ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ: ಬಡತನ ಸೇರಿ ಇನ್ನಿತರ ಕಾರಣಗಳಿಂದ ಗ್ರಾಮೀಣ ಭಾಗದ ಮಕ್ಕಳಲ್ಲಿ ಅಪೌಷ್ಟಿಕತೆ ಹೆಚ್ಚಾಗಿ ರಕ್ತ ಹೀನತೆಯಿಂದ ಬಳಲುತ್ತಿರುವ ಅಂಕಿ ಅಂಶವನ್ನು ಪಡೆದ ನಮ್ಮ ಸರ್ಕಾರ ಬಾಲ್ಯದಲ್ಲಿಯೇ ನಿರ್ವಹಣೆ ಮಾಡುವ ಸಲುವಾಗಿ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ ಎಂದು ಶಾಸಕ ಡಿ.ರವಿಶಂಕರ್ ಹೇಳಿದರು.
ಕೆ.ಆರ್.ನಗರ ಪಟ್ಟಣದ ಆಂಜನೇಯ ಬಡಾವಣೆಯ ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆದ ಪೂರಕ ಪೌಷ್ಟಿಕ ಆಹಾರ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಇಂತಹಾ ಕಾರ್ಯಕ್ರಮಗಳಿಂದ ಸರ್ಕಾರಿ ಶಾಲೆಯತ್ತ ಮಕ್ಕಳಲ್ಲಿ ಆಕರ್ಷಣೆ ಹೆಚ್ಚಾಗಿ ದಾಖಲಾತಿಯೂ ಹೆಚ್ಚಾಗಲಿದೆ ಎಂದರು.
ಕಾಂಗ್ರೆಸ್ ಸರ್ಕಾರದ ಅಧಿಕಾರವಧಿಯಲ್ಲಿ ಅಕ್ಷರ ದಾಸೋಹದ ಮೂಲಕ ಮಧ್ಯಾಹ್ನ ಬಿಸಿಯೂಟ, ಆನಂತರ ಕ್ಷೀರಭಾಗ್ಯ ಯೋಜನೆಯಡಿ ಹಾಲು ವಿತರಣೆ, ಮೂರು ದಿನಗಳ ಕಾಲ ಮೊಟ್ಟೆ, ಬಾಳೆಹಣ್ಣು, ಕಡ್ಲೆಮಿಠಾಯಿ ವಿತರಿಸಲಾಗುತ್ತಿತ್ತು, ಅಜೀಂ ಪ್ರೇಮ್ ಜೀ ಪೌಂಡೇಶನ್ ಸಹಕಾರದಿಂದ ವಾರದ ೬ ದಿನಗಳ ಕಾಲ ಪೂರಕ ಪೌಷ್ಠಿಕ ಆಹಾರ ವಿತರಣೆ ಮಾಡಲಾಗುತ್ತಿದೆ ಎಂದು ಹೇಳಿದರು.
ಆರೋಗ್ಯವಂತರಾಗಿ ಸದೃಢ ಶರೀರ ಹೊಂದಿದಾಗ ಬುದ್ದಿಶಕ್ತಿಯೂ ಹೆಚ್ಚಾಗಲಿದೆ ಅದಕ್ಕಾಗಿ ತಂದಿರುವ ಈ ಕಾರ್ಯಕ್ರಮಗಳನ್ನು ಶಾಲೆಯ ಮುಖ್ಯಸ್ಥರು ಯಶಸ್ವಿಯಾಗಿ ಅನುಷ್ಠಾನ ಮಾಡಬೇಕು ಇದರ ಜತೆಗೆ ಎಸ್‌ಡಿಎಂಸಿ ಅಧ್ಯಕ್ಷರು ಮತ್ತು ಸದಸ್ಯರು ಆಗ್ಗಿಂದ್ದಾಗೆ ಶಾಲೆಗೆ ಭೇಟಿ ನೀಡಿ ಮಕ್ಕಳ ಅಹವಾಲು ಆಲಿಸಬೇಕು ಎಂದು ಸಲಹೆ
ನೀಡಿದರು.
ಸಾಲಿಗ್ರಾಮ ಮತ್ತು ಕೆ.ಆರ್.ನಗರ ತಾಲೂಕುಗಳಲ್ಲಿ ೧೫,೧೬೪ ಮಕ್ಕಳು ಇದರ ಸೌಲಭ್ಯ ಪಡೆಯಲಿದ್ದಾರೆ ಎಂದು ಮಾಹಿತಿ ನೀಡಿ ಶಾಸಕ ಡಿ.ರವಿಶಂಕರ್ ಎಲ್ಲಾ ಶಾಲೆಗಳ ಮುಖ್ಯಶಿಕ್ಷಕರು ಬಿಇಒ ಸೇರಿದಂತೆ ಶಿಕ್ಷಣ ಇಲಾಖೆಯ ಇತರ ಮುಖ್ಯಸ್ಥರೊಂದಿಗೆ ಪರಸ್ಪರ ಹೊಂದಾಣಿಕೆಯಿoದ ಕೆಲಸ ನಿರ್ವಹಿಸುವ ಮೂಲಕ ಇಲಾಖೆಯಲ್ಲಿ ಪ್ರಗತಿ
ಸಾಧಿಸಬೇಕು ಎಂದು ಸೂಚಿಸಿದರು.
ಈ ಶಾಲೆಯ ಕಾಂಪೌoಡ್ ನಿರ್ಮಾಣಕ್ಕೆ ಅಗತ್ಯ ಅನುದಾನ ನೀಡುವುದಾಗಿ ಭರವಸೆ ನೀಡಿದಲ್ಲದೆ ಈ ಬಾರಿಯ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಶೇ.೧೦೦ರಷ್ಟು ಸಾಧನೆ ಮಾಡಿರುವುದಕ್ಕಾಗಿ ಶಾಲೆಯ ಮುಖ್ಯಶಿಕ್ಷಕರು ಮತ್ತು ಶಿಕ್ಷಕರುಗಳಿಗೆ ಅಭಿನಂದನೆ ಸಲ್ಲಿಸುವುದಾಗಿ ಹೇಳಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಕೃಷ್ಣಪ್ಪ, ಅಕ್ಷರ ದಾಸೋಹ
ಸಹಾಯಕ ನಿರ್ದೇಶಕ ಸ್ವಾಮೀಗೌಡ ಮಾತನಾಡಿದರು.
ಪುರಸಭೆ ಸದಸ್ಯ ಶಂಕರ್‌ಸ್ವಾಮಿ, ಮಾಜಿ ಅಧ್ಯಕ್ಷ ನರಸಿಂಹರಾಜು, ಸದಸ್ಯ ಕೆ.ವಿನಯ್, ಸಾರ್ವಜನಿಕ ಆಸ್ಪತ್ರೆಯ ರಕ್ಷಾ ಸಮಿತಿ ಸದಸ್ಯರಾದ ಹೆಚ್.ಹೆಚ್.ನಾಗೇಂದ್ರ, ಸಾಗರ್, ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ಪ್ರಭಾಕರ್, ಉಪಾಧ್ಯಕ್ಷ ರಾಜೇಂದ್ರ, ಸದಸ್ಯರಾದ ರಾಜೇಶ್, ಸತೀಶ್‌ಅಯ್ಯಪ್ಪ, ಸಿಆರ್‌ಪಿ ಉದಯಕುಮಾರ್, ಮುಖ್ಯ ಶಿಕ್ಷಕಿ ಪುಷ್ಪಲತಾ, ಶಿಕ್ಷಕರುಗಳಾದ ಜ್ಯೋತಿಕುಮಾರ್, ರಿಜ್ವಾನ್, ಮಧುಕುಮಾರ್, ಮಂಜುನಾಥ್, ಜಗದೀಶ್ ಮತ್ತಿತರರು ಹಾಜರಿದ್ದರು.