ಮೈಸೂರು: ೧೨ ವರ್ಷದ ಬಾಲಕಿಯನ್ನು ಚಿಕಿತ್ಸೆಗೆ ದಾಖಲಿಸಿಕೊಳ್ಳದೆ ಕರ್ತವ್ಯ ನಿರ್ಲಕ್ಷ್ಯ ತೋರಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಧೀಶರು ನೀಡಿದ ದೂರಿನ ಹಿನ್ನೆಲೆ ಸರ್ಕಾರಿ ಮಕ್ಕಳ ಆಸ್ಪತ್ರೆಯ ವೈದ್ಯೆ ಸೇರಿದಂತೆ ಮೂವರ ವಿರುದ್ಧ ದೇವರಾಜ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಮೈಸೂರಿನ ಒಂದನೇ ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಧೀಶೆ ಎ ಜೆ. ಶಿಲ್ಪಾ ನೀಡಿದ ದೂರಿನನ್ವಯ ಮೈಸೂರಿನ ಚೆಲುವಾಂಬ ಆಸ್ಪತ್ರೆಯ ವೈದ್ಯೆ ಡಾ. ಚೈತ್ರಾ ಸೇರಿದಂತೆ ಆಸ್ಪತ್ರೆಯ ಮೂವರ ವಿರುದ್ಧ ಪ್ರಕರಣ ದಾಖಲಾಗಿದೆ.
ಕೊಡಗು ಮೂಲದ ದಂಪತಿಯ ೧೨ ವರ್ಷದ ಪುತ್ರಿಗೆ ಶ್ವಾಸಕೋಶ ಹಾಗೂ ಉಸಿರಾಟ ಸಮಸ್ಯೆ ಇತ್ತು. ಹೀಗಾಗಿ ತಮ್ಮ ಮಗಳನ್ನು ಅ. ೨೬ರ ರಾತ್ರಿ ಚೆಲುವಾಂಬ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ಕೊಡಗು ಮೂಲದ ದಂಪತಿ ಅವರು ನ್ಯಾಯಾಧೀಶೆ ಶಿಲ್ಪಾ ಅವರ ಸ್ವಗ್ರಾಮದವರಾಗಿದ್ದಾರೆ. ಅವರ ಕೋರಿಕೆಯ ಹಿನ್ನೆಲೆ ಅ.೨೬ರ ರಾತ್ರಿ ಸ್ವತಃ ನ್ಯಾಯಾಧೀಶೆ ಶಿಲ್ಪಾ ಅವರೇ ಚೆಲುವಾಂಬ ಆಸ್ಪತ್ರೆಗೆ ಆಗಮಿಸಿ ಬಾಲಕಿಯನ್ನು ಅಡ್ಮಿಟ್ ಮಾಡಿಕೊಳ್ಳುವಂತೆ ವೈದ್ಯರಿಗೆ ಹೇಳಿದ್ದರು.
ಆದರೆ ರಾತ್ರಿ ಪಾಳೆಯಲ್ಲಿ ಕೆಲಸ ಮಾಡುತ್ತಿದ್ದ ವೈದ್ಯೆ ಡಾ. ಚೈತ್ರಾ ಇಲ್ಲಿ ಬೆಡ್ ಖಾಲಿ ಇಲ್ಲ, ಖಾಸಗಿ ಆಸ್ಪತ್ರೆಗೆ ದಾಖಲಿಸುವಂತೆ ಹೇಳಿ ಕಳುಹಿಸಿದ್ದರು. ಅವರು ಮಗುವನ್ನು ಕರೆದುಕೊಂಡು ಹೋಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಲು ಮುಂದಾಗಿದ್ದರು. ಈ ವೇಳೆ ಖಾಸಗಿ ಆಸ್ಪತ್ರೆಯಲ್ಲಿ ದಿನಕ್ಕೆ ೨೫ ರಿಂದ ೩೦ ಸಾವಿರ ರೂಪಾಯಿ ವೆಚ್ಚವಾಗುತ್ತದೆ ಎಂದು ಅವರು ದಂಪತಿಗೆ ತಿಳಿಸಿದ್ದರು. ಆಗ ಪುನಃ ಅಂದು ರಾತ್ರಿಯೇ ಸರ್ಕಾರಿ ಆಸ್ಪತ್ರೆಗೆ ಬಾಲಕಿಯನ್ನು ಕರೆತಂದು ಕೆಲವು ಗಂಟೆಗಳ ಕಾಲ ದಂಪತಿ ಪರವಾಗಿ ನ್ಯಾಯಾಧೀಶೆ ಹೋರಾಟ ನಡೆಸಿದ್ದರು. ಕೊನೆಗೆ ಹಿರಿಯ ಅಧಿಕಾರಿಗಳ ಸೂಚನೆಯಂತೆ ಆಸ್ಪತ್ರೆಗೆ ಬಾಲಕಿಯನ್ನು ದಾಖಲಿಸಿಕೊಂಡಿದ್ದರು. ನವೆಂಬರ್ ೪ ರಂದು ಚಿಕಿತ್ಸೆ ಫಲಕಾರಿಯಾಗದೇ ೧೨ ವರ್ಷದ ಬಾಲಕಿ ಸಾವನ್ನಪ್ಪಿದ್ದಳು.
ಈ ಸಂಬಂಧ ನ್ಯಾಯಾಧೀಶೆ ಶಿಲ್ಪಾ, ಸಕಾಲಕ್ಕೆ ಚಿಕಿತ್ಸೆ ನೀಡದೆ ಕರ್ತವ್ಯದಲ್ಲಿದ್ದ ವೈದ್ಯೆ ಡಾ. ಚೈತ್ರಾ ನಿರ್ಲಕ್ಷ್ಯ ಮಾಡಿದ್ದಾರೆ ಎಂದು ದೇವರಾಜ ಪೊಲೀಸ್ ಠಾಣೆಗೆ ಹಾಗೂ ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ. ದೂರಿನಲ್ಲಿ ವೈದ್ಯೆ ಸೇರಿದಂತೆ ಮೂವರ ವಿರುದ್ಧ ಐಪಿಸಿ ಸೆಕ್ಷನ್ ೩೦೬ರ ಅಡಿ ಪ್ರಕರಣ ದಾಖಲು ಮಾಡಲಾಗಿದೆ ಎಂದು ಕಾನೂನು ಮತ್ತು ಸುವ್ಯವಸ್ಥೆಯ ಡಿಸಿಪಿ ಮುತ್ತುರಾಜ್ ಮಾಹಿತಿ ನೀಡಿದ್ದಾರೆ.