಿ ದಸ್ತಗಿರಿ ಸಾಬ ಅವರನ್ನು ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಅಮಾನತು ಮಾಡಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (ಕೆಯುಡಬ್ಲ್ಯೂಜೆ) ಆಕ್ರೋಶ ವ್ಯಕ್ತಪಡಿಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿತ್ತು.
ಸಂಘಟನೆ ಬೀದರ್‌ನಲ್ಲಿ ಪ್ರತಿಭಟನೆ ನಡೆಸಿದ್ದು, ಅರಣ್ಯ ಸಚಿವ ಈಶ್ವರ ಖಂಡ್ರೆ ಕೂಡಲೇ ಘಟನೆಗೆ ಸ್ಪಂದಿಸಿ ತನಿಖೆಗೆ ಆದೇಶಿಸಿದ್ದರು. ಅವರ ಸೂಚನೆಯ ಮೇರೆಗೆ ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ. ಈ ಕ್ರಮವನ್ನು ಕೆಯುಡಬ್ಲ್ಯೂಜೆ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಸ್ವಾಗತಿಸಿ, ಇದು ಪತ್ರಕರ್ತರ ಹಕ್ಕಿಗಾಗಿ ನಡೆದ ಹೋರಾಟಕ್ಕೆ ಸಿಕ್ಕ ನ್ಯಾಯ ಎಂದು ತಿಳಿಸಿದ್ದಾರೆ. ಹಲ್ಲೆ ಮಾಡಿದವರ ಮೇಲೆ ಮುಂದುವರಿದ ಕಾನೂನು ಕ್ರಮವೂ ಕೈಗೊಳ್ಳಬೇಕೆಂದು ಅವರು ಆಗ್ರಹಿಸಿದ್ದಾರೆ.