ನವದೆಹಲಿ: ನ್ಯಾ.ಯಶವಂತ್ ವರ್ಮಾ ಅವರ ಮನೆಯಲ್ಲಿ ನಗದು ಪತ್ತೆಯಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ದೆಹಲಿ ಹೈಕೋರ್ಟ್ ಸೋಮವಾರ ಅವರ ನ್ಯಾಯಾಂಗ ಕೆಲಸವನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಿಂತೆಗೆದುಕೊಂಡಿದೆ. ಈ ಸಂಬಂಧ ಹೈ ಕೋರ್ಟ್ ಸುತ್ತೋಲೆ ಹೊರಡಿಸಿದೆ.
ಮಾ.14 ರಂದು ನ್ಯಾ.ವರ್ಮಾ ಅವರ ಅಧಿಕೃತ ನಿವಾಸದಲ್ಲಿ ಅಗ್ನಿ ಅವಘಡ ಸಂಭವಿಸಿತ್ತು. ಈ ವೇಳೆ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಿತ್ತು. ಈ ಸಮಯದಲ್ಲಿ ಅವರ ಮನೆಯ ಸ್ಟೋರ್ ರೂಂನಲ್ಲಿ ಕಂತೆ ಕಂತೆ ಹಣ ಪತ್ತೆಯಾಗಿತ್ತು ಎಂದು ಹೇಳಲಾಗಿದೆ. ಅಗ್ನಿ ಅವಘಡದ ವೇಳೆ ನಾನು ಭೋಪಾಲ್‌ನಲ್ಲಿದ್ದೆ ಎಂದು ನ್ಯಾ.ವರ್ಮಾ ಹೇಳಿಕೊಂಡಿದ್ದರು.
ಶನಿವಾರ, ಸುಪ್ರೀಂ ಕೋರ್ಟ್ ಈ ಸಂಬಂಧ ಒಂದು ವರದಿಯನ್ನು ಬಿಡುಗಡೆ ಮಾಡಿತ್ತು. ಅದರಲ್ಲಿ ನಗದು ಪತ್ತೆಯಾದ ವೀಡಿಯೊ ಮತ್ತು 3 ಫೋಟೋಗಳು ಸಹ ಇದ್ದವು. ಈ ವೀಡಿಯೊ ಮತ್ತು ಫೋಟೋಗಳಲ್ಲಿ ಸುಟ್ಟ ಹಣದ ತುಂಡುಗಳನ್ನು ಸಿಬ್ಬಂದಿ ಹೊರತೆಗೆಯುತ್ತಿರುವುದನ್ನು ನೋಡಬಹುದಾಗಿದೆ.
ಇನ್ನೂ ದೆಹಲಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ದೇವೇಂದ್ರ ಕುಮಾರ್ ಉಪಾಧ್ಯಾಯ ಶುಕ್ರವಾರ ವರ್ಮಾ ಅವರಿಗೆ ಪತ್ರ ಬರೆದು, ನಗದು ಇರುವಿಕೆಯನ್ನು ಲೆಕ್ಕ ಕೇಳಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ನ್ಯಾ.ವರ್ಮಾ ಅವರು, ನಾನು ಅಥವಾ ನನ್ನ ಕುಟುಂಬದ ಸದಸ್ಯರು ಆ ಕೋಣೆಯಲ್ಲಿ ಯಾವುದೇ ಹಣವನ್ನು ಇಟ್ಟಿಲ್ಲ ಎಂದು ಪ್ರತಿಕ್ರಿಯಿಸಿದ್ದರು. ಇನ್ನೂ ವರ್ಮಾ ವಿರುದ್ಧದ ಆರೋಪಗಳನ್ನು ತನಿಖೆ ಮಾಡುವುದಾಗಿ ಸುಪ್ರೀಂ ಕೋರ್ಟ್ ಹೇಳಿದೆ.
ಈ ಎಲ್ಲಾ ಬೆಳವಣಿಗೆಗಳ ನಡುವೆ, ನ್ಯಾ.ವರ್ಮಾ ಅವರನ್ನು ಅಲಹಾಬಾದ್ ಹೈಕೋರ್ಟ್‌ಗೆ ವರ್ಗಾಯಿಸದಂತೆ ಮುಖ್ಯ ನ್ಯಾಯಾಧೀಶರಿಗೆ ಅಲಹಾಬಾದ್ ಹೈಕೋರ್ಟ್ ಬಾರ್ ಅಸೋಸಿಯೇಷನ್ ಮನವಿ ಮಾಡಿದೆ.
ಯಾವುದೇ ನ್ಯಾಯಾಲಯವು ಕಸದ ತೊಟ್ಟಿಯಲ್ಲ. ವಿಚಾರಣೆಗಳು ಪೂರ್ಣಗೊಳ್ಳುವವರೆಗೆ ಅವರು ಸುಪ್ರೀಂ ಕೋರ್ಟ್‌ನ ಕಣ್ಗಾವಲಿನಲ್ಲಿ ದೆಹಲಿಯಲ್ಲಿರಬೇಕು ಎಂದು ಬಾರ್ ಅಸೋಸಿಯೇಷನ್‌ನ ಅಧ್ಯಕ್ಷ ಅನಿಲ್ ತಿವಾರಿ ಆಗ್ರಹಿಸಿದ್ದಾರೆ. ಅಲ್ಲದೇ, ಸಾರ್ವಜನಿಕ ವಿಶ್ವಾಸವನ್ನು ಮತ್ತೆ ಗಳಿಸಲು ನ್ಯಾ.ವರ್ಮಾ ಅವರು ನೀಡಿದ ಎಲ್ಲಾ ತೀರ್ಪುಗಳನ್ನು ಪರಿಶೀಲಿಸಬೇಕು ಎಂದಿದ್ದಾರೆ.