ಮೈಸೂರು: ಚಾಮುಂಡೇಶ್ವರಿ ಕ್ಷೇತ್ರದ ಕೆ. ಸಾಲುಂಡಿಯ ಕನಕರಾಜು ಸಾವಿಗೆ ಶಾಸಕರಾದ ಜಿ.ಟಿ. ದೇವೇಗೌಡ, ಮುಡಾದ ತಾಂತ್ರಿಕ ಅಧಿಕಾರಿಗಳು ಹಾಗೂ ಪಟ್ಟಣ ಪಂಚಾಯ್ತಿಯ ಮುಖ್ಯಾಧಿಕಾರಿಯ ನಿರ್ಲಕ್ಷವೇ ಕಾರಣವಾಗಿದೆ ಎಂದು ಮುಡಾ ಅಧ್ಯಕ್ಷ ಕೆ. ಮರೀಗೌಡ ಆರೋಪಿಸಿದರು.
ಕೆ. ಸಾಲುಂಡಿಯಲ್ಲಿ ಮೃತ ಕನಕರಾಜುವಿನ ಅಂತಿಮದರ್ಶನ ಪಡೆದು ಕುಟುಂಬಸ್ಥರಿಗೆ ಸಾಂತ್ವಾನ ಹೇಳಿ ವೈಯಕ್ತಿಕವಾಗಿ ರೂ. ೧ ಲಕ್ಷ ಪರಿಹಾರ ವಿತರಿಸಿ ಮಾತನಾಡಿದ ಅವರು, ಜಿ.ಟಿ. ದೇವೇಗೌಡರು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ೧೧ ವರ್ಷದಿಂದ ಶಾಸಕರಾಗಿದ್ದಾರೆ. ಈ ಊರಿನಲ್ಲಿ ಹೆಚ್ಚಾಗಿ ಹಿಂದುಳಿದ ವರ್ಗದ ಜನರು ವಾಸಿಸುತ್ತಿದ್ದಾರೆ. ಎಲ್ಲರೂ ಸಿದ್ದರಾಮಯ್ಯರವರ ಬೆಂಬಗಲಿರೆಂಬ ನಿರ್ಲಕ್ಷ್ಯದಿಂದ ಈ ಅನಾಹುತಕ್ಕೆ ಕಾರಣವಾಗಿದೆ. ಈ ಗ್ರಾಮದ ಒಳಚರಂಡಿಗೆ ಸೆಪ್ಟಿಕ್ ಟ್ಯಾಂಕ್ ಮಾಡದಿರುವುದರಿಂದ ನೀರು ಚರಂಡಿಯಲ್ಲಿ ಹರಿಯುತ್ತಿದೆ. ಈ ಒಳಚರಂಡಿ ನೀರು ಬೋರ್‌ವೆಲ್ ಪಕ್ಕದಲ್ಲಿ ಹರಿಯುತ್ತಿರುವುದರಿಂದ ಕುಡಿಯುವ ನೀರು ಕಲುಷಿತವಾಗಿ ಈ ದುರ್ಘಟನೆ ನಡೆದಿದೆ.
ಈ ಘಟನೆಯಿಂದ ೭೫ ಜನರು ಅನಾರೋಗ್ಯಪೀಡಿತರಾಗಿದ್ದು ೫೦ ಜನರಿಗೆ ವಾಂತಿಭೇದಿಯಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈಗಾಗಲೇ ಜಿಲ್ಲಾ ಆರೋಗ್ಯಾಧಿಕಾರಿ, ಪಟ್ಟಣ ಪಂಚಾಯ್ತಿ ಅಧಿಕಾರಿ, ಮುಡಾ ಅಧಿಕಾರಿಗಳಿಗೆ ಕ್ರಮಕೈಗೊಳ್ಳಲು ಸೂಚನೆ ನೀಡಿದ್ದು, ಊರಿನಲ್ಲಿ ಸ್ವಚ್ಛತೆ ಮಾಡಲಾಗುತ್ತಿದ್ದು, ಟ್ಯಾಂಕರ್‌ಗಳಿಂದ ನೀರು ಸರಬರಾಜು ಮಾಡಲಾಗುತ್ತಿದೆ. ಒಳಚರಂಡಿಗೆ ಸೆಪ್ಟಿಕ್ ಟ್ಯಾಂಕ್ ನಿರ್ಮಾಣ ಮಾಡಲು ಕ್ರಮಕೈಗೊಳ್ಳಲಾಗುವುದು. ಇಂತಹ ದುರ್ಘಟನೆ ಬೇರೆ ಊರುಗಳಲ್ಲಿ ನಡೆಯದಂತೆ ಮುನ್ನೆಚ್ಚರಿಕೆ ಕ್ರಮಕೈಗೊಳ್ಳಲಾಗುವುದು.

ಈ ದುರ್ಘಟನೆಯ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಆರೋಗ್ಯಾಧಿಕಾರಿಯಿಂದ ಮಾಹಿತಿ ಪಡೆದು ಚಿಕಿತ್ಸೆ ಪಡೆಯುತ್ತಿರುವವರಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸುವುದರೊಂದಿಗೆ ಚಿಕಿತ್ಸೆ ವೆಚ್ಚವನ್ನು ಭರಿಸಲು ತಿಳಿಸಿದ್ದಾರೆ, ಮಾನವೀಯತೆಯ ದೃಷ್ಟಿಯಿಂದ ಮುಖ್ಯಮಂತ್ರಿಗಳ ಸೂಚನೆ ಮೇರೆಗೆ ಕೆ. ಸಾಲುಂಡಿ ಗ್ರಾಮಕ್ಕೆ ಹೊಸದಾಗಿ ೩ ಬೋರ್‌ವೆಲ್‌ಗಳನ್ನು ಕೊರೆಸಿ ನೀರು ಸರಬರಾಜು ಮಾಡಲು ಕ್ರಮಕೈಗೊಳ್ಳಲಾಗುವುದು ಎಂದು ಮರೀಗೌಡರು ತಿಳಿಸಿದರು.