ವರದಿ : ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ: ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಪೂರಕವಾಗಿ ಕೆಲಸ ಮಾಡಲು ನಾನು ಬದ್ಧನಾಗಿದ್ದು ಸರ್ಕಾರದಿಂದ ಅಗತ್ಯ ಅನುದಾನ ತಂದು ಆದ್ಯತೆಯ ಮೇರೆಗೆ ಕಾರ್ಯ ಯೋಜನೆ ರೂಪಿಸುತ್ತೇನೆ ಎಂದು ಶಾಸಕ ಡಿ. ರವಿಶಂಕರ್ ಹೇಳಿದರು.
ಕೆ.ಆರ್.ನಗರ ತಾಲೂಕಿನ ಮಾರಿಗುಡಿ ಕೊಪ್ಪಲು ಗ್ರಾಮದಲ್ಲಿ ಭಾನುವಾರ ನಡೆದ ಕಾಲ ಭೈರವೇಶ್ವರ ದೇವಾಲಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಅಭಿವೃದ್ಧಿಗೆ ಅನುದಾನ ನೀಡುವ ವಿಚಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ-ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಪೂರಕವಾಗಿ ಸ್ಪಂದಿಸುತ್ತಿದ್ದಾರೆ ಎಂದರು.
ತಾಲೂಕಿನ ಕೆಸ್ತೂರು ಕೊಪ್ಪಲು ಏತ ನೀರಾವರಿ ಯೋಜನೆಯ ಕಾಮಗಾರಿಗೆ ಪ್ರಸಕ್ತ ಬಜೆಟ್ ನಲ್ಲಿ 50 ಕೋಟಿ ರೂಗಳನ್ನು ಮೀಸಲಿಟ್ಟಿದ್ದು ಇದಕ್ಕಾಗಿ ಎಲ್ಲರ ಪರವಾಗಿ ಸರ್ಕಾರವನ್ನು ಅಭಿನಂದಿಸುವುದಾಗಿ ತಿಳಿಸಿದ ಅವರು ಮತ್ತಷ್ಟು ಅನುದಾನ ನೀಡಲು ಸರ್ಕಾರ ಸಿದ್ಧವಿದ್ದು ಈ ವಿಚಾರದಲ್ಲಿ ನಾನು ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ ಎಂದು ಭರವಸೆ ನೀಡಿದರು.
ಮಾರಿಗುಡಿ ಕೊಪ್ಪಲು ಮತ್ತು ಸುತ್ತಮುತ್ತಲ ಗ್ರಾಮಗಳಿಗೆ ಶುದ್ಧ ಕುಡಿಯುವ ನೀರು ಸರಬರಾಜು ಮಾಡಲು ಕೆ. ಆರ್. ನಗರ ಮತ್ತು ಹುಣಸೂರು ರಸ್ತೆಯ ಎಡ ಬದಿಯಲ್ಲಿರುವ ಕೆರೆಯ ಬಳಿ ಜಾಗ ಗುರುತು ಮಾಡಿದ್ದು ಅಲ್ಲಿ ಬೃಹತ್ ಓವರ್ ಹೆಡ್ ಟ್ಯಾಂಕ್ ನಿರ್ಮಾಣ ಮಾಡಿ ಆನಂತರ ನೀರು ನೀಡಲಾಗುತ್ತದೆ ಎಂದು ಮಾಹಿತಿ ನೀಡಿದರು. ಈ ಭಾಗದ ನಾಲ್ಕಾರು ಗ್ರಾಮಗಳ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಕರ್ನಾಟಕ ಪಬ್ಲಿಕ್ ಸ್ಕೂಲ್ ಆರಂಭಿಸಲು ಚಿಂತನೆ ನಡೆಸಿದ್ದು ಈ ವಿಚಾರವನ್ನು ಶಿಕ್ಷಣ ಸಚಿವರ ಜೊತೆ ಚರ್ಚಿಸಿ ಮುಂದಿನ ಶೈಕ್ಷಣಿಕ ವರ್ಷದಿಂದ ಕಾರ್ಯಾರಂಭ ಮಾಡಿಸುತ್ತೇನೆ ಎಂದು ಭರವಸೆ ನೀಡಿದ ಶಾಸಕರು ಇದರ ಜತೆಗೆ ಮಾರಿಗುಡಿಕೊಪ್ಪಲು, ಕಾಳೇನಹಳ್ಳಿ ಮತ್ತು ಕೆಂಪನಕೊಪ್ಪಲು, ಸಂಪರ್ಕ ರಸ್ತೆ ಡಾಂಬರೀಕರಣಕ್ಕೆ ಅನುದಾನ ನೀಡಲಾಗಿದೆ ಎಂದು ಪ್ರಕಟಿಸಿದರು.
ಕ್ಷೇತ್ರದ ವ್ಯಾಪ್ತಿಗೆ ಒಳಪಡುವ ಸಾಲಿಗ್ರಾಮ ಮತ್ತು ಕೆ ಆರ್ ನಗರ ತಾಲೂಕುಗಳನ್ನು ರಾಜ್ಯ ಸರ್ಕಾರ ಬರ ಪೀಡಿತ ಪಟ್ಟಿಗೆ ಸೇರ್ಪಡೆ ಮಾಡಿದ್ದು ರೈತ ಬಾಂಧವರು ಎಫ್ ಐ ಡಿ ನೋಂದಣಿ ಮಾಡಿಸಿಕೊಂಡು ಸರ್ಕಾರದಿಂದ ಬರುವ ಪರಿಹಾರದ ಸವಲತ್ತು ಪಡೆದುಕೊಳ್ಳಬೇಕೆಂದು ಡಿ. ರವಿಶಂಕರ್ ಸಲಹೆ ನೀಡಿದರು.
ತಾಲೂಕು ಕುರುಬರ ಸಂಘದ ಅಧ್ಯಕ್ಷ ಜೆ.ಶಿವಣ್ಣ, ದೊಡ್ಡೇ ಕೊಪ್ಪಲು ಗ್ರಾ.ಪಂ.ಅಧ್ಯಕ್ಷೆ ಸವಿತಾ ಸ್ವಾಮೀಗೌಡ, ಸದಸ್ಯರಾದ ಶ್ವೇತಾ ರವಿ, ಮಹೇಶ್ ಗೌಡ, ಕೆ.ಪಿ. ಜಗದೀಶ್, ಚೌಕಹಳ್ಳಿ ಶೇಖರ್, ಮಾಜಿ ಸದಸ್ಯರಾದ ಮೋಟೆಗೌಡ, ಜವರೇಗೌಡ, ಅಪ್ಪಾಜಿಗೌಡ, ಶಾರದಾ ಶಿವರಾಂ, ಗ್ರಾಮದ ಯಜನಾನರಾದ ರಾಜೇಗೌಡ, ರಾಮೇಗೌಡ, ವೆಂಕಟೇಗೌಡ ಮತ್ತು ಇತರ ಮುಖಂಡರು ಗ್ರಾಮಸ್ಥರು ಹಾಜರಿದ್ದರು.