Friday, April 11, 2025
Google search engine

Homeರಾಜ್ಯಸುದ್ದಿಜಾಲಕೆ.ಆರ್. ನಗರ ಪುರಸಭೆಯ ಪ್ರತಿ ವಾರ್ಡ್ ನಲ್ಲಿ ಆಗಬೇಕಿರುವ ಕೆಲಸಗಳ ಪಟ್ಟಿ ಮಾಡಿ: ಶಾಸಕ ಡಿ.ರವಿಶಂಕರ್

ಕೆ.ಆರ್. ನಗರ ಪುರಸಭೆಯ ಪ್ರತಿ ವಾರ್ಡ್ ನಲ್ಲಿ ಆಗಬೇಕಿರುವ ಕೆಲಸಗಳ ಪಟ್ಟಿ ಮಾಡಿ: ಶಾಸಕ ಡಿ.ರವಿಶಂಕರ್

ಕೆ.ಆರ್. ನಗರ: ಪುರಸಭೆಯ ಎಲ್ಲಾ ೨೩ ವಾರ್ಡುಗಳಿಗೂ ಅಗತ್ಯ ಮೂಲಭೂತ  ಸೌಕರ್ಯ ಕಲ್ಪಿಸಲು ಮುಂದಿನ ದಿನಗಳಲ್ಲಿ ಪ್ರತಿ ವಾರ್ಡಿನಲ್ಲಿ ಅಧಿಕಾರಿಗಳು, ಚುನಾಯಿತರು ಮತ್ತು ಸಾರ್ವಜನಿಕ ಸಭೆ ನಡೆಸಿ ಆಗಬೇಕಾಗಿರುವ ಕೆಲಸಗಳನ್ನು ಪಟ್ಟಿ ಮಾಡಿ ಆನಂತರ ಸರ್ಕಾರದಿಂದ ಅನುದಾನ ಮಂಜೂರು ಮಾಡಿಸುತ್ತೇನೆ ಎಂದು ಶಾಸಕ ಡಿ.ರವಿಶಂಕರ್ ಹೇಳಿದರು.

ಪಟ್ಟಣದ ೨ನೇ ವಾರ್ಡಿನಲ್ಲಿ ೧೫ನೇ ಹಣಕಾಸು ಯೋಜನೆಯಡಿ ರಸ್ತೆ ಮತ್ತು ಚರಂಡಿ ಕಾಮಗಾರಿಗಳಿಗೆ ಚಾಲನೆ ನೀಡಿ ನಂತರ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಹೊಸ ಬಡಾವಣೆಗಳಿಗೆ ಯುಜಿಡಿ ಸಂಪರ್ಕ ಕಲ್ಪಿಸಲು ೨೦ ಕೋಟಿ ರೂ ಮಂಜೂರು ಮಾಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಕಳೆದ ವಾರ ನಡೆದ ಸಚಿವ ಸಂಪುಟದ ಸಭೆಯಲ್ಲಿ ಇದಕ್ಕೆ ಒಪ್ಪಿಗೆ ದೊರೆತಿದೆ ಎಂದರು.

ನಗರದ ಜನತೆಗೆ ಸಮಪರ್ಕವಾದ ಶುದ್ದ ಕುಡಿಯುವ ನೀರು ಸರಬರಾಜು ಮಾಡುವ ಕಾಮಗಾರಿಗೆ ಈಗಾಗಲೇ ಸರ್ಕಾರದಿಂದ ಅಮೃತ ಯೋಜನೆಯಡಿ ೩೦ ಕೋಟಿ ರೂ ಅನುದಾನ ಬಿಡುಗಡೆಯಾಗಿದ್ದು, ಆ ಹಣದಲ್ಲಿ ೪ ಓವರ್ ಹೆಡ್ ಟ್ಯಾಂಕ್, ಎರಡು ನೀರು ಶುದ್ದಿಕರಣ ಘಟಕ ಸೇರಿದಂತೆ ಕಾವೇರಿ ನದಿಯಿಂದ ಪೈಪ್‌ಲೈನ್ ಕೆಲಸ ಮಾಡುವುದರ ಜತೆಗೆ ಇದರ ಅಗತ್ಯ ಕಾಮಗಾರಿಗಳನ್ನು ಮಾಡಿಸಲಾಗುತ್ತದೆ ಎಂದು ಮಾಹಿತಿ ನೀಡಿದರು.

ಪಟ್ಟಣದ ಅಭಿವೃದ್ದಿ ಅಗತ್ಯ ಅನುದಾನ ನೀಡುವಂತೆ ಸಚಿವರಾದ ಭೈರತಿಸುರೇಶ್, ಮತ್ತು ರಹೀಮ್‌ಖಾನ್ ರವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದು ಇದಕ್ಕೆ ಪೂರಕವಾಗಿ ಸ್ಪಂದಿಸಿರುವ ಅವರುಗಳು ಅಂದಾಜು ಪಟ್ಟಿ ನೀಡಿದ ನಂತರ ತ್ವರಿತವಾಗಿ ಅನುದಾನ ಕೊಡುವ ಭರವಸೆ ನೀಡಿದ್ದಾರೆ ಎಂದರಲ್ಲದೆ ವಸತಿ ಮತ್ತು ವಕ್ಫ್ ಸಚಿವ ಜಮೀರ್‌ಅಹಮದ್ ಅವರು ಸಹ ಹೆಚ್ಚಾಗಿ ಅಲ್ಪಸಂಖ್ಯಾತರು ವಾಸಿಸುವ ನಾಲ್ಕು ವಾರ್ಡುಗಳ ಸಮಗ್ರ ಅಭಿವೃದ್ದಿ ಹಣ ನೀಡುವುದಾಗಿ ತಿಳಿಸಿದ್ದಾರೆಂದು ನುಡಿದರು. 

ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿಗಳು ಶಾಸಕರುಗಳ ಮನವಿಗೆ ಸ್ಪಂದಿಸಿ ಕ್ಷೇತ್ರವಾರು ೨೫ ಕೋಟಿ ವಿಶೇಷ ಅನುದಾನ ಬಿಡುಗಡೆ ಮಾಡುವುದಾಗಿ ಭರವಸೆ ನೀಡಿದ್ದು ಜನವರಿ ತಿಂಗಳಾಂತ್ಯದ ವೇಳೆಗೆ ಬಿಡುಗಡೆಯಾಗಲಿದ್ದು ನಂತರ ಕ್ಷೇತ್ರದ ಅಭಿವೃದ್ದಿಗೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಪ್ರಕಟಿಸಿದರು.

ಚುನಾವಣಾ ಪೂರ್ವದಲ್ಲಿ ನೀಡಿದ ಭರವಸೆಗಳನ್ನು ಈಡೇರಿಸಲು ನಮ್ಮ ಸರ್ಕಾರ ಬದ್ದವಾಗಿದ್ದು ಈಗಾಗಲೇ ನಾಲ್ಕು ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನ ಮಾಡಿದ್ದು ಇದರ ಜತೆಗೆ ಈಗ ಯುವನಿಧಿ ಯೋಜನೆಯ ನೊಂದಣಿ ಆರಂಭವಾಗಲಿದ್ದು ಅರ್ಹರು ಅಗತ್ಯ ದಾಖಲೆ ನೀಡಿ ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳಬೇಕು ಎಂದು ಸಲಹೆ ನೀಡಿದ ಶಾಸಕರು ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಿಗೆ ಹಣ ಬಾರದಿದ್ದಲ್ಲಿ ಅಗತ್ಯ ದಾಖಲಾತಿಗಳನ್ನು ತಂದು ಕೆ.ಆರ್.ನಗರ ಪಟ್ಟಣದಲ್ಲಿರುವ ಶಾಸಕರ ಕಛೇರಿಯಲ್ಲಿ ಸರಿಪಡಿಸಿಕೊಳ್ಳಬೇಕು ಎಂದು ಹೇಳಿದರು.

ಪುರಸಭೆ ಅಧಿಕಾರಿಗಳು ಕಾಮಗಾರಿ ನಡೆಯುವ ಸ್ಥಳದಲ್ಲಿದ್ದು ಗುಣಮಟ್ಟದ ಕಾಮಗಾರಿ ಮಾಡಿಸಬೇಕು ಎಂದು ತಾಕೀತು ಮಾಡಿದ ಅವರು ವಾರ್ಡಿನ ಸದಸ್ಯರು ಕಾಮಗಾರಿ ಬಗ್ಗೆ ನಿಗಾ ವಹಿಸಬೇಕು ಎಂದು ಸಲಹೆ ನೀಡಿದರು. ಆನಂತರ ಅವರು ೧ನೇ ವಾರ್ಡಿನಿಂದ ೨೩ನೇ ವಾರ್ಡಿನವರೆಗೆ ಸಂಪರ್ಕವಿಲ್ಲದ ಕಡೆ ಯು.ಜಿ.ಡಿ ಸಂಪರ್ಕ ಕಲ್ಪಿಸುವ ಕಾಮಗಾರಿಗೆ, ವಾರ್ಡ್ ೧೧ ಮತ್ತು ೧೨ರಲ್ಲಿ ಸಿ.ಸಿ.ರಸ್ತೆ ಹಾಗೂ ಬಾಕ್ಸ್ ಚರಂಡಿ ನಿರ್ಮಾಣ ಕಾಮಗಾರಿಗಳಿಗೆ ಚಾಲನೆ ನೀಡಿದರು. 

ಪುರಸಭೆ ಸದಸ್ಯ ಕೋಳಿಪ್ರಕಾಶ್ ಮಾತನಾಡಿ ೨ನೇ ವಾರ್ಡ್ ತುಂಬ ಹಳೆಯ ಬಡಾವಣೆಯಾಗಿದ್ದರೂ ಅಭಿವೃದ್ದಿಯಿಂದ ಕುಂಠಿತಗೊಂಡಿದ್ದು, ಕುಗ್ರಾಮದಂತೆ ಕಾಣುತ್ತದೆ ಅದಕ್ಕಾಗಿ ಶಾಸಕರು ವಿಶೇಷ ಆಸಕ್ತಿ ವಹಿಸಿ ಹೆಚ್ಚು ಅನುದಾನ ಕೊಡಿಸುವ ಮೂಲಕ ಬಡಾವಣೆಯ ಅಭಿವೃದ್ದಿಗೆ ಕಾರಣಕರ್ತರಾಗಬೇಕು ಎಂದು ಮನವಿ ಮಾಡಿದರು.

ಮುಖ್ಯಾಧಿಕಾರಿ ಡಾ.ಜಯಣ್ಣ ಮಾತನಾಡಿದರು. ಪುರಸಭೆ ಮಾಜಿ ಅಧ್ಯಕ್ಷರಾದ ನರಸಿಂಹರಾಜು, ಕೆ.ಜಿ.ಸುಬ್ರಮಣ್ಯ ಸದಸ್ಯರಾದ ಶಿವುನಾಯಕ, ನಟರಾಜು, ಶಂಕರ್‌ಸ್ವಾಮಿ, ಮಾಜಿ ಸದಸ್ಯ ಕೆ.ವಿನಯ್, ಆರೋಗ್ಯ ರಕ್ಷಾ ಸಮಿತಿ ಸದಸ್ಯರಾದ ಹೆಚ್.ಹೆಚ್.ನಾಗೇಂದ್ರ, ಎಂ.ಲೋಕೇಶ್, ಕೆಂಚಿಮಂಜು, ಎಸ್.ಸಾಗರ್, ಪುರಸಭೆ ಇಂಜಿನಿಯರ್‌ಗಳಾದ ಕೆ.ಆರ್.ಚಂದ್ರಶೇಖರ್, ಸೌಮ್ಯ, ನಗರ ಕಾಂಗ್ರೆಸ್ ಅಧ್ಯಕ್ಷ ಎಂ.ಜೆ.ರಮೇಶ್, ಟಿಎಪಿಸಿಎಂಎಸ್ ನಿರ್ದೇಶಕ ಡಿ.ಸಿ.ರವಿ, ಮುಖಂಡರಾದ ಜಿ.ಎಸ್.ವೆಂಕಟೇಶ್, ಪುಟ್ಟರಾಜು, ಭಾಸ್ಕರ್, ಆದರ್ಶ, ಸಿದ್ದಪ್ಪಾಜಿ, ಪ್ರದೀಪ್‌ಕುಮಾರ್, ಡಿ.ಕೆ.ರಾಜೇಗೌಡ, ಕೃಷ್ಣೇಗೌಡ, ರಾಮಯ್ಯ, ಚಂದ್ರು, ಸಂಜಯ್‌ತಿಲಕ್, ವಸಂತ್‌ಕುಮಾರ್, ನವೀದ್, ಲಕ್ಷಿö್ಮಕಾಂತ್, ಚೆಲುವರಾಜು, ವೀರಪ್ಪ ಮತ್ತಿತರರು ಹಾಜರಿದ್ದರು.

RELATED ARTICLES
- Advertisment -
Google search engine

Most Popular