ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ: ಸಮರ್ಪಕವಾಗಿ ಕುಡಿಯುವ ನೀರು ಸರಬರಾಜು ಮಾಡುವಲ್ಲಿ ಪುರಸಭೆ ಆಡಳಿತ ವಿಫಲಗೊಂಡಿದ್ದು, ಈ ವಿಚಾರವನ್ನು ಅಧ್ಯಕ್ಷರು ಮತ್ತು ಮುಖ್ಯಾಧಿಕಾರಿಗಳು ಗಂಭೀರವಾಗಿ ಪರಿಗಣಿಸಿ ಪಟ್ಟಣದ ಜನತೆಗೆ ಅಗತ್ಯಕ್ಕೆ ತಕ್ಕಂತೆ ನೀರು ಪೂರೈಸಲು ಕ್ರಮ ಕೈಗೊಳ್ಳಬೇಕು ಎಂದು ಸದಸ್ಯರು ಒಕ್ಕೊರಲಿನಿಂದ ಆಗ್ರಹಿಸಿದರು.
ಕೆ.ಅರ್.ನಗರ ಪಟ್ಟಣದ ಪುರಸಭೆಯ ಸಭಾಂಗಣದಲ್ಲಿ ಅಧ್ಯಕ್ಷ ಶಿವುನಾಯಕ್ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಸದಸ್ಯರಾದ ಕೋಳಿಪ್ರಕಾಶ್, ಉಮೇಶ್, ಕೆ.ಬಿ.ವೀಣಾ, ಕೆ.ಎಲ್.ಜಗದೀಶ್ ಸೇರಿದಂತೆ ಹಲವು ಸದಸ್ಯರು ಮಾತನಾಡಿ ಕುಡಿಯುವ ನೀರಿಗೆ ಸಾಕಷ್ಟು ಸಮಸ್ಯೆಯಾಗಿದ್ದು, ಜನರ ಆಕ್ರೋಶವನ್ನು ತಡೆಯಲು ಸಾಧ್ಯವಾಗುತ್ತಿಲ್ಲ. ಇದಕ್ಕೆ ಸೂಕ್ತ ಪರಿಹಾರ ನೀಡಬೇಕು ಎಂದರು.
ಇದಕ್ಕೆ ಉತ್ತರಿಸಿದ ಅಧ್ಯಕ್ಷ ಶಿವುನಾಯಕ್ ನಗರದಲ್ಲಿ ಅಧಿಕೃತವಾಗಿ ೧೧ ಸಾವಿರ ಕುಡಿಯುವ ನೀರಿನ ಸಂಪರ್ಕಪಡೆಯಲಾಗಿದ್ದು, ಅಷ್ಟೇ ಮಂದಿ ಅನಧಿಕೃತ ನಲ್ಲಿ ಸಂಪರ್ಕ ಪಡೆದಿದ್ದಾರೆ. ಇದರ ಜತೆಗೆ ಅಮೃತ್-೦೨ ಯೋಜನೆ ಕಾಮಗಾರಿ ನಡೆಯುತ್ತಿರುವುದರಿಂದ ಸಮರ್ಪಕವಾಗಿ ಕುಡಿಯುವ ನೀರು ಸರಬರಾಜು ಮಾಡಲು ಸಾಧ್ಯವಾಗುತ್ತಿಲ್ಲ. ಮುಂದಿನ ಒಂದು ವರ್ಷದೊಳಗೆ ಕಾಮಗಾರಿ ಪೂರ್ಣಗೊಳ್ಳಲಿದ್ದು, ಆನಂತರ ಕುಡಿಯುವ ನೀರಿನ ಸಮಸ್ಯೆ ನಿವಾರಣೆಯಾಗಲಿದೆ ಎಂದು ಭರವಸೆ ನೀಡಿದರು.
ಇದಕ್ಕೆ ಒಪ್ಪದ ಸದಸ್ಯರು ಕಾವೇರಿ ನದಿಯಿಂದ ಕೆ.ಆರ್.ನಗರ ಪಟ್ಟಣದವರೆಗೆ ಅಳವಡಿಸಿರುವ ಪೈಪ್‌ಲೈನ್‌ನಲ್ಲಿ ಆಗುತ್ತಿರುವ ಸೋರಿಕೆಯನ್ನು ತಡೆಗಟ್ಟಲು ಅಧಿಕಾರಿಗಳು ಮುಂದಾಗಿಲ್ಲ. ಇದರಿಂದ ಪುರಸಭೆಯ ಅಧಿಕಾರಿಗಳು ಜವಾಬ್ದಾರಿಯಿಂದ ಕೆಲಸ ಮಾಡುತ್ತಿಲ್ಲವೆಂಬುದು ಸಾಭೀತಾಗಿದ್ದು, ಅವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದ ಸದಸ್ಯರು ೨೦ ಕಿ.ಮೀ. ದೂರದಲ್ಲಿರುವ ಹುಣಸೂರಿಗೆ ನೀರು ಸರಬರಾಜು ಆಗುತ್ತಿದ್ದು, ಒಟ್ಟು ವಿಸ್ತೀರ್ಣ ೩ ಕಿ.ಮೀ. ಇದ್ದರೂ ನಗರದ ಜನತೆಗೆ ಸಮರ್ಪಕವಾಗಿ ಕುಡಿಯುವ ನೀರು ಸರಬರಾಜು ಮಾಡಲು ಸಾಧ್ಯವಾಗಿತ್ತಿಲ್ಲ ಎಂದು ಅಸಮಾದಾನ ವ್ಯಕ್ತಪಡಿಸಿದರು.
ವಾರ್ಡ್ ನಂ. ೮ರಿಂದ ೧೫ರವರೆಗೆ ಮುಖ್ಯರಸ್ತೆಗಳ ಗುಂಡಿ ಮುಚ್ಚುಮ ಕಾಮಗಾರಿಗಾಗಿ ಗುತ್ತಿಗೆದಾರ ಚಂದ್ರೇಗೌಡರಿಗೆ ೧೫ ಲಕ್ಷ ರೂ ಬಿಲ್ ಬಾಬ್ತು ಎರಡು ಲಕ್ಷ ರೂಗಳನ್ನು ಫೆ-೨೦೨೫ರಲ್ಲಿ ನೀಡಲಾಗಿದ್ದು, ಈ ಅವಧಿಯಲ್ಲಿ ಗುತ್ತಿಗೆದಾರರು ಯಾವುದೇ ಕಾಮಗಾರಿ ಮಾಡಿಲ್ಲ. ಈ ಬಗ್ಗೆ ಜಿಪಿಎಸ್ ಛಾಯಾಚಿತ್ರ ಸೇರಿದಂತೆ ಅಗತ್ಯ ದಾಖಲಾತಿ ಪಡೆಯದೆ ಪುರಸಭೆಯ ಅಕೌಂಟೆAಟ್ ಬಿಲ್ ನೀಡಿರುವುದಕ್ಕೆ ಸದಸ್ಯರಾದ ಉಮೇಶ್, ಕೆ.ಬಿ.ವೀಣಾ, ಕೆ.ಜಿ.ಸುಬ್ರಹ್ಮಣ್ಯ, ಬಿ.ಎಸ್.ತೋಂಟದಾರ್ಯ ಸೇರಿದಂತೆ ಹಲವು ಸದಸ್ಯರು ಅಸಮಾದಾನ ವ್ಯಕ್ತಪಡಿಸಿದರಲ್ಲದೆ ಈ ಕಾಮಗಾರಿಯನ್ನು ತನಿಖೆಗೆ ಒಳಪಡಿಸಿ ಆನಂತರ ಬಿಲ್ ನೀಡುವಂತೆ ನಿರ್ಣಯ ಮಾಡಬೇಕೆಂದು ಹೇಳಿದರಲ್ಲದೆ ತಪ್ಪು ಎಸಗಿರುವ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸುವಂತೆ ಸರ್ಕಾರಕ್ಕೆ ಪತ್ರ ಬರೆಯಬೇಕೆಂದು ಸಲಹೆ ನೀಡಿದರು.
ಪುರಸಭೆಯ ಅಭಿಯಂತರರು ಸೇರಿದಂತೆ ಸಿಬ್ಬಂದಿಗಳು ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಾರ್ವಜನಿಕರಿಗೆ ಉಪಯೋಗವಾಗುವಂತಹ ಕೆಲಸ ಮಾಡುವಲ್ಲಿ ವಿಫಲಗೊಂಡಿದ್ದಾರೆ. ಆದ್ದರಿಂದ ಮುಖ್ಯಾಧಿಕಾರಿಗಳು ಈ ವಿಚಾರವನ್ನು ಶಾಸಕ ಡಿ.ರವಿಶಂಕರ್ ಅವರ ಗಮನಕ್ಕೆ ತಂದು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿಗಳಿಗೆ ಪತ್ರ ಬರೆಯಬೇಕೆಂದು ಸದಸ್ಯರು ಒತ್ತಾಯಿಸಿದರು.
ಪಟ್ಟಣದ ಅಭಿವೃದ್ಧಿಯ ವಿಚಾರವಾಗಿ ಸುಮಾರು ೬೦ಕ್ಕೂ ಹೆಚ್ಚು ವಿಷಯಗಳನ್ನು ಚರ್ಚಿಸಿ ಸದಸ್ಯರ ಸಲಹೆ, ಸೂಚನೆ ಪಡೆದ ನಂತರ ಮಾತನಾಡಿದ ಅಧ್ಯಕ್ಷ ಶಿವುನಾಯಕ್ ನಗರದ ಅಭಿವೃದ್ಧಿಗೆ ನಮ್ಮ ಆಡಳಿತ ಮಂಡಳಿ ಪಕ್ಷಾತೀತವಾಗಿ ಕಂಕಣಬದ್ಧರಾಗಿದ್ದು, ಶಾಸಕರೊಂದಿಗೆ ಚರ್ಚಿಸಿ ಸರ್ಕಾರದಿಂದ ಅಗತ್ಯ ಅನುದಾನ ತಂದು ಸಮಗ್ರ ಅಭಿವೃದ್ದಿಗೆ ಶ್ರಮಿಸಲಾಗುತ್ತದೆ ಎಂದು ತಿಳಿಸಿದ್ದಲ್ಲದೆ ಪುರಸಭೆಯ ಅಧಿಕಾರಿಗಳ ವಿರುದ್ಧ ಸದಸ್ಯರು ದೂರಿರುವ ವಿಚಾರವನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು, ಮುಖ್ಯಾಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ಕ್ರಮ ವಹಿಸಲಾಗುತ್ತದೆ ಎಂದು ಭರವಸೆ ನೀಡಿದರು.
ಇದೇ ಸಂದರ್ಭದಲ್ಲಿ ಪುರಸಭೆಯ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷೆಯಾಗಿ ೯ನೇ ವಾರ್ಡಿನ ಶಾರದನಾಗೇಶ್ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಸದಸ್ಯರಾಗಿ ಅಶ್ವಿನಿಪುಟ್ಟರಾಜು, ಸರೋಜಮಹದೇವ್, ಕೆ.ಎಸ್.ಶಂಕರ್, ಸೌಮ್ಯಲೋಕೇಶ್ ಅವರನ್ನು ಮಾಡಲಾಗಿದ್ದು, ಅಧ್ಯಕ್ಷ ಶಿವುನಾಯಕ್, ಉಪಾಧ್ಯಕ್ಷೆ ಪಲ್ಲವಿಆನಂದ್, ಮುಖ್ಯಾಧಿಕಾರಿ ಬಿ.ವಿ.ವೆಂಕಟೇಶ್ ಅಭಿನಂದಿಸಿದರು.
ಸದಸ್ಯರಾದ ಕೋಳಿಪ್ರಕಾಶ್, ಸೈಯದ್‌ಸಿದ್ದಿಕ್, ಸಿ.ಉಮೇಶ್, ಕೆ.ಎಲ್.ಜಗದೀಶ್, ಸಿ.ಶಂಕರ್, ಕೆ.ಜಿ.ಸುಬ್ರಹ್ಮಣ್ಯ, ನಟರಾಜು, ಬಿ.ಎಸ್.ತೋಂಟದಾರ್ಯ, ವಸಂತಮ್ಮ, ಜಾವೀದ್‌ಪಾಷ, ಕೆ.ಪಿ.ಪ್ರಭುಶಂಕರ್, ವಹೀದಾಬಾನು, ಕೆ.ಬಿ.ವೀಣಾ ಸೇರಿದಂತೆ ಪುರಸಭೆ ಸಿಬ್ಬಂದಿಗಳು ಹಾಜರಿದ್ದರು.