ಹನಗೋಡು: ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶ ವ್ಯಾಪ್ತಿಗೆ ಕಾಡಂಚಿನ ಜಮೀನಿನಲ್ಲಿ ಅಕ್ರಮವಾಗಿ ಮುಳ್ಳು ತಂತಿ ಬೇಲಿಗೆ ಹಾಯಿಸಿದ್ದ ವಿದ್ಯುತ್ ಸ್ಪರ್ಶದಿಂದ ಗಂಡು ಕಾಡಾನೆಯೊಂದು ಸಿಲುಕಿ ಮೃತಪಟ್ಟಿರುವ ಘಟನೆ ನಡೆದಿದೆ.
ಹುಣಸೂರು ವನ್ಯಜೀವಿ ವಲಯದ ಆನೆಚೌಕೂರು ಮೀಸಲು ಅರಣ್ಯ ಪ್ರದೇಶ ವ್ಯಾಪ್ತಿಯ ಮುತ್ತೂರು ಶಾಖೆಯ ಅಂಕಣ-೦೮ರ ಗಸ್ತಿನ ಅರಣ್ಯ ವ್ಯಾಪ್ತಿಯ ಮರಳುಕಟ್ಟೆ ‘ಎ’ ಹಾಡಿಯ ನಿವಾಸಿ ಮಣಿ ಬಿನ್ ಲೇ. ಗೆಜ್ಜೆಮೇಸ್ತ್ರಿ ಯವರ ಆನೆಚೌಕೂರು ಫಾರೆಸ್ಟ್ ಸ.ನಂ-೦೨ರ ಜಮೀನಿನಲ್ಲಿ ಅಕ್ರಮವಾಗಿ ಮುಳ್ಳು ತಂತಿ ಬೇಲಿಗೆ ಹಾಯಿಸಿದ್ದ ವಿದ್ಯುತ್ ಸ್ಪರ್ಶದಿಂದ ಅಂದಾಜು ೩೦ ವರ್ಷ ಪ್ರಾಯದ ಕಾಡಾನೆಯೊಂದು ಮುಳ್ಳು ತಂತಿ ಬೇಲಿಗೆ ಸಿಲುಕಿ ಮೃತಪಟ್ಟಿರುತ್ತದೆ.

ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಹುಲಿ ಯೋಜನೆ ನಿರ್ದೇಶಕ ಹರ್ಷ ಕುಮಾರ್ ಚಿಕ್ಕನರಗುಂದ ರವರ ನಿರ್ದೇಶನದ ಮೇರೆಗೆ
ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳಾದ ದಯಾನಂದ ಸಿ. ವಲಯ ಅರಣ್ಯಾಧಿಕಾರಿ ಕೆ.ಇ. ಸುಬ್ರಮಣ್ಯರವರ ಸಮಕ್ಷಮ ಮುಖ್ಯ ಪಶುವೈದ್ಯಾಧಿಕಾರಿಗಳಾದ ಚೆಟ್ಟಿಯಪ್ಪ ಮರಣೋತ್ತರ ಪರೀಕ್ಷೆ ನಡೆಸಿ ಸದರಿ ಕಾಡಾನೆಯು ವಿದ್ಯುತ್ ಸ್ಪರ್ಶದಿಂದ ಮೃತಪಟ್ಟಿರುವುದಾಗಿ ದೃಡಪಟ್ಟಿರುತ್ತದೆ.
ಜಮೀನಿನ ಮಾಲೀಕ ಮಣಿ ಬಿನ್ ಗೆಜ್ಜೆ ಮೇಸ್ತ್ರಿ ವಿರುದ್ಧ ಪಿರಿಯಾಪಟ್ಟಣ ಪೊಲೀಸ್ ಠಾಣೆಯಲ್ಲಿ ಅಕ್ರಮವಾಗಿ ವಿದ್ಯುತ್ ಹಾಯಿಸಿರುವುದರಿಂದ ಕಾನೂನು ಕ್ರಮ ಜರುಗಿಸಲು ದೂರು ದಾಖಲಿಸಲಾಗಿದೆ.