ಮಡಿಕೇರಿ: ನಿರ್ಮಾಣ ಹಂತದಲ್ಲಿರುವ ತೆರೆದ ಬಾವಿಗೆ ಬಿದ್ದು ಕಾಡಾನೆಯೊಂದು ಸಾವನ್ನಪ್ಪಿದ ದಾರುಣ ಘಟನೆ ಕೊಡಗಿನ ವಿರಾಜಪೇಟೆ ಸಮೀಪದ ಪಲಂಗಾಲ ಗ್ರಾಮದಲ್ಲಿ ನಡೆದಿದೆ.
ಗ್ರಾಮ ಪಂಚಾಯತ್ ವತಿಯಿಂದ ಉದ್ಯೋಗ ಖಾತ್ರಿ ಯೋಜನೆಯಡಿ ಗ್ರಾಮದ ಖಾಸಗಿ ಜಮೀನಿನಲ್ಲಿ ಬಾವಿ ತೋಡಲಾಗುತ್ತಿತ್ತು. ೩೨ ಅಡಿಗೂ ಹೆಚ್ಚು ಆಳ ತೋಡಲಾಗಿದ್ದ ಬಾವಿಯೊಳಗೆ ಸುಮಾರು ೧೨ ರಿಂಗ್‌ಗಳನ್ನು ಹಾಕಲಾಗಿದ್ದು, ಅದನ್ನು ಮುಚ್ಚಿರಲಿಲ್ಲ. ಮೇವು ಅರಸಿ ಗ್ರಾಮಕ್ಕೆ ನುಗ್ಗಿದ ಕಾಡಾನೆ ಆಕಸ್ಮಿಕವಾಗಿ ಈ ಬಾವಿಗೆ ಬಿದ್ದಿದೆ. ತಕ್ಷಣ ಎಚ್ಚೆತ್ತುಕೊಂಡ ಅರಣ್ಯ ಇಲಾಖೆ ಅಧಿಕಾರಿಗಳು ಮಧ್ಯರಾತ್ರಿ ಘಟನಾ ಸ್ಥಳಕ್ಕೆ ತೆರಳಿದ್ದಾರೆ. ಆರ್‌ಎಫ್‌ಒ ಕಳ್ಳೀರ ದೇವಯ್ಯ ಮತ್ತಿತರರು ಸ್ಥಳಕ್ಕೆ ಭೇಟಿ ನೀಡಿ ಆನೆಯನ್ನು ರಕ್ಷಿಸಲು ಪ್ರಯತ್ನಿಸಿದ್ದಾರೆ. ಆದರೆ ರಾತ್ರಿ ವೇಳೆ ರಕ್ಷಣಾ ಕಾರ್ಯಾಚರಣೆ ವಿಫಲವಾಗಿದ್ದು, ಬೆಳಗಿನ ಜಾವ ಆನೆ ಸಾವನ್ನಪ್ಪಿದೆ.
ಮೃತಪಟ್ಟ ಆನೆ ೧೮ರಿಂದ ೨೦ ವರ್ಷದೊಳಗಿನ ಗಂಡು ಆನೆ ಎಂದು ಮೂಲಗಳು ಖಚಿತಪಡಿಸಿವೆ. ಇದೇ ಆನೆ ಇತ್ತೀಚೆಗೆ ಗ್ರಾಮ ವ್ಯಾಪ್ತಿಯಲ್ಲಿ ವಾಹನಕ್ಕೆ ಹಾನಿ ಮಾಡಿತ್ತು. ಆದರೆ, ಆನೆ ಸಾವನ್ನಪ್ಪಿದ್ದಕ್ಕೆ ಗ್ರಾಮಸ್ಥರು ಕಂಬನಿ ಮಿಡಿದಿದ್ದಾರೆ. ವಿರಾಜಪೇಟೆ ಡಿಸಿಎಫ್ ಜಗನ್ನಾಥ್ ಮಾತನಾಡಿ, ಗುಡ್ಡಗಾಡು ಪ್ರದೇಶವಾಗಿರುವುದರಿಂದ ರಕ್ಷಣಾ ಕಾರ್ಯಾಚರಣೆಗೆ ಅಡ್ಡಿಯುಂಟಾಯಿತು ಎಂದು ಹೇಳಿದರು.
ಆನೆಯನ್ನು ಬಾವಿಯಿಂದ ಮೇಲೆತ್ತಲು ಸಾಧ್ಯವಾಗದ ಕಾರಣ, ತೆರೆದ ಬಾವಿಗೆ ಮಣ್ಣು ತುಂಬಿ ಅಲ್ಲಿಯೇ ಆನೆಯನ್ನು ಮಣ್ಣು ಮಾಡಲಾಯಿತು.