ಬೆಂಗಳೂರು: ಬೆಂಗಳೂರು ರಾಜಭವನದಲ್ಲಿ ಇಂದು ನಡೆದ ಕಾರ್ಯಕ್ರಮದಲ್ಲಿ ನ್ಯಾ. ವಿಭು ಭಕ್ರು ಅವರು ಕರ್ನಾಟಕ ಹೈಕೋರ್ಟ್ ಹೊಸ ಮುಖ್ಯ ನ್ಯಾಯಮೂರ್ತಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಪ್ರಮಾಣ ವಚನ ಬೋಧನೆ ನೆರವೇರಿಸಿದರು. ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮತ್ತು ಸಭಾಪತಿ ಬಸವರಾಜ ಹೊರಟ್ಟಿ ಹಾಜರಿದ್ದರು.
ನ್ಯಾ. ಭಕ್ರು ಅವರು 1966ರಲ್ಲಿ ನಾಗಪುರದಲ್ಲಿ ಜನಿಸಿ, ದೆಹಲಿಯಲ್ಲಿ ಶಿಕ್ಷಣ ಪಡೆದು, 1989ರಲ್ಲಿ ಚಾರ್ಟರ್ಡ್ ಅಕೌಂಟೆಂಟ್ ಆಗಿ ಅರ್ಹತೆ ಪಡೆದರು. 1990ರಲ್ಲಿ ಎಲ್‌ಎಲ್‌ಬಿ ಪೂರೈಸಿ ವಕೀಲರಾಗಿ ದಾಖಲಾಗಿದ್ದರು. ಸುಪ್ರೀಂ ಕೋರ್ಟ್ ಮತ್ತು ದೆಹಲಿ ಹೈಕೋರ್ಟ್‌ಗಳಲ್ಲಿ ಅವರು ವಕೀಲಿಕೆ ನಡೆಸಿದ್ದು, 2013ರಲ್ಲಿ ಹೆಚ್ಚುವರಿ ನ್ಯಾಯಮೂರ್ತಿಯಾಗಿ ನೇಮಕಗೊಂಡು 2015ರಲ್ಲಿ ಖಾಯಂಗೊಂಡಿದ್ದರು.