ಮಂಗಳೂರು (ದಕ್ಷಿಣ ಕನ್ನಡ): ಸುಬ್ರಹ್ಮಣ್ಯದ ರಾಜ್ಯ ಹೆದ್ದಾರಿಯ ಕೈಕಂಬ ಬಳಿ ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ರಸ್ತೆ ಬದಿಗೆ ಮಗುಚಿ ಬಿದ್ದು ನಾಲ್ವರು ಗಾಯಗೊಂಡು ಪಾರಾದ ಘಟನೆ ಇಂದು ನಡೆದಿದೆ.
ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿ ರಾಜ್ಯ ಹೆದ್ದಾರಿ ಮೂಲಕ ಕುಕ್ಕೆ ಸುಬ್ರಹ್ಮಣ್ಯ ಬರುತ್ತಿದ್ದ ವೇಳೆ ಈ ಅಪಘಾತ ನಡೆದಿದೆ. ಈ ಘಟನೆಯಲ್ಲಿ ಮಡಿಕೇರಿ ಮೂಲಕದ ಚಾಲಕ ಪ್ರಶಾಂತ್ ಎಂಬವರು ಸೇರಿ ನಾಲ್ವರು ಗಾಯಗೊಂಡಿದ್ದಾರೆ.
ಅಪಘಾತ ನಡೆದ ಕೂಡಲೇ ಭಾರೀ ಸಂಖ್ಯೆಯಲ್ಲಿ ಜನ ಸೇರಿದ್ದು ಕಾರಿನಲ್ಲಿದ್ದವರನ್ನು ಹೊರ ತೆಗೆಯುವಲ್ಲಿ ನೆರೆದಿದ್ದವರು ಪ್ರಯತ್ನಿಸಿದ್ದಾರೆ. ಸ್ಥಳೀಯ ಆಂಬ್ಯುಲೆನ್ಸ್ ಮೂಲಕ ಗಾಯಾಳುಗಳನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ತಿಳಿದು ಬಂದಿದೆ. ಮಗುಚಿಬಿದ್ದ ಕಾರನ್ನು ತೆರವುಗೊಳಿಸುವ ಕಾರ್ಯ ನಡೆದಿದ್ದು ಕೆಲ ಹೊತ್ತು ಸಂಚಾರದಲ್ಲಿ ವ್ಯತ್ಯಯ ಉಂಟಾಗಿತ್ತು.