ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ವಿರುದ್ಧದ ಗಂಭೀರ ಆರೋಪಗಳಿಗೆ ತಕ್ಕ ಉತ್ತರ ನೀಡುವ ಜತೆಗೆ, ಬಿಜೆಪಿ–ಜೆಡಿಎಸ್ ಅಧಿಕಾರದ ಅವಧಿಯಲ್ಲಾದ ಹಗರಣಗಳನ್ನು ತೆರೆದಿಡಲು ಮುಂದಾಗಿದ್ದಾರೆ. ಇಂದು ನಡೆಯುವ ‘ಕಾಂಗ್ರೆಸ್ ಜನಾಂದೋಲನ’ ಸಮಾವೇಶದಲ್ಲಿ ‘ಶಕ್ತಿ’ ಪ್ರದರ್ಶನ ಮಾಡಲಿದ್ದಾರೆ.
ಕೆಪಿಸಿಸಿಯಿಂದ ಆಯೋಜಿಸಿರುವ ಸಮಾವೇಶಕ್ಕೆ ಭರ್ಜರಿ ತಯಾರಿ ನಡೆದಿದ್ದು, ರಾಜ್ಯದ ಹಲವೆಡೆಯಿಂದ ಕಾರ್ಯಕರ್ತರು ಪಾಲ್ಗೊಳ್ಳುವ ನಿರೀಕ್ಷೆ ಇದೆ. ನಗರದಲ್ಲೇ ತಂಗಿರುವ ಮುಖ್ಯಮಂತ್ರಿ ಸಮಾವೇಶದ ಯಶಸ್ಸಿಗೆ ಅಗತ್ಯ ಕಾರ್ಯತಂತ್ರಗಳನ್ನು ರೂಪಿಸಿದರು.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಕಾಂಗ್ರೆಸ್ ನಾಯಕಿಯರಾದ ಸೋನಿಯಾ ಗಾಂಧಿ, ಪ್ರಿಯಾಂಕಾ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕಟೌಟ್‌ಗಳು ರಾರಾಜಿಸುತ್ತಿವೆ. ಸಮಾವೇಶದ ಸ್ಥಳದ ಸುತ್ತಮುತ್ತಲಿನ ವೃತ್ತ, ರಸ್ತೆಗಳಲ್ಲಿ ಹಾಗೂ ನಗರದ ಪ್ರಮುಖ ವೃತ್ತಗಳಲ್ಲಿ ಕಾಂಗ್ರೆಸ್ ಬಾವುಟಗಳು ಮತ್ತು ಬಂಟಿಂಗ್‌ಗಳನ್ನು ಕಟ್ಟಲಾಗಿದೆ.